ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ, ಹೈನು, ಕುಕ್ಕುಟದಲ್ಲಿ ಯಶಸ್ಸು ಕಂಡ ಪದವೀಧರ

ವಿಜ್ಞಾನ ಪದವಿ ಪಡೆದ ಕೃಷಿಕನ ಯಶೋಗಾಥೆ
Last Updated 5 ಮೇ 2021, 5:36 IST
ಅಕ್ಷರ ಗಾತ್ರ

ಭದ್ರಾವತಿ: ‘ಸಿರಿಕಲ್ಚರ್ ಬಿ.ಎಸ್ಸಿ. ಅಂತಿಮ ವರ್ಷದಲ್ಲಿದ್ದಾಗ ಉಪನ್ಯಾಸಕರೊಬ್ಬರು ಹೇಳಿದ ಮಾತಿಗೆ ಮನಸೋತು ತಂದೆಯ ಕೃಷಿ ಜತೆಗೆ ಕೈ ಜೋಡಿಸಿದೆ. ಇಂದು ಅದರಲ್ಲಿ ಯಶಸ್ಸು ಕಾಣುವಂತಾಗಿದೆ’ ಎನ್ನುವ ಸೈಯದ್ ತೌಫಿಕ್ ಅಹಮದ್ ಅವರ ಮಾತು ಕೃಷಿ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ತೆರೆದಿಡುತ್ತದೆ.

ಭದ್ರಾವತಿ ತಾಲ್ಲೂಕು ಮಾವಿನಕೆರೆ ಗ್ರಾಮದವರಾದ ತೌಫಿಕ್‌ ಅವರು, ತಂದೆ ಸೈಯದ್ ಕರೀಂ ಅವರ ಐದು ಎಕರೆ ಬರಡು ನೆಲದಲ್ಲಿ ಭರಪೂರ ಬೆಳೆ ಬೆಳೆದು ಯಶಸ್ಸು ಕಂಡರು. ಹಂತ ಹಂತವಾಗಿ ಜಮೀನನ್ನೂ ವಿಸ್ತರಿಸಿಕೊಂಡರು. ಬಿ.ಎಸ್ಸಿ. ಓದುತ್ತಿದ್ದ ತೌಫಿಕ್ ಎಂ.ಎಸ್ಸಿ ಮಾಡುವ ಕನಸು ಹೊತ್ತಿದ್ದಾಗ ಉಪನ್ಯಾಸಕರಾದ ಚುಳುಕಿ ಅವರ ‘ಜಮೀನಿನ ಜತೆಗಿನ ಒಡನಾಟ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ’ ಎಂಬ ಮಾತಿಗೆ ಕಟ್ಟುಬಿದ್ದು ಕೃಷಿಯೆಡೆಗೆ ಮನಸ್ಸು ಮಾಡಿದರು.

ತಮ್ಮ ಐವರು ಸಹೋದರರ ಜತೆಗೆ ತಂದೆಗೆ ಸಾಥ್ ನೀಡಿದ ತೌಫಿಕ್ ಅವರು ಕುಟುಂಬದಲ್ಲಿ ಪದವಿ ಪಡೆದ ಏಕೈಕ ವ್ಯಕ್ತಿ. ಕೃಷಿ, ರೇಷ್ಮೆ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ... ಹೀಗೆ ಹತ್ತು ಹಲವು ತರಬೇತಿ ಶಿಬಿರದಲ್ಲಿ ಭಾಗವಹಿಸಿ ಕಡಿಮೆ ವೆಚ್ಚದಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಲಾಭ ಮಾಡುವುದು ಹೇಗೆ ಎಂಬುದನ್ನು ಕಲಿತು ಹೆಜ್ಜೆ ಇಟ್ಟರು ತೌಫಿಕ್‌.

ಈಗಿನ ತಮ್ಮ 20 ಎಕರೆ ಭೂಮಿಯಲ್ಲಿ ಭತ್ತ, ಅಡಿಕೆ, ಶುಂಠಿ, ರಾಗಿ, ಬಾಳೆ, ತೆಂಗು ಬೆಳೆದಿದ್ದಾರೆ. ಜತೆಗೆ 10 ಜರ್ಸಿ ಹಸು ಹಾಗೂ ಇನ್ನಿತರೆ 15 ಜಾನುವಾರುಗಳ ಮೇವಿಗಾಗಿ ಒಂದು ಎಕರೆ ಜಮೀನನ್ನು ಮೀಸಲಿಟ್ಟಿದ್ದಾರೆ.

ಪ್ರತಿದಿನ 90 ಲೀಟರ್ ಹಾಲು ಉತ್ಪಾದಿಸುವ ಅವರು ಹೈನುಗಾರಿಕೆ ಜತೆಗೆ ಕುಕ್ಕುಟ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಅವರು ಸಾಕಿರುವ ಕೋಳಿ ಮೂರು– ಮೂರೂ ವರೆ ಕೆ.ಜಿ.ಯಷ್ಟು ತೂಗುತ್ತವೆ.

ಕೃಷಿ, ಹೈನುಗಾರಿಕೆ, ಕುಕ್ಕುಟ ಉದ್ಯಮದ ಸಾಧನೆ ಗುರುತಿಸಿ ಕೃಷಿ ಇಲಾಖೆ ಜಿಲ್ಲಾ ಮಟ್ಟದಲ್ಲಿ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿಯನ್ನು ನೀಡಿದ್ದರೆ, ಇನ್ನಿತರೆ ಸಂಘ ಸಂಸ್ಥೆಗಳು ಅವರ ಸಾಧನೆ ಗುರುತಿಸಿ ಹಲವು ಪ್ರಶಸ್ತಿ ನೀಡಿ ಗೌರವಿಸಿವೆ.

ಪದವಿ ಜತೆಗೆ ಸಿಕ್ಕ ಜ್ಞಾನವನ್ನು ಕೃಷಿಗೆ ಮೀಸಲಿಟ್ಟು, ಇಡೀ ಕುಟುಂಬ ಕೃಷಿಯಲ್ಲಿ ನೆಮ್ಮದಿ ಕಾಣುವಂತೆ ಮಾಡಿದ ಕೀರ್ತಿ ಹೊತ್ತಿರುವ ತೌಸಿಫ್‌ ಅವರ ಕಾಯಕ ಇತರರಿಗೆ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT