ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಕು ಬಿಟ್ಟಿದೆ ಸಾಲಬಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿ

Last Updated 26 ಅಕ್ಟೋಬರ್ 2021, 20:09 IST
ಅಕ್ಷರ ಗಾತ್ರ

ಸಾಲಬಾಳು (ನ್ಯಾಮತಿ): ರಾಜ್ಯದಾದ್ಯಂತ ಸೋಮವಾರ ಆರಂಭವಾದ 1ರಿಂದ 5ನೇ ತರಗತಿಗಳಿಗೆ ಮಕ್ಕಳು ಸಂಭ್ರಮದಿಂದ ಹಾಜರಾದರು. ಆದರೆ, ತಾಲ್ಲೂಕಿನ ಸಾಲಬಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಆ ಸಂಭ್ರಮವಿರಲಿಲ್ಲ. ಭೀತಿಯಿಂದಲೇ ಹಾಜರಾಗಬೇಕಾಯಿತು.

ತಾಲ್ಲೂಕಿನ ವಿವಿಧ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಶಾಲೆಗೆ ವಿಶೇಷವಾಗಿ ಬರಮಾಡಿಕೊಂಡರು. ಸಾಲಬಾಳು ಗ್ರಾಮದ ಶಾಲೆಯಲ್ಲಿ ಯಾವುದೇ ಸಿದ್ಧತೆ ಕಂಡುಬರಲಿಲ್ಲ.

ಬಂಜಾರ ಸಮುದಾಯದವರೇ ಹೆಚ್ಚು ವಾಸವಾಗಿರುವ ಗ್ರಾಮದಲ್ಲಿ ಶಾಲೆ ನಿರ್ಮಾಣವಾಗಿ ಆರು ದಶಕ ಕಳೆದಿವೆ. ಕೊಠಡಿಗಳ ಗೋಡೆಗಳು ಮತ್ತು ಚಾವಣಿ ಬಿರುಕು ಬಿಟ್ಟಿದ್ದು, ಮಳೆ ಬಂದಾಗ ಸೋರುತ್ತದೆ. ಈಚೆಗೆ ಸುರಿದ ಮಳೆಯಿಂದ ಗೋಡೆಗಳು ತೊಯ್ದಿದ್ದು, ಯಾವುದೇ ಸಂದರ್ಭದಲ್ಲೂ ಅನಾಹುತ ಸಂಭವಿಸಬಹುದು ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದರು.

ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 28 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಶಿಕ್ಷಕರು ಇದ್ದಾರೆ. 5ನೇ ತರಗತಿಗೆ ಒಬ್ಬನೇ ವಿದ್ಯಾರ್ಥಿ ಇದ್ದ ಕಾರಣ ಪೋಷಕರು ಬೇರೆಡೆ ಸೇರಿಸಿದ್ದಾರೆ. ಬಿಸಿಯೂಟ ತಯಾರಿಸುವ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಎಲ್ಲಾ ತರಗತಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಲೆಯಲ್ಲಿ ಶೌಚಾಲಯವಿದ್ದರೂ ನೀರಿಲ್ಲ. ಶಾಲೆಯ ಜಾಗಕ್ಕೆ ಕಾಂಪೌಂಡ್‌ ನಿರ್ಮಿಸದಿರುವುದರಿಂದ ಸಾರ್ವಜನಿಕರು, ರೈತರ ಎತ್ತಿನಗಾಡಿ, ದನಕರು ಸಂಚರಿಸುವ ಮಾರ್ಗವಾಗಿದೆ. ಎಸ್‌ಡಿಎಂಸಿ ಸಮಿತಿ ಇದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಕ್ಕೆ ಸುಸಜ್ಜಿತ ಶಾಲಾ ಕೊಠಡಿ, ಕಾಂಪೌಂಡ್‌ ನಿರ್ಮಿಸಲು ಇಲಾಖೆ ಹಾಗೂ ಶಾಸಕರಿಗೆ ಸಾಕಷ್ಟು ಮನವಿ ಮಾಡಿದರೂ ಉಪಯೋಗವಾಗಿಲ್ಲ. ಸಂಬಂಧಿಸಿದವರು ಗಮನಹರಿಸಬೇಕು ಎಂದು ಗ್ರಾಮದ ಹಿರಿಯರಾದ ಎಸ್.ಎನ್. ಗೋಪಾಲನಾಯ್ಕ, ತಾವರೆನಾಯ್ಕ, ಎಸ್.ಎನ್. ಹೂವನಾಯ್ಕ, ಬಿ. ಕುಮಾರನಾಯ್ಕ ಮನವಿ ಮಾಡಿದ್ದಾರೆ.

ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಸಾಲಬಾಳು ಶಾಲೆಗೆ ಕೊಠಡಿ ಮರು ನಿರ್ಮಾಣ, ದುರಸ್ತಿಗೆ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿ ಮತ್ತು ನ್ಯಾಮತಿ ತಾಲ್ಲೂಕು ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಕೆ.ಇ.ರಾಜೀವ, ಕ್ಷೇತ್ರ ಶಿಕ್ಷಣಾಧಿಕಾರಿ, ನ್ಯಾಮತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT