ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ನಿಮ್ಮ ಸೇವೆಗೆ ಒಂದು ಅವಕಾಶ ನೀಡಿ: ಗೀತಾ

Published 4 ಮೇ 2024, 15:53 IST
Last Updated 4 ಮೇ 2024, 15:53 IST
ಅಕ್ಷರ ಗಾತ್ರ

ಆನಂದಪುರ: ‘ತಂದೆ ಬಂಗಾರಪ್ಪ ಅವರಂತೆ ನಿಮ್ಮ ಸೇವೆ ಸಲ್ಲಿಸಲು ನನಗೂ ಒಂದು ಅವಕಾಶ ನೀಡಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮನವಿ ಮಾಡಿದರು.

ಆನಂದಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಂಗಾರಪ್ಪನವರು ನೀಡಿದ ಕೊಡುಗೆಗಳಾದ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿ ಅನೇಕ ಕೊಡುಗೆಗಳು ಇಂದಿಗೂ ಮುಂದುವರಿದುಕೊಂಡು ಬಂದಿವೆ. ಹಾಗೆಯೇ ನಾನು ಹೇಗೆ ಕೆಲಸ ಮಾಡುತ್ತೇನೆ ಎಂದು ನೋಡಲಿಕ್ಕಾದರೂ ಒಮ್ಮೆ ಗೆಲ್ಲಿಸಿ. ನಿಮ್ಮ ಧ್ವನಿಯಾಗಿ ಸಂಸತ್‌ನಲ್ಲಿ ಕೆಲಸ ಮಾಡುತ್ತೇನೆ’ ಎಂದು ಮತದಾರರಲ್ಲಿ ಮನವಿ ಮಾಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿರುವುದರಿಂದ ಸಾಕಷ್ಟು ಯೋಜನೆಗಳನ್ನು ತರಲು ಸಹಕಾರಿಯಾಗುತ್ತದೆ. 5 ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಇದರ ಜೊತೆಗೆ ರೈತರ ಸಾಲಮನ್ನಾ, ಮಹಿಳೆಯರಿಗೆ ₹ 1 ಲಕ್ಷ ಯೋಜನೆ ಸಹ ಜಾರಿಗೆ ಬರುತ್ತದೆ. ರಾಷ್ಟ್ರ, ರಾಜ್ಯ ಸರ್ಕಾರದ ಕೊಂಡಿಯಾಗಿ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಬಡವರ, ದಲಿತರ, ಹಿಂದುಳಿದ ವರ್ಗದವರ ಏಳಿಗೆಗೆ ಶ್ರಮಿಸಿದ ಬಂಗಾರಪ್ಪ ಅವರ ಮಗಳನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕು. ಬಂಗಾರಪ್ಪನವರಂತೆ ಸಿದ್ದರಾಮಯ್ಯ ಬಡವರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂವಿಧಾನದ ಸಮಾನತೆಯ ಹಕ್ಕನ್ನು ಬಡವರಿಗೆ ಕೊಡಿಸುವ ಉದ್ದೇಶದಿಂದಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ’ ಎಂದು ನಟ ದುನಿಯಾ ವಿಜಯ್ ಹೇಳಿದರು.

‘ಮೂರು ಬಾರಿ ಸಂಸದರಾದರೂ ರಾಘವೇಂದ್ರ ರೈತರ ಪರ ಸಂಸತ್‌ನಲ್ಲಿ ಧ್ವನಿ ಎತ್ತಲಿಲ್ಲ. ಜಿಲ್ಲೆಯಲ್ಲಿ ರಾಘವೇಂದ್ರ ಕೊಡುಗೆ ಏನೂ ಇಲ್ಲ. ರಾಷ್ಟ್ರೀಯ ಹೆದ್ದಾರಿ ಮಾಡುವುದೇ ಅವನ ಕೆಲಸವೇ. ಆ ಕೆಲಸವನ್ನು ಯಾವ ಸರ್ಕಾರವಿದ್ದರೂ ಮಾಡುತ್ತಿತ್ತು. ವಿಮಾನ ನಿಲ್ದಾಣ ಮಾಡಿರುವುದರಿಂದ ಎಲ್ಲಾರು ವಿಮಾನ ಹತ್ತಲು ಸಾಧ್ಯವೇ. ಅಪ್ಪ ಮಕ್ಕಳು ಮಾತ್ರ ಹತ್ತಲು ಸಾಧ್ಯ. ಮೂರು ಬಾರಿ ಸಂಸದರಾದರೂ ನಿಮ್ಮ ಯೋಗ್ಯತೆಗೆ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ಆಗಿಲ್ಲ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಗ್ಯಾರಂಟಿ ಯೋಜನೆಗಳಿಂದ ಅಕ್ಕ ತಂಗಿಯರು ದಾರಿ ತಪ್ಪಿಲ್ಲ. ನಿಮ್ಮ ಮಗ ರೇವಣ್ಣ ದಾರಿ ತಪ್ಪಿರುವುದು. ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಲ್ಲಿಯಾಗಿ ಮಾತನಾಡಬೇಡಿ’ ಎಂದು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕುಟುಕಿದರು.

ನಟ ಶಿವರಾಜಕುಮಾರ್, ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಸೋಮಶೇಖರ್ ಲ್ಯಾವಿಗೆರೆ, ಚೇತನ್ ರಾಜ್ ಕಣ್ಣೂರು, ನಜರುಲ್ಲಾ ಖಾನ್, ಬಸವರಾಜ್, ಉಮೇಶ್ ಎನ್, ಗಜೇಂದ್ರ ಇದ್ದರು.

ಆನಂದಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿದರು
ಆನಂದಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT