ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಕ್ರಮಕ್ಕೆ ಡಿಸಿ ಸೂಚನೆ

Published 24 ಮಾರ್ಚ್ 2024, 15:25 IST
Last Updated 24 ಮಾರ್ಚ್ 2024, 15:25 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅಚ್ಚುಕಟ್ಟಾಗಿ ಜಾರಿಗೊಳಿಸಬೇಕು. ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಯೋಜಿತ ಅಧಿಕಾರಿಗಳೊಂದಿಗೆ ಚುನಾವಣಾ ತಯಾರಿ ಕುರಿತು ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಚೆಕ್‍ಪೋಸ್ಟ್‌ಗಳಲ್ಲಿ ಸಮರ್ಪಕವಾಗಿ ವಾಹನಗಳ ಪರಿಶೀಲನೆ ನಡೆಸಬೇಕು. ಈ ವೇಳೆ ಸಂಚಾರ ದಟ್ಟಣೆ ಆಗದಂತೆ ಕ್ರಮ ವಹಿಸಬೇಕು. ಪರಿಶೀಲನೆ ವೇಳೆ ₹ 50,000ಕ್ಕಿಂತ ಹೆಚ್ಚು ಹಣ ಸಾಗಿಸುತ್ತಿದ್ದರೆ ಅಂತಹ ವಾಹನವನ್ನು ವಶಪಡಿಸಿಕೊಂಡು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಬೇಕು. ವಾಹನಗಳಲ್ಲಿ ಅಕ್ರಮ ಹಣ, ಪಕ್ಷದ ಗುರುತಿರುವ ಬಟ್ಟೆ, ಸೀರೆ ಇತರೆ ಕೊಡುಗೆಗಳು, ಕಿಟ್‍ಗಳ ಸಾಗಾಣಿಕೆ ಕಂಡು ಬಂದರೆ ಅವುಗಳನ್ನು ವಶಪಡಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ಸೆಕ್ಟರ್ ಅಧಿಕಾರಿಗಳು, ಎಸ್‍ಎಸ್‍ಟಿ ತಂಡ, ವಿಎಸ್‍ಟಿ ತಂಡ, ಎಫ್‍ಎಸ್‍ಟಿ ತಂಡಗಳು, ಎಂಸಿಸಿ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ಪೊಲೀಸರು ಹಾಗೂ ಇತರೆ ಚುನಾವಣಾ ನಿಯೋಜಿತ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು.

ಅಂಚೆ ಮತಪತ್ರಗಳಿಗೆ ಸಂಬಂಧಿಸಿದಂತೆ ಫಾರ್ಮ್ 12ಡಿ ವಿತರಣೆ ಮಾಡಬೇಕು. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿ–ವಿಜಿಲ್ ಗೆ ಬರುವ ದೂರುಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಬೇಕು. ಸುವಿದಾ ತಂತ್ರಾಂಶದ ಮೂಲಕ ರಾಜಕೀಯ ಪಕ್ಷಗಳ ಕಾರ್ಯಕ್ರಮ, ವಾಹನಗಳಿಗೆ ಅನುಮತಿ ನೀಡಬೇಕು. ಆರ್‌ಟಿಒ ಮತ್ತು ಪೋಲಿಸ್  ಅಧಿಕಾರಿಗಳು ಮೋಟಾರು ವಾಹನ ಪ್ರಕರಣಗಳನ್ನು ಎಚ್ಚರಿಕೆಯಿಂದ ಗಮನಿಸಿ ಪ್ರಕರಣ ದಾಖಲಿಸಬೇಕು ಎಂದರು.

ಮತಗಟ್ಟೆ ಸಿಬ್ಬಂದಿಗಾಗಿ ಮತದಾರರ ಅನುಕೂಲ ಕೇಂದ್ರ, ಪಿವಿಸಿ ಫಾರ್ ಎವಿಇಎಸ್ ಕೆಟಗರಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ತಿಳಿದುಕೊಂಡು ಕ್ರಮ ಕೈಗೊಳ್ಳಬೇಕು. ಸ್ಟ್ರಾಂಗ್‍ ರೂಂ ತಯಾರಿ ಮಾಡಿಕೊಂಡು 24x7 ಸಿಸಿಟಿವಿ ವ್ಯವಸ್ಥೆ ಹಾಗೂ ಪೊಲಿಸ್ ಭದ್ರತೆ ಮಾಡಬೇಕು.

ಇವಿಎಂ ಮತ್ತು ವಿವಿ ಪ್ಯಾಟ್‍ಗಳ ರ್ಯಾಂಡಮೈಸೇಶನ್ ಮತ್ತು ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇವಿಎಂಗಳನ್ನು ಪೊಲೀಸ್ ಬೆಂಗಾವಲಿನೊಂದಿಗೆ ಜಿಪಿಎಸ್ ಅಳವಡಿಸಿದ ವಾಹನಗಳ ಮೂಲಕ ಮಾತ್ರ ಸಾಗಿಸಬೇಕು. ಎಲ್ಲಾ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಕಳುಹಿಸುವ ಮೊದಲು ಇಎಂಎಸ್ ಅಪ್ಲಿಕೇಷನ್ ಮೂಲಕ ಸ್ಕ್ಯಾನ್ ಮಾಡಬೇಕು. ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಸಂಗ್ರಹಿಸಿ, ಸ್ಟ್ರಾಂಗ್ ರೂಂಗಳನ್ನು ಅವರ ಉಪಸ್ಥಿತಿಯಲ್ಲಿ ಸೀಲ್ ಮಾಡಬೇಕು. ಈ ಕಾರ್ಯದ ಸಂಪೂರ್ಣ ವಿಡಿಯೊ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಎಡಿಸಿ ಸಿದ್ದಲಿಂಗ ರೆಡ್ಡಿ, ಎಸಿ ಯತೀಶ್ ಕುಮಾರ್ ಹಾಜರಿದ್ದರು.

ಅಕ್ರಮ ಮದ್ಯ ವಶ: ಐದು ಪ್ರಕರಣ ದಾಖಲು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಮಾರ್ಚ್‌ 23ರಂದು ವಿವಿಧ ಚೆಕ್‍ಪೋಸ್ಟ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ₹ 2488 ಮೊತ್ತದ 5.94 ಲೀ ಹಾಗೂ ಅಬಕಾರಿ ಇಲಾಖೆಯಿಂದ ₹ 5360 ಮೊತ್ತದ 10.72 ಲೀ ಒಟ್ಟು ₹ 7448 ಮೊತ್ತದ 16.66 ಲೀ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ  ಐದು ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT