ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಬದುಕು ಹಸನಾಗಿಸಲು ಬದ್ಧ: ಅರಬೈಲ್ ಶಿವರಾಮ್ ಹೆಬ್ಬಾರ್

ಸಂಚಾರಿ ಕ್ಲಿನಿಕ್ ಮೂಲಕ ಆರೋಗ್ಯ ತಪಾಸಣೆ: ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್
Last Updated 29 ಜೂನ್ 2022, 2:32 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಬದುಕಿನಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಹೇಳಿದರು.

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವಲಂಬಿತರಿಗೆ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ, ತರಬೇತಿ ಮತ್ತು ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ತಪಾಸಣೆಯಲ್ಲಿ 21 ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿದರೆ ಒಬ್ಬರಿಗೆ ₹12,000 ವೆಚ್ಚವಾಗುತ್ತದೆ. ಇಂತಹ ಪರೀಕ್ಷೆ ಮೊದಲ ಹಂತದಲ್ಲಿ 30,000 ಕಾರ್ಮಿಕರಿಗೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 32 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. 70 ಲಕ್ಷ ಅಸಂಘಟಿತ ಕಾರ್ಮಿಕರು ಇ– ಶ್ರಮ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದರು.

ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇಲಾಖೆಯಿಂದ 750 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ₹15,000 ಗೌರವಧನ ಮತ್ತು ₹10,000 ಬೋನಸ್ ಸೇರಿ ಒಟ್ಟು ₹25,000 ಘೋಷಿಸಿದೆ. 2,591 ಮಕ್ಕಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಹೇಳಿದರು.

‘ಕಾರ್ಮಿಕರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಅವರ ಜೀವ ಉಳಿಸುವ ಈ ಕಾರ್ಯಕ್ರಮದ ಸದುಪಯೋಗ ಎಲ್ಲರೂ ಪಡೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.

‘ಕಾರ್ಖಾನೆ, ಕಟ್ಟಡ ನಿರ್ಮಾಣ ಕಾರ್ಮಿಕರು ಮಾತ್ರವಲ್ಲ ಆಶಾ, ಅಂಗನವಾಡಿ, ಕ್ಷೌರಿಕ, ಬ್ಯೂಟಿಪಾರ್ಲರ್ ನಡೆಸುವವರು ಇ–ಶ್ರಮ್ ತಂತ್ರಾಂಶದಡಿ ಸಿಎಸ್‍ಸಿ, ಗ್ರಾಮ ಒನ್ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದು’ ಎಂದು ಸಂಚಾರಿ ಆರೋಗ್ಯ ಕ್ಲಿನಿಕ್ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ರಾಗಿಗುಡ್ಡದಲ್ಲಿ 100 ಹಾಸಿಗೆ ಸಾಮರ್ಥ್ಯದ ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, ಉತ್ತಮ ಕಾರ್ಯನಿರ್ವಹಣೆಗೆ ಮೆಗ್ಗಾನ್ ಆಸ್ಪತ್ರೆಯೊಂದಿಗೆ ಸೇರಿಸುವ ಬಗ್ಗೆ ಹಾಗೂ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಬಗ್ಗೆ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಇ–ಶ್ರಮ್ ಗುರುತಿನ ಚೀಟಿ, ಪೈಂಟ್ ಕಿಟ್ ವಿತರಿಸಲಾಯಿತು.

ಶಾಸಕರಾದ ಕೆ.ಬಿ.ಅಶೋಕನಾಯ್ಕ, ಅರುಣ್ ಡಿ.ಎಸ್, ಮೇಯರ್‌ ಸುನೀತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ದತ್ತಾತ್ರಿ ಎಸ್, ಉಪಮೇಯರ್‌ ಶಂಕರ್ ಗನ್ನಿ, ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಸದಸ್ಯರು, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಸಿಇಒ ಗುರುಪ್ರಸಾದ್ ಎಂ.ಪಿ, ಜಿಲಾಧಿಕಾರಿ ಡಾ.ಆರ್.ಸೆಲ್ವಮಣಿ, ಎಂ.ಎಲ್.ವೈಶಾಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT