ಭಾನುವಾರ, ಅಕ್ಟೋಬರ್ 24, 2021
22 °C
ಉದ್ಯೋಗ ಭರವಸೆಯೊಂದಿಗೆ ಪ್ರಾರಂಭವಾಗಿದೆ ಮಹಿಳಾ ಪಾಲಿಟೆಕ್ನಿಕ್‌

ಶಿರಾಳಕೊಪ್ಪ: ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿನಿಯರ ಕೊರತೆ

ಎಂ.ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ವಿಶಾಲವಾದ ಕ್ಯಾಂಪಸ್, ಅತ್ಯುತ್ತಮ ಕಟ್ಟಡ, ಅನುಭವಿ ಉಪನ್ಯಾಸಕ ವರ್ಗ ಇದ್ದರೂ ಪಟ್ಟಣದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ.

ವಾರ್ಷಿಕ 240 ಮಕ್ಕಳಿಗೆ ಪ್ರವೇಶ ನೀಡುವ ಅವಕಾಶವಿದ್ದರೂ ಅರ್ಧದಷ್ಟು ವಿದ್ಯಾರ್ಥಿಗಳು ಕೂಡ ಈ ಬಾರಿ ಪ್ರವೇಶ ಪಡೆಯದೆ ಇರುವುದು ಬೇಸರದ ಸಂಗತಿ.

2007– 08ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸ್ವಾವಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಪ್ರಾರಂಭವಾದ ಈ ಪಾಲಿಟೆಕ್ನಿಕ್ 5 ಎಕರೆ ವಿಶೇಷವಾದ ಕ್ಯಾಂಪಸ್ ಹೊಂದಿದೆ. ಪ್ರಸಕ್ತ ವರ್ಷದ ಆಗಸ್ಟ್‌ ತಿಂಗಳಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಎಂಬ ಹೆಸರನ್ನು ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಎಂದು ಸರ್ಕಾರ ಮರುನಾಮಕರಣ ಮಾಡಿದೆ.

ಪಾಲಿಟೆಕ್ನಿಕ್‌ ಆವರಣದಲ್ಲಿಯೇ 300 ವಿದ್ಯಾರ್ಥಿನಿಯರು ವಾಸಮಾಡಬಹುದಾದ ಬೃಹತ್ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಈ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಇ ಮತ್ತು ಸಿ ವಿಭಾಗ ಸೇರಿ ಪ್ರಾರಂಭದಲ್ಲಿ 4 ಕೋರ್ಸ್‌ಗಳಿದ್ದವು. ಈಗ ಕ್ಲೌಡ್‌ ಕಂಪ್ಯೂಟಿಂಗ್ ಹಾಗೂ ಬಿಗ್ ಡೇಟಾ ಕೋರ್ಸ್‌ ಕೂಡ ಆರಂಭವಾಗಿವೆ.

ಕುಲಸಚಿವೆ ನಾಗರತ್ನಾ ಮಾತನಾಡಿ, ‘ಡಿಪ್ಲೊಮಾ ಎಂದರೆ ಕಬ್ಬಿಣದ ಕಡಲೆ ಎಂಬ ತಪ್ಪು ಕಲ್ಪನೆ ಇದೆ. ಈಗ ಡಿಪ್ಲೊಮಾ ದುಂಬಾ ಸರಳವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ನೂತನ ಪಠ್ಯ ರಚನೆ ಆಗಿದೆ. ಇದು ವಿದ್ಯಾರ್ಥಿಗಳು ಕೋರ್ಸ್‌ ಮುಗಿದ ನಂತರ ದೇಶ, ವಿದೇಶಗಳಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗಿದೆ’ ಎಂದರು.

ಸಿವಿಲ್ ವಿಭಾಗದ ಮುಖ್ಯಸ್ಥ ರವೀಂದ್ರ ಮಾತನಾಡಿ, ‘ಡಿಪ್ಲೊಮಾದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. 3 ವರ್ಷ ಪೂರ್ಣ ಕೋರ್ಸ್‌ ಮುಗಿಸಿದರೆ ಮಾತ್ರ ಡಿಪ್ಲೊಮಾ ಪ್ರಮಾಣಪತ್ರ ಲಭಿಸುತ್ತಿತ್ತು. ಈಗ ಒಂದು ವರ್ಷ ಹಾಗೂ ಎರಡು ವರ್ಷ ಮುಗಿಸಿದವರಿಗೂ ಪ್ರತ್ಯೇಕವಾಗಿ ಪ್ರಮಾಣ ಪತ್ರ ನೀಡಲಾಗುವುದು. ಮೂರು ವರ್ಷ ಮುಗಿಸಿದವರಿಗೆ ಡಿಪ್ಲೊಮಾ ಪದವಿ ನೀಡಲಾಗುವುದು. ಇದು ಅರ್ಧದಲ್ಲಿಯೇ ಉದ್ಯೋಗ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದರು.

ಇದೇ 20ರಂದು ಪಾಲಿಟೆಕ್ನಿಕ್‌ ಪ್ರವೇಶಕ್ಕೆ ಅಂತಿಮ ದಿನವಾಗಿದೆ. ಆಸಕ್ತ ಹೆಣ್ಣುಮಕ್ಕಳು ನೇರವಾಗಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರ ಮೊಬೈಲ್‌ 94800 57999 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು