ಗುರುವಾರ , ಆಗಸ್ಟ್ 11, 2022
23 °C

ಡಾ.ಕಸ್ತೂರಿ ರಂಗನ್ ವರದಿ ಅನುಷ್ಠಾನ ತಡೆಯಲು ರಾಜ್ಯ ಸರ್ಕಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಡಾ.ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರ ತಡೆಯಬೇಕು. ರಾಷ್ಟ್ರೀಯ ಹಸಿರು ಪೀಠಕ್ಕೆ ಪುನರ್ ಪರಿಶೀಲನಾ ಪ್ರಮಾಣಪತ್ರ ಸಲ್ಲಿಸಲು ವಿನಂತಿಸಬೇಕು ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಸಂಚಾಲಕ ಬಿ.ಎ.ರಮೇಶ್‌ ಹೆಗ್ಡೆ ಒತ್ತಾಯಿಸಿದರು.

2014ರ ಲೋಕಸಭಾ ಚುನಾವಣೆ ವೇಳೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯದಲ್ಲಿ ಡಾ.ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ನೀಡಿದ ಭರವಸೆ ಸುಳ್ಳಾಗಿದೆ.
ನಾಲ್ಕು ಬಾರಿ ಕೇಂದ್ರ ಸರ್ಕಾರ ರಾಜ್ಯದ 1,573 ಗ್ರಾಮಗಳನ್ನು ಒಳಗೊಂಡ ಪಶ್ಚಿಮಘಟ್ಟ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ ಅಧಿಸೂಚನೆ ಹೊರಡಿಸಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕೇಂದ್ರದ ಅರಣ್ಯ ಹಾಗೂ ಪರಿಸರ ಸಚಿವ ಪ್ರಕಾಶ್ ಜಾವಡೆಕರ್ ಅವರು ರಾಷ್ಟ್ರೀಯ ಹಸಿರು ಪೀಠಕ್ಕೆ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರ ಫಲವಾಗಿ ಹಸಿರು ಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
2014ರಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಲ್ಲ. ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ನಾಯಕರಿಗೆ ಚುನಾವಣಾ ಸಮಯದಲ್ಲಿ ಕಸ್ತೂರಿ ರಂಗನ್ ವರದಿ ನೆನಪಾಗುತ್ತದೆ. ಈಗ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಪ್ರಸ್ತಾಪಿಸಿರುವುದು ಹಾಸ್ಯಾಸ್ಪದ. ಕೇಂದ್ರ ಸರ್ಕಾರ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿಕೆ ನೀಡಿದೆ. ಆದರೆ, ರಾಜ್ಯ ಬಿಜೆಪಿ ನಾಯಕರು ಈ ವರದಿ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ವಿರೋಧಾಭಾಸದ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದರು.

ಬಿ.ವೈ.ರಾಘವೇಂದ್ರ ಅವರು ಸಂಸದರಾಗಿ 7 ವರ್ಷ ಕಳೆದರೂ, ಒಮ್ಮೆಯೂ ಲೋಕಸಭಾ ಅಧಿವೇಶನದಲ್ಲಿ ವರದಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರಲ್ಲಿ ಈ ವರದಿ ತಿರಸ್ಕರಿಸುವಂತೆ ಕ್ಯಾಬಿನೆಟ್ ನಿರ್ಣಯ ಕೈಗೊಂಡು ಕೇಂದ್ ಪರಿಸರ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೂ, ಕೇಂದ್ರ ಪ್ರಮಾಣಪತ್ರ ಸಲ್ಲಿಸಿತ್ತು ಎಂದು ಖಂಡಿಸಿದರು.

ಅಧಿಸೂಚನೆಯಿಂದ ಕೈಬಿಡುವಂತೆ ಹೊಸದಾಗಿ ಪ್ರಮಾಣಪತ್ರ ಸಲ್ಲಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಇಲ್ಲದಿದ್ದರೆ ಸಂಪೂರ್ಣ ಜವಾಬ್ದಾರಿಯನ್ನು ಯಡಿಯೂರಪ್ಪ, ರಾಘವೇಂದ್ ಅವರೇ ಹೊಣೆಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಕ್ಕೇರಿ ರಮೇಶ್, ಜೆ.ಸುರೇಂದ್ರ, ಹೊಳೆಮಡಿಲು ವೆಂಕಟೇಶ್, ಸುಂದರೇಶ್, ರಾಮಕೃಷ್ಣ ಭಟ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು