ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಜಿಲ್ಲೆಯ ಮೂವರಿಗೆ ಶೇ 100 ಅಂಕ

ಎಸ್ಸೆಸ್ಸೆಲ್ಸಿ ಫಲಿತಾಂಶ: ತೀರ್ಥಹಳ್ಳಿ ಸರ್ಕಾರಿ ಶಾಲೆಯ ಶ್ರೀಶಗೆ 625 ಅಂಕ
Last Updated 10 ಆಗಸ್ಟ್ 2021, 3:35 IST
ಅಕ್ಷರ ಗಾತ್ರ

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಜಿಲ್ಲೆಗೆ ‘ಎ’ ಗ್ರೇಡ್ ಲಭಿಸಿದೆ.

ಕೊರೊನಾ ಕಾರಣದಿಂದ ಹೊಸ ಮಾದರಿಯಲ್ಲಿ ಪರೀಕ್ಷೆ ನಡೆದಿತ್ತು. ಜಿಲ್ಲೆಯಲ್ಲಿ ಹೊಸ ವಿದ್ಯಾರ್ಥಿಗಳು 22,085, ಖಾಸಗಿ ಅಭ್ಯರ್ಥಿಗಳು 442, ಪುನರಾವರ್ತಿತ 218 ಸೇರಿ ಜಿಲ್ಲೆಯಲ್ಲಿ ಒಟ್ಟು 22,745 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

1197 ವಿದ್ಯಾರ್ಥಿಗಳಿಗೆ ಎ+ ಗ್ರೇಡ್‌: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 429 ವಿದ್ಯಾರ್ಥಿಗಳು, 768 ವಿದ್ಯಾರ್ಥಿನಿಯರು ಸೇರಿ 1,197 ವಿದ್ಯಾರ್ಥಿಗಳು ಎ+ ಗ್ರೇಡ್‌ ಪಡೆದಿದ್ದಾರೆ. 1,015 ವಿದ್ಯಾರ್ಥಿಗಳು, 1,468 ವಿದ್ಯಾರ್ಥಿನಿಯರು ಸೇರಿ 2,482 ವಿದ್ಯಾರ್ಥಿಗಳು ಎ ಗ್ರೇಡ್‌ ಪಡೆದಿದ್ದಾರೆ. 4,963 ವಿದ್ಯಾರ್ಥಿಗಳು, 5,085 ವಿದ್ಯಾರ್ಥಿನಿಯರು ಸೇರಿ 10,048 ವಿದ್ಯಾರ್ಥಿಗಳು ಬಿ ಗ್ರೇಡ್‌ ಪಡೆದಿದ್ದಾರೆ. 4,807 ವಿದ್ಯಾರ್ಥಿಗಳು, 3,519 ವಿದ್ಯಾರ್ಥಿನಿಯರು ಸೇರಿ 8,326 ವಿದ್ಯಾರ್ಥಿಗಳು ಸಿ ಗ್ರೇಡ್‌ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಡಿಡಿಪಿಐ ಎನ್‌.ಎಂ.ರಮೇಶ್‌ ತಿಳಿಸಿದ್ದಾರೆ.

ಮೂವರು ಟಾಪರ್: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರಿಗೆ 625ಕ್ಕೆ 625 ಅಂಕ ಬಂದಿದೆ. ತೀರ್ಥಹಳ್ಳಿ ತಾಲ್ಲೂಕಿನ ತನಿಕಲ್‌ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ವಿದ್ಯಾರ್ಥಿ ಬಿ.ಎಸ್‌.ಶ್ರೀಶಾ, ಸಾಗರದ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಅಭೀಷ ಭಟ್‌, ಶಿವಮೊಗ್ಗ ಗೋಪಾಳದ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ವಿನಯ್‌ ಜಿ.ಹೆಬ್ಬಾರ್ 625 ಅಂಕ ಪಡೆದಿದ್ದಾರೆ.

ಸರ್ಕಾರಿ ಶಾಲೆ ಹುಡುಗನಿಗೆ 625 ಅಂಕ: ತೀರ್ಥಹಳ್ಳಿ ತಾಲ್ಲೂಕಿನ ತನಿಕಲ್‌ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ವಿದ್ಯಾರ್ಥಿ ಬಿ.ಎಸ್‌. ಶ್ರೀಶಾ 625 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾನೆ. ತೀರ್ಥಹಳ್ಳಿ ತಾಲ್ಲೂಕು ಬೆಟ್ಟ ಬಸರವಾನಿ ಗ್ರಾಮದ ಬಿ.ಎ.ಸತೀಶ್‌, ಸಿ.ಎಸ್‌.ವೀಣಾ ದಂಪತಿಯ ಪುತ್ರ.

ಪೂರ್ಣಂಕ ಪಡೆದ ಕೃಷಿ ಕುಟುಂಬದ ಬಾಲಕಿ: ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಪಡೆದಿರುವ ಸಾಗರದ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಅಭೀಷ ಭಟ್‌ ಕೃಷಿ ಕುಟುಂಬದ ಬಾಲಕಿ. ತಂದೆ ಸಾಗರ ತಾಲ್ಲೂಕು ಮಡಸೂರು ಗ್ರಾಮದ ಎಂ.ಎನ್.ಶ್ರೀಪಾಲ್‌, ತಾಯಿ ಸಂಧ್ಯಾ ಗೃಹಿಣಿ.

625 ಅಂಕ ಪಡೆದ ಮತ್ತೊಬ್ಬ ವಿದ್ಯಾರ್ಥಿ ಶಿವಮೊಗ್ಗ ಗೋಪಾಳದ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ವಿನಯ್‌ ಜಿ. ಹೆಬ್ಬಾರ್, ಕೆ.ಗಣೇಶ್‌ ಹಬ್ಬಾರ್, ಜಿ.ಡಿ.ವೇದಾವತಿ ದಂಪತಿಯ ಪುತ್ರ.

ಪರಿಶ್ರಮಕ್ಕೆ ತಕ್ಕ ಫಲ
ಹೊಸ ಮಾದರಿ ಪರೀಕ್ಷೆ ಪ್ರಕಾರ ಒಂದು ಉತ್ತರ ತಪ್ಪಾದರೆ ಎರಡು ಅಂಕ ಕಡಿಮೆ ಯಾಗುತ್ತದೆ. ಕನ್ನಡದಲ್ಲಿ ಒಂದು ಉತ್ತರ ತಪ್ಪಾದರೆ ಎರಡೂವರೆ ಅಂಕ ಕಡಿಮೆಯಾಗುತ್ತಿದೆ. ಆ ಭಯ ಇತ್ತು. ಆದರೆ, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಶಿಕ್ಷಕರ ಮಾರ್ಗದರ್ಶನ, ಕುಟುಂಬ ಸದಸ್ಯರ ಪ್ರೋತ್ಸಾಹ ಸಾಧನೆಗೆ ಕಾರಣ.
-ವಿನಯ್ ಜಿ. ಹೆಬ್ಬಾರ್, ಶಿವಮೊಗ್ಗ

ಪ್ರೋತ್ಸಾಹದಿಂದ ಹೆಚ್ಚು ಅಂಕ
ಹೊಸ ಮಾದರಿಯಲ್ಲಿ ಪರೀಕ್ಷೆ ಎಂದಾಗ ಹೇಗೋ ಏನೋ ಎಂದು ಭಯ ಇತ್ತು. ಆದರೆ, ಪರೀಕ್ಷೆ ಪೂರ್ವದಲ್ಲಿ ಹೆಚ್ಚು ಅಭ್ಯಾಸ ನಡೆಸಿದ್ದೆ. ಮನೆಯಲ್ಲಿ ಓದಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕ ಕಾರಣ ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿದೆ.
– ಅಭಿಷಾ ಭಟ್‌, ಸಾಗರ

ಶಿಕ್ಷಕರ ಮಾರ್ಗದರ್ಶನ: ಉತ್ತಮ ಅಂಕ
ಆರಂಭದಿಂದಲೂ ಸರ್ಕಾರಿ ಶಾಲೆಯಿಂದಲೇ ಓದಿರುವೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ ಎಂಬ ಕೀಳರಿಮೆಯೂ ಇರಲಿಲ್ಲ. ಶ್ರಮವಹಿಸಿ ನಿರಂತರ ಅಭ್ಯಾಸ ಮಾಡುತ್ತಿದ್ದೆ. ಪರೀಕ್ಷೆ ವೇಳೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೆ. ಶಿಕ್ಷಕರ ಮಾರ್ಗದರ್ಶದಿಂದ ಯಾವುದೂ ಕಷ್ಟ ಎನಿಸಲಿಲ್ಲ. ಪರೀಕ್ಷೆಯಲ್ಲಿ 625 ಅಂಕ ಬಂದಿರುವುದು ಖುಷಿ ಕೊಟ್ಟಿದೆ.
– ಬಿ.ಎಸ್‌. ಶ್ರೀಶಾ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT