ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ಕಾರ್ಖಾನೆ ಉಳಿಸುವ ಜವಾಬ್ದಾರಿ ಕೇಂದ್ರದ್ದು: ಶಾಸಕ ಬಿ.ಕೆ.ಸಂಗಮೇಶ್ವರ

Last Updated 29 ಜನವರಿ 2023, 5:29 IST
ಅಕ್ಷರ ಗಾತ್ರ

ಭದ್ರಾವತಿ: ‘ವಿಐಎಸ್ಎಲ್ ಉಳಿಸುವುದು ಕೇಂದ್ರ ಸರ್ಕಾರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಹೊಣೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ನಾನು ಎಂಪಿಎಂ ಪುನರಾರಂಭಿಸುತ್ತೇನೆ. ಇಲ್ಲವಾದಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ಹೇಳಿದರು.

ವಿಐಎಸ್‍ಎಲ್ ಮತ್ತು ಎಂಪಿಎಂ ಉಳಿವಿಗಾಗಿ ಸರ್ವ ಸಮಾಜದ ಸಂಘ ಸಂಸ್ಥೆಗಳ, ಕಾರ್ಮಿಕರ ಪೂರ್ವಭಾವಿ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ವಿಐಎಸ್ಎಲ್ ಉಳಿಸಲು ಅಗತ್ಯವಿರುವ ಕಬ್ಬಿಣದ ಅದಿರಿನ ಗಣಿಯನ್ನು ನಾನು ಕೊಟ್ಟ ಮಾತಿನಂತೆ ಹಿಂದೆ ನಮ್ಮ ಕಾಂಗ್ರೆಸ್‌ ಸರ್ಕಾರದ ಅಧಿಕಾರಾವಧಿಯಲ್ಲಿ ಕೊಡಿಸಿದ್ದೇನೆ. ಆದರೆ ಅದಕ್ಕೆ ಅಗತ್ಯವಾದ ಬಂಡವಾಳ ಹೂಡಿ ಉಳಿಸಬೇಕಾದ ಕರ್ತವ್ಯ ಕೇಂದ್ರ ಸರ್ಕಾರದ್ದಾಗಿದೆ. ಗುತ್ತಿಗೆ ಕಾರ್ಮಿಕರು ವಿಐಎಸ್‍ಎಲ್ ಉಳಿಸಲು ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು. ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ನಗರಸಭೆಯ ಎಲ್ಲಾ ವಾರ್ಡಿನ ಚುನಾಯಿತ ಸದಸ್ಯರು ಕಾರ್ಖಾನೆಯ ಮುಂದೆ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಒಂದೊಂದುದಿನ ಕುಳಿತು ಹೋರಾಟಗಾ
ರರಿಗೆ ಬೆಂಬಲ ನೀಡಬೇಕು’ ಎಂದರು.

‘ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ . ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಕಾರ್ಖಾನೆ ಸ್ಥಾಪಿಸುವ ಮೂಲಕ ಸಾವಿರಾರು ಕುಟುಂಬಕ್ಕೆ ಕೆಲಸ ನೀಡಿ ಲಕ್ಷಾಂತರ ಜನರಿಗೆ ಜೀವನಕ್ಕೆ ಆಧಾರ ಮಾಡಿದರು. ಆದರೆ ಇಂದು ನಮ್ಮನ್ನಾಳುವವರು ವಿದೇಶಿ ಕಂಪೆನಿಗಳಿಗೆ ಮಣೆಹಾಕಲು ಅವರನ್ನು ಸ್ವಾಗತಿಸುತ್ತಾ, ನಮ್ಮವರೇ ಸ್ಥಾಪಿಸಿದ ದೇಶಿಯ ಕಾರ್ಖಾನೆ ವಿಐಎಸ್‍ಎಲ್‍ ಮುಚ್ಚಲು ಆದೇಶಿಸಿ ಕಾರ್ಮಿಕರಿಗೆ ಕೆಲಸವಿಲ್ಲದಂತೆ ಮಾಡುತ್ತಾ ಜನರ ಜೀವನಕ್ಕೆ ಹಾಳುಮಾಡುತ್ತಿದ್ದಾರೆ’ ಎಂದು ಹಿರಿಯ ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಹೇಳಿದರು.

ಕಾರ್ಮಿಕ ಮುಖಂಡ ಕಾಳೆಗೌಡ, ತಾಲ್ಲೂಕು ಕಾಂಗ್ರೆಸ್‌ ಘಟಕದ ಅಧ್ಯಕ್ಷ ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಷಡಾಕ್ಷರಿ, ನಗರಸಭಾ ಅಧ್ಯಕ್ಷೆ ಅನುಸುಧಾ ಮೋಹನ್, ಉಪಾಧ್ಯಕ್ಷ ಚೆನ್ನಪ್ಪ, ಆಮ್ಆದ್ಮಿ ಪಕ್ಷದ ಮುಖಂಡ ರವಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ವಿಐಎಸ್‍ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿದರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಬಾಷಾ ನಿರೂಪಿಸಿದರು.

‘ನಾಮಪತ್ರ ಸಲ್ಲಿಸದೆ ಹೋರಾಟ ಬೆಂಬಲಿಸಿ’

‘ವಿಐಎಸ್ಎಲ್ ಉಳಿವಿಗಾಗಿ ನಡೆಸುತ್ತಿರುವ ಈ ಹೋರಾಟ ಕಾರ್ಖಾನೆ ಉಳಿದು ಮುಂದಿನ ಪೀಳಿಗೆಗೂ ಅದು ಜೀವನಾಧಾರವಾಗಿ ಬೆಳೆಯಲಿ ಎಂಬ ಉದ್ಧೇಶ ಹೊಂದಿದೆ. ಕಾರ್ಖಾನೆ ಉಳಿಯಲೆಬೇಕಾದರೆ ಮುಂಬರುವ ಚುನಾವಣೆಯನ್ನು ನಾವು ಬಹಿಷ್ಕರಿಸಬೇಕು’ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹೇಳಿದರು.

‘ಶಾಸಕ ಸಂಗಮೇಶ್ವರ ನಮಗೆ ಬೆಂಬಲ ನೀಡುವುದೇ ನಿಜವಾದರೆ ಅವರು ಬರಲಿರುವ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸದೇ ನಮ್ಮ ಹೊರಾಟಕ್ಕೆ ಬೆಂಬಲವಾಗಿ ನಿಂತು ವಿಐಎಸ್ ಎಲ್ ಉಳಿಸಿದರೆ ನಾವು ಎಂದೆಂದಿಗೂ ಅವರ ಜೊತೆ ನಿಲ್ಲುತ್ತೇವೆ’ ಎಂದು
ಹೇಳಿದರು.

ಇದಕ್ಕೆ ಶಾಸಕ ಸಂಗಮೆಶ್ವರ ತಮ್ಮ ಭಾಷಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT