ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ| ಬಿಡಾಡಿ ದನಗಳ ಹಾವಳಿ: ನಾಗರಿಕರಿಗೆ ಕಿರಿಕಿರಿ

ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳು: ಸಾರ್ವಜನಿಕರ ಆಕ್ರೋಶ
Published 6 ಆಗಸ್ಟ್ 2023, 7:04 IST
Last Updated 6 ಆಗಸ್ಟ್ 2023, 7:04 IST
ಅಕ್ಷರ ಗಾತ್ರ

ಸೊರಬ: ನಡುರಸ್ತೆಯಲ್ಲೇ ಬೀಡು ಬಿಟ್ಟಿರುವ ಬಿಡಾಡಿ ದನಗಳು. ಮುಂದೆ ಸಾಗಲು ಪ್ರಯಾಸ ಪಡುವ ವಾಹನ ಸವಾರರು. ಭಯದಲ್ಲೇ ಹೆಜ್ಜೆ ಇಡುವ ಪಾದಚಾರಿಗಳು...

ಇದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಣಸಿಗುವ ದೃಶ್ಯ.

ಪುರಸಭೆ ವ್ಯಾಪ್ತಿಯಲ್ಲಿ ಬಿಡಾಡಿ‌ ದನಗಳ ಉಪಟಳ ಹೆಚ್ಚಾಗಿದ್ದು, ನಾಗರಿಕರು ಹಾಗೂ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಪಟ್ಟಣದ ಮುಖ್ಯ ರಸ್ತೆ, ಖಾಸಗಿ ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಬಿಡಾಡಿ ದನಗಳು ರಾಜಾರೋಷವಾಗಿ ರಸ್ತೆ ಮಧ್ಯದಲ್ಲೇ ಓಡಾಡುತ್ತಿರುತ್ತವೆ. ಇಷ್ಟಾದರೂ ಪುರಸಭೆ ಆಡಳಿತ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಈ ವಿಚಾರದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ದನಗಳು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಕುಳಿತುಕೊಳ್ಳುವುದರಿಂದ ವಾಹನ ಚಾಲಕರು ಈ ಮಾರ್ಗಗಳಲ್ಲಿ ಸಾಗಲು ಹರ ಸಾಹಸ ಪಡುವಂತಾಗಿದೆ. ರಸ್ತೆ‌ ವಿಭಜಕಗಳ ಮೇಲೆ ನಿಂತು‌ ಕಾದಾಟ ನಡೆಸುವ ಗೂಳಿಗಳು ಕೆಲವೊಮ್ಮೆ ವಾಹನಗಳಿಗೆ ಡಿಕ್ಕಿ ಹೊಡೆದ ನಿದರ್ಶನಗಳೂ ಇವೆ. ಗೂಳಿಗಳಿಂದ ಹೆದರಿ ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ. 

ಮುಖ್ಯ ರಸ್ತೆಗಳು ಕಿರಿದಾಗಿರುವುದರಿಂದ ವಾಹನ ನಿಲುಗಡೆಯ ಸಮಸ್ಯೆಯೂ ತಲೆದೋರಿದೆ. 

ಬೀದಿ ಬದಿ ವ್ಯಾಪಾರಕ್ಕೂ ತೊಂದರೆ: ಬಿಡಾಡಿ ದನಗಳ ಹಾವಳಿಯಿಂದಾಗಿ ರಸ್ತೆ ಪಕ್ಕದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವವರಿಗೂ ತೊಂದರೆಯಾಗುತ್ತಿದೆ.

ಆಹಾರ ಅರಸಿ ಒಮ್ಮೊಮ್ಮೆ ದನಗಳು ಅಂಗಡಿಯೊಳಗೆ ನುಗ್ಗುವುದರಿಂದ ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ. 

ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಲೇ ಇದೆ. ಈ ಕುರಿತು ಆಗೊಮ್ಮೆ, ಈಗೊಮ್ಮೆ ಪ್ರಕಟಣೆ ಹೊರಡಿಸುವ ಪುರಸಭೆ ಅಧಿಕಾರಿಗಳು ಬಳಿಕ ಸುಮ್ಮನಾಗಿಬಿಡುತ್ತಾರೆ. ದನಗಳ ಹಾವಳಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಮುಂದೆ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.  

ಖಾಲಿದ್
ಖಾಲಿದ್
ಅಬ್ದುಲ್ ರಶೀದ್
ಅಬ್ದುಲ್ ರಶೀದ್
ಬಿಡಾಡಿ ದನಗಳು ಅಂಗಡಿಗಳಿಗೆ ನುಗ್ಗಲು‌ ಮುಂದಾಗುತ್ತವೆ. ಓಡಿಸಿದರೆ ಹೆದರಿ ಜನರ ಮೇಲೆ ನುಗ್ಗುತ್ತವೆ. ಇವುಗಳನ್ನು ನಿಯಂತ್ರಿಸದಿದ್ದರೆ ಅಪಾಯ ನಿಶ್ಚಿತ
– ಅಬ್ದುಲ್ ರಶೀದ್ ಸಮಾಜ ಸೇವಕ
ದನಗಳ‌ ಹಾವಳಿಯಿಂದ ಅಂಗಡಿಯಲ್ಲಿನ‌ ಹಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಅಂಗಡಿ ಎದುರು‌‌ ದನಗಳ‌ ಹಿಂಡು ನೋಡಿ ಗ್ರಾಹಕರು ಬರಲು ಹಿಂದೇಟು‌ ಹಾಕುತ್ತಾರೆ. ದನಗಳ ಸ್ಥಳಾಂತರಕ್ಕೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು-
ಖಾಲಿದ್ ಹಣ್ಣಿನ ವ್ಯಾಪಾರಿ
ದನ ಕರುಗಳನ್ನು ರಸ್ತೆಗೆ ಬಿಡುವ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಸಿದ್ದಾಪುರದ ಗೋ ಶಾಲೆಗೆ ಹಸುಗಳನ್ನು ಸ್ಥಳಾಂತರಿಸುವ ಯೋಚನೆ ಇತ್ತು. ಚರ್ಮಗಂಟು ರೋಗದ ಕಾರಣ ಇದಕ್ಕೆ ಅನುಮತಿ ಸಿಕ್ಕಿಲ್ಲ. ಗೋ ಶಾಲೆ ನಿರ್ಮಾಣಕ್ಕೆ 10 ಎಕರೆ ಭೂಮಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
- ಗಿರೀಶ್ ಟಿ. ಪುರಸಭೆ ಮುಖ್ಯಾಧಿಕಾರಿ 

ವಿದ್ಯಾರ್ಥಿಗಳಿಗೂ ಸಂಕಷ್ಟ ನಾಗರಿಕರಷ್ಟೇ ಅಲ್ಲದೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ಬಿಡಾಡಿ ದನಗಳಿಂದ ಹೆಚ್ಚಿನ ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಚಿಕ್ಕ ಮಕ್ಕಳು ಶಾಲೆಗೆ ಬರಲು ಹಾಗೂ ಮನೆಗಳಿಗೆ ಹಿಂತಿರುಗಲು ಭಯ ಪಡಬೇಕಾದ ಪರಿಸ್ಥಿತಿ ಇದೆ.  ಮಾಲೀಕರಿಲ್ಲದ ದನ–ಕರುಗಳ ನಿರ್ವಹಣೆಗೆ ದೊಡ್ಡಿಯ ವ್ಯವಸ್ಥೆಯೂ ಇಲ್ಲ. ಇದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಸೂಕ್ತ ವ್ಯವಸ್ಥೆ ಕಲ್ಪಿಸುವಂತಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT