ಗುರುವಾರ , ಮೇ 19, 2022
21 °C
ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಹೇಳಿಕೆ

ಭಗವಂತನ ಸಾಕ್ಷಾತ್ಕಾರ ಜೀವನದ ಮುಖ್ಯ ಉದ್ದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮನುಷ್ಯ ಜೀವನದ ಮುಖ್ಯ ಉದ್ದೇಶ ಭಗವಂತನ ಸಾಕ್ಷಾತ್ಕಾರ. ಮಾನವನ ಅಂತರಂಗ ಶುದ್ಧಿಯಾಗಿ ದಿವ್ಯತೆಯಿಂದ ದೊರಕುವ ಸಾರ್ಥಕಭಾವದಿಂದ ಮಾತ್ರ ಜೀವನದಲ್ಲಿ ಸುಖ, ನೆಮ್ಮದಿ ಕಾಣಲು ಸಾಧ್ಯ ಎಂದು ಬೆಂಗಳೂರಿನ ಬಸವನಗುಡಿಯಲ್ಲಿನ ರಾಮಕೃಷ್ಣ ಮಠದ ಅಧ್ಯಕ್ಷ  ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಹೇಳಿದರು.

ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಭಾನುವಾರ ನಡೆದ ಭಗವಾನ್ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಲೋಕಾರ್ಪಣೆ ಮತ್ತು ಭಾವಚಿತ್ರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪ್ರಸ್ತುತ ಮನುಷ್ಯ ಇಂದ್ರಿಯ ಮತ್ತು ಜಡ ವಸ್ತುವಲ್ಲಿ ಸುಖವನ್ನು ಕಾಣುವ ಧಾವಂತದಲ್ಲಿದ್ದಾನೆ. ಸೇವೆ, ಅಂತರಂಗ ಶುದ್ಧಿ ಹಾಗೂ ಸತ್ಕಾರ್ಯಗಳಿಂದ ದೊರೆಯುವ ಆತ್ಮ ಪ್ರಸನ್ನ ಭಾವದಿಂದ ಬದುಕು ಸಾರ್ಥಕ ಆಗುತ್ತದೆ ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.

ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ‘ಪ್ರಸ್ತುತ ಮನುಷ್ಯನ ಮನಸ್ಸಿನಲ್ಲಿ ರಾಗ, ದ್ವೇಷ
ಗಳು ಹೆಚ್ಚಾಗಿ ಸಾಮಾಜಿಕ ಸ್ವಾಥ್ಯ ಹದಗೆಟ್ಟು ಮಾನಸಿಕ ನೆಮ್ಮದಿ ಹಾಳಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಧಾರ್ಮಿಕ ಕೇಂದ್ರಗಳ ಅವಶ್ಯಕತೆ ಹೆಚ್ಚಾಗಿದೆ. ಮನಸ್ಸಿಗೆ ನೆಮ್ಮದಿ ನೀಡುವಲ್ಲಿ ಧಾರ್ಮಿಕ ಕೇಂದ್ರಗಳ ಪಾತ್ರ ಹಿರಿದು’ ಎಂದರು.

ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ‘ಭಾರತದ ಧಾರ್ಮಿಕ ಪರಂಪರೆ ಸದೃಢವಾಗಿರುವುದರಿಂದ ಬ್ರಿಟಿಷರು, ಮೊಘಲರು ಸೇರಿ ಹಲವರು ದಾಳಿ ನಡೆಸಿದರೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಯಾವುದೇ ಧಕ್ಕೆಯಾಗದೆ ಇಂದಿಗೂ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಬಣ್ಣಿಸಿದರು.

ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ನಮ್ಮ ದೇಶದ ಭವ್ಯ ಪರಂಪರೆಯನ್ನು ವಿದೇಶೀಯರಿಗೆ ತಿಳಿಸುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಮಹತ್ವದ್ದು. ಯತಿಗಳು ಹಾಗೂ ಮಾತಾಜಿಗಳ ಆಗಮನದಿಂದ ಈ ಭೂಮಿ ಪಾವನ ಆಗಿದೆ’ ಎಂದರು.

ಗದಗ- ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ‘ರಾಮಕೃಷ್ಣ ಪರಮಹಂಸರ ಪ್ರತಿ
ಯೊಂದು ಮಾತು ಬದುಕಿಗೆ ತಿರುವು ನೀಡಬಲ್ಲ ವೇದವಾಕ್ಯವಾಗಿದೆ. ವ್ಯಕ್ತಿಗೆ ಮರುಹುಟ್ಟು ನೀಡಿ ಭವಿಷ್ಯ ಬೆಳಗುವುದೇ ನಿಜವಾದ ಶಿಕ್ಷಣ’ ಎಂ‌ದರು.

ಇದಕ್ಕೂ ಮುನ್ನ ಪ್ರಾಣ ಪ್ರತಿಷ್ಠಾಪನೆಯನ್ನು ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಹಾಗೂ ಮಂದಿರದ ಲೋಕಾರ್ಪಣೆಯನ್ನು ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ನೆರವೇರಿಸಿದರು. ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವಿನಯಾನಂದ ಸರಸ್ವತಿ, ಡಾ.ಬಿ.ಎಂ. ಚಿಕ್ಕಸ್ವಾಮಿ, ದಾವಣಗೆರೆ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್, ಪ್ರಮುಖರಾದ ಕೆ.ವಿ. ವಸಂತಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು