ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ವಿಮಾನ ನಿಲ್ದಾಣ | ಕುವೆಂಪು ಹೆಸರು ಘೋಷಣೆಗೆ ಮಾತ್ರ ಸೀಮಿತ

Published 7 ಡಿಸೆಂಬರ್ 2023, 5:08 IST
Last Updated 7 ಡಿಸೆಂಬರ್ 2023, 5:08 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂ‍ಪು ಅವರ ಹೆಸರು ಇಡುವ ಪ್ರಸ್ತಾವ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ. ನೂತನ ವಿಮಾನ ನಿಲ್ದಾಣ ಉದ್ಘಾಟನೆ ಆಗಿ 9 ತಿಂಗಳು ಕಳೆದರೂ ನಾಮಕರಣ ಪ್ರಕ್ರಿಯೆ ಇಲ್ಲಿಯವರೆಗೂ ಅಧಿಕೃತವಾಗಿ ನಡೆದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಸೋಗಾನೆಯ ನೂತನ ವಿಮಾನ ನಿಲ್ದಾಣವನ್ನು 2023ರ ಫೆಬ್ರುವರಿ 27ರಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವ ಬಸವರಾಜ ಬೊಮ್ಮಾಯಿ ಸರ್ಕಾರದ ಪ್ರಸ್ತಾವವನ್ನು ಬಿ.ಎಸ್‌.ಯಡಿಯೂರಪ್ಪ ತಳ್ಳಿ ಹಾಕಿದ್ದರು. ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡುವಂತೆ ಸೂಚಿಸಿದ್ದರು.

ನಂತರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂದು ಘೋಷಣೆ ಮಾಡಿದ್ದರು. ಇದೇ ವೇಳೆ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕನ ಹೆಸರು ಇಡುವ ವಿಚಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಆದರೆ, ಈ ಎರಡೂ ಘೋಷಣೆಗಳು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಶಿವಮೊಗ್ಗ– ಭದ್ರಾವತಿ ನಗರಗಳ ಮಧ್ಯೆ ಇರುವ ಸೋಗಾನೆ ಬಳಿ ₹ 449.22 ಕೋಟಿ ವೆಚ್ಚದಲ್ಲಿ 778.62 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ತಲೆ ಎತ್ತಿದೆ. ಆದರೆ, ಈಗಲೂ ವಿಮಾನ ನಿಲ್ದಾಣದ ಆವರಣದಲ್ಲಿನ ಎಲೆಕ್ಟ್ರಾನಿಕ್ ನಾಮಫಲಕ, ಅಧಿಕೃತ ವೆಬ್‌ಸೈಟ್ ಹಾಗೂ ಟಿಕೆಟ್ ಮೇಲೆ ಈಗಲೂ ಶಿವಮೊಗ್ಗ ವಿಮಾನ ನಿಲ್ದಾಣ ಎಂಬ ಹೆಸರೇ ಮುದ್ರಿತವಾಗುತ್ತಿದೆ.

ಅಧಿಕೃತ ಸುತ್ತೋಲೆ ಇಲ್ಲ

‘ಶಿವಮೊಗ್ಗ ವಿಮಾನ ನಿಲ್ದಾಣ ರಾಜ್ಯ ಸರ್ಕಾರದ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಒಡೆತನದಲ್ಲಿದೆ. ಹಿಂದಿನ ಸರ್ಕಾರ ಇದ್ದಾಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರು ಇಡುವ ಕಾರ್ಯ ನಡೆದಿತ್ತು. ಸರ್ಕಾರ ಬದಲಾಗಿದ್ದರಿಂದ ಆ ಪ್ರಕ್ರಿಯೆ ಸ್ಥಗಿತಗೊಂಡಿದೆ’ ಎಂದು ಇಲ್ಲಿನ ವಿಮಾನ ನಿಲ್ದಾಣದ ಉಸ್ತುವಾರಿ ಹೊಂದಿರುವ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡುವಂತೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಪ್ರಸ್ತಾವ ಸಲ್ಲಿಸಬೇಕಿದೆ. ಅದಕ್ಕೆ ಸಂಪುಟ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆಯಲಾಗುತ್ತದೆ. ನಮ್ಮ ವಿಮಾನ ನಿಲ್ದಾಣಕ್ಕೆ ನಾವು ಹೆಸರು ಇಟ್ಟುಕೊಳ್ಳಲು ಕೇಂದ್ರದ ಒಪ್ಪಿಗೆ ಏನೂ ಬೇಕಿಲ್ಲ. ಈಗ ಸರ್ಕಾರ ಬದಲಾಗಿರುವುದರಿಂದ ಹೊಸದಾಗಿ ಯಾರಾದರೂ ಪ್ರಸ್ತಾವ ಸಲ್ಲಿಸಿದಲ್ಲಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ತಿಳಿಸಿದರು.

‘ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಲಿ’

ರಾಷ್ಟ್ರಕವಿ ಕುವೆಂಪು ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಸಾಹಿತಿ. ಅವರ ಹೆಸರನ್ನು ಬರೀ ಘೋಷಣೆಗೆ ಸೀಮಿತವಾಗಿಸುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ದಿನದಂದೇ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿನ ನಾಮಫಲಕ ಅಳವಡಿಸಬೇಕಿತ್ತು. ವಿಮಾನ ನಿಲ್ದಾಣದ ಎಲ್ಲ ವಹಿವಾಟಿನಲ್ಲೂ ಕುವೆಂಪು ಅವರ ಹೆಸರು ಇರಬೇಕಿತ್ತು ಎಂದು ಇಲ್ಲಿನ ಶಾಂತವೇರಿ ಗೋಪಾಲಗೌಡ ಅಧ್ಯಯನ ಟ್ರಸ್ಟ್‌ನ ಮುಖ್ಯಸ್ಥ ಕಲ್ಲೂರು ಮೇಘರಾಜ್ ಹೇಳುತ್ತಾರೆ. ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಇಡಲು ಮೂಲ ಸೌಕರ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಲಿ ಎಂದು ಒತ್ತಾಯಿಸುತ್ತಾರೆ.

ವಿಮಾನ ನಿಲ್ದಾಣವನ್ನು ಕುವೆಂಪು ಅವರ ಹೆಸರಲ್ಲಿ ಕರೆಯುವಂತೆ ಇಲ್ಲವೇ ಆ ಹೆಸರಿನ ನಾಮಫಲಕ ಅಳವಡಿಸುವಂತೆ ನಮಗೆ ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ಅಧಿಕೃತ ಆದೇಶ ಇಲ್ಲವೇ ಸುತ್ತೋಲೆ ಬಂದಿಲ್ಲ.
ಶಮಂತ್, ಶಿವಮೊಗ್ಗ ವಿಮಾನ ನಿಲ್ದಾಣದ ಮುಖ್ಯಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT