ಗುರುವಾರ , ಮೇ 13, 2021
24 °C
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ, ಪರಿಶೀಲನೆ

ಲಸಿಕಾ ಉತ್ಸವ; ಪ್ರತಿದಿನ 10 ಸಾವಿರ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಕೋವಿಡ್ ಲಸಿಕಾ ಉತ್ಸವಕ್ಕೆ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಲಸಿಕಾ ಕಾರ್ಯ ಭರದಿಂದ ಸಾಗಿದೆ. ‘ನಿಮ್ಮ ರಕ್ಷಣೆ–ನಮ್ಮ ಬದ್ಧತೆ’ ಧ್ಯೇಯವಾಕ್ಯದೊಂದಿಗೆ ಮೊದಲ ಹಂತದಲ್ಲಿ ಆರಂಭಿಸಿರುವ ನಾಲ್ಕು ದಿನಗಳ ಕೋವಿಡ್ ಲಸಿಕಾ ಉತ್ಸವದ ಮೂಲಕ ಲಸಿಕೆ ನೀಡುವ ಪ್ರಗತಿಗೆ ಹೆಚ್ಚಿನ ವೇಗ ದೊರೆಯುತ್ತದೆ. ಶಿವಮೊಗ್ಗಕ್ಕೆ ಕೋವಿಡ್ ಲಸಿಕೆ ಬಂದ ನಂತರ  ಜನರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆಯುತ್ತಿದ್ದಾರೆ. 45 ವರ್ಷ ಮೇಲ್ಪಟ್ಟ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುವ 1.32 ಲಕ್ಷ ಜನರು ಲಸಿಕೆ ಪಡೆದಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಕೋವಿಡ್ ಲಸಿಕಾ ಉತ್ಸವದಲ್ಲಿ ಪ್ರತಿದಿನ ಕನಿಷ್ಠ 10 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಎಲ್ಲೆಡೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕಾ ಉತ್ಸವ ಆರಂಭವಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನರಿಗೆ ಉಚಿತವಾಗಿ ನೀಡಲಾಗುವುದು. ಉತ್ಸವದ ನಂತರವೂ ಪ್ರತಿದಿನ 15 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಲಸಿಕೆ ಅಭಿಯಾನದ ಜತೆಗೆ, ಕೋವಿಡ್‌ ಪರೀಕ್ಷೆಯನ್ನೂ ಹೆಚ್ಚಿಸಲಾಗಿದೆ. ಪ್ರತಿ ದಿನ ಎರಡು ಸಾವಿರಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಕೋವಿಡ್‌ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ನಾಗರಾಜ್ ನಾಯ್ಕ ಇದ್ದರು.

ಲಸಿಕಾ ಕಾರ್ಯ ಪರಿಶೀಲನೆ: ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌. ವೈಶಾಲಿ ಮತ್ತು ಅಧಿಕಾರಿಗಳ ತಂಡ ಜಿಲ್ಲೆಯ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕುವ ಕಾರ್ಯ ವೀಕ್ಷಿಸಿತು. ಸಾಗರ ತಾಲ್ಲೂಕಿನ ಎಂ.ಎಲ್. ಹಳ್ಳಿ, ಸೊರಬ ತಾಲ್ಲೂಕಿನ ಉಳವಿ, ನಿಸರಾಣಿ, ಹೊಸಬಾಳೆ, ಚಂದ್ರಗುತ್ತಿ ಮತ್ತು ಹರಿಶಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಉಚಿತ ಲಸಿಕೆ ನೀಡುತ್ತಿರುವ ಬಗ್ಗೆ ಪರಿಶೀಲಿಸಿದರು.

ಮಾರುಕಟ್ಟೆ, ಬಸ್‌ ನಿಲ್ದಾಣ, ವಾಣಿಜ್ಯ ಕೇಂದ್ರಗಳಿಗೆ ಭೇಟಿ ನೀಡಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಅಂತರ ಕಾಪಾಡಿಕೊಳ್ಳುವುದು ಮತ್ತಿತರ ಕೋವಿಡ್‌ ನಿಯಮಗಳ ಪಾಲನೆಯ ಕುರಿತು ಜನ ಜಾಗೃತಿ ಮೂಡಿಸಿದರು.

ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಜನ ಜಾಗೃತಿ ಮೂಡಿಸಲು ಶ್ರಮಿಸಬೇಕು. ನಿಯಮ ಪಾಲಿಸದ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಬೇಕು. ಕೋವಿಡ್‌ ಲಸಿಕೆ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು