ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಕಾಂಗ್ರೆಸ್‌, ಬಿಜೆಪಿಯಲ್ಲಿ ಬಿರುಕು ಮೂಡಿಸಿದ ಎಂಡಿಎಫ್ ವಿವಾದ!

Last Updated 20 ಜುಲೈ 2022, 4:29 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ (ಎಂಡಿಎಫ್‌) ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ವಿಷಯದಲ್ಲಿ ಉದ್ಭವವಾದ ವಿವಾದ ಎರಡು ಪಕ್ಷಗಳ ಮುಖಂಡರ ನಡುವಿನ ಬಿರುಕಿಗೆ ಕಾರಣವಾಗಿರುವ ವಿದ್ಯಮಾನ ಹಲವು ದಿನಗಳಿಂದ ಚರ್ಚೆಗೆಗ್ರಾಸಒದಗಿಸಿದ್ದು, ಭಿನ್ನ ಧ್ವನಿಗೆ ದಾರಿಯಾಗಿದೆ.

ಕಳೆದ ಮಾರ್ಚ್ 17ರಂದು ನಡೆದ ಎಂಡಿಎಫ್‌ನ ಸರ್ವಸದಸ್ಯರ ಸಭೆಯಲ್ಲಿ ಹೊಡೆದಾಟ ನಡೆದು ಎರಡೂ ಬಣಗಳು ತಾವೇ ಸಂಸ್ಥೆಯ ಪದಾಧಿಕಾರಿಗಳು ಎಂದು ಪ್ರತಿಪಾದಿಸುತ್ತಿವೆ. ಈ ವಿವಾದ ಹೈಕೋರ್ಟ್ ಮೆಟ್ಟಿಲನ್ನೂ ಏರಿದೆ.

ಎಂಡಿಎಫ್ ಸರ್ವಸದಸ್ಯರ ಸಭೆಗೆ ಶಾಸಕ ಹರತಾಳು ಹಾಲಪ್ಪ ಹೋಗಿದ್ದು ಸರಿಯೇ, ತಪ್ಪೇ ಎನ್ನುವುದರೊಂದಿಗೆ ಆರಂಭಗೊಂಡ ರಾಜಕೀಯ ಸಮರ, ಪರಸ್ಪರ ಆರೋಪ– ಪ್ರತ್ಯಾರೋಪಗಳಿಗೆ ವೇದಿಕೆ ಸೃಷ್ಟಿಸಿದೆ.

‘ಅಂದಿನ ಸಭೆಗೆ ಹಾಲಪ್ಪ ಅವರು ಹೋಗದೆ ಇದ್ದರೆ ಎಂಡಿಎಫ್‌ನ ಆಗಿನ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್ ಅವರನ್ನು ಬಲವಂತವಾಗಿ ವೇದಿಕೆಯಿಂದ ಕೆಳಗಿಳಿಸಿ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ ಅಧ್ಯಕ್ಷರಾಗುತ್ತಿದ್ದರು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ಬಹಿರಂಗವಾಗಿಯೇ ಹೇಳಿದ್ದಾರೆ. ಆ ಮೂಲಕ ಶಾಸಕ ಹಾಲಪ್ಪ ಸಭೆಗೆ ಬಂದದ್ದನ್ನು ಅವರು ಸಮರ್ಥಿಸಿದ್ದಾರೆ.

ಆದರೆ, ಎಂಡಿಎಫ್ ವಿಷಯದಲ್ಲಿ ಹಾಲಪ್ಪ ಅವರು ಹಸ್ತಕ್ಷೇಪ ಮಾಡಿರುವುದು ಖಂಡನೀಯ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದ್ದು, ‘ಹಾಲಪ್ಪ ಅವರ ಎದುರೇ ಸರ್ವ ಸದಸ್ಯರ ಸಭೆಯಲ್ಲಿ ಹಲ್ಲೆ
ಪ್ರಕರಣ ನಡೆದಿದ್ದು, ಇದಕ್ಕೆ ಅವರ ಕುಮ್ಮಕ್ಕೇ ಕಾರಣ’ ಎಂದೂ ಆರೋಪಿಸಿದ್ದಾರೆ.

‘ಎಂಡಿಎಫ್ ಸಭೆಗೆ ರಾಜಕೀಯ ಮುಖಂಡರು ಹೋಗಬಾರದು ಎಂಬ ಸೂಚನೆಯನ್ನು ಪಕ್ಷದ ವರಿಷ್ಠರು ನೀಡಿದ್ದರು. ಆದಾಗ್ಯೂ ಹಾಲಪ್ಪ ಅವರು ಸಭೆಗೆ ಹೋಗಿದ್ದು ಏಕೆಂದು ಅರ್ಥವಾಗುತ್ತಿಲ್ಲ’ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎನ್. ಶ್ರೀಧರ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನ ಬಿ.ಆರ್. ಜಯಂತ್ ಎಂಡಿಎಫ್ ವಿವಾದದಲ್ಲಿ ಹರನಾಥ ರಾಯರ ಗುಂಪಿನ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಆದರೆ, ಅದೇ ಪಕ್ಷದ ಬೇಳೂರು ಹಾಗೂ ಮಲ್ಲಿಕಾರ್ಜುನ ಹಕ್ರೆ, ಅನಿತಾಕುಮಾರಿ ಅವೆರು ಶ್ರೀಪಾದ ಹೆಗಡೆ ನಿಸರಾಣಿ ಗುಂಪಿನ ಪರವಾಗಿ ಇದ್ದಾರೆ.

ಶಾಸಕ ಹಾಲಪ್ಪ ಅವರು ಹರನಾಥ ರಾಯರೇ ಎಂಡಿಎಫ್‌ನ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದಿದ್ದರೂ, ಬಿಜೆಪಿಯ ಕೆ.ಎನ್. ಶ್ರೀಧರ್, ಬಿ.ಎಚ್. ರಾಘವೇಂದ್ರ, ಸಂಘ ಪರಿವಾರದ ಅ.ಪು. ನಾರಾಯಣಪ್ಪ ಅವರು ಶ್ರೀಪಾದ ಹೆಗಡೆ ಅವರನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದಾರೆ.

ಎಂಡಿಎಫ್ ವಿವಾದದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಸಹಮತ ಕಾಣುತ್ತಿಲ್ಲ. ಈ ಎರಡೂ ಪಕ್ಷಗಳಲ್ಲೂ ಸರಿ– ತಪ್ಪುಗಳ ಬಗ್ಗೆ ಭಿನ್ನ ನಿಲುವು ವ್ಯಕ್ತವಾಗುತ್ತಿ ರುವುದು ಎಂಡಿಎಫ್ ವಿವಾದ ಮತ್ತಷ್ಟು ಜಟಿಲವಾಗುವ ಸೂಚನೆ ನೀಡಿದೆ.

***

ನಾನು ಯಾವುದೇ ಪಕ್ಷದ ವ್ಯಕ್ತಿಯಾಗಿ ಎಂಡಿಎಫ್ ವಿವಾದದಲ್ಲಿ ಕಾಣಿಸಿಕೊಂಡಿಲ್ಲ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಆಡಳಿತ ಶುದ್ಧ ಹಸ್ತದವರ ಕೈಯಲ್ಲಿರಬೇಕು ಎಂಬುದು ನನ್ನ ಆಶಯವಾಗಿದೆ.

ಬಿ.ಆರ್.ಜಯಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಸಾಗರ

***

ಎಂಡಿಎಫ್‌ಗೆ ಯಾರು ಪದಾಧಿಕಾರಿಯಾಗಬೇಕು ಎನ್ನುವ ಬಗ್ಗೆ ನಾನು ಆಸಕ್ತಿ ವಹಿಸಿಲ್ಲ. ಆದರೆ, ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಶಾಸಕರ ಎದುರೇ ಹಲ್ಲೆ ನಡೆದರೂ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂಬ ಕಾರಣಕ್ಕೆ ನಾನು ಹೇಳಿಕೆ ನೀಡಿದ್ದೇನೆ.

-ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ

***

ಶಾಸಕ ಹಾಲಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶಕ್ಕೆ ಕೆಲವರು ಎಂಡಿಎಫ್ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ. ಸಂಸ್ಥೆಯ ಹಿಂದಿನ ಅಧ್ಯಕ್ಷರ ಕೋರಿಕೆಯ ಮೇರೆಗೆ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಅವರಿಂದ ಯಾವ ತಪ್ಪೂ ಆಗಿಲ್ಲ.

-ತನ್ ರಾಜ್ ಕಣ್ಣೂರು, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT