ಶನಿವಾರ, ಸೆಪ್ಟೆಂಬರ್ 18, 2021
27 °C
ಗರ್ಭಿಣಿಯರು ಸ್ಕ್ಯಾನಿಂಗ್‍ಗಾಗಿ ದೂರದ ತಾಲ್ಲೂಕು ಕೇಂದ್ರಗಳಿಗೆ ಹೋಗುವ ಸ್ಥಿತಿ

ಆನವಟ್ಟಿ ಆರೋಗ್ಯ ಕೇಂದ್ರದಲ್ಲಿಲ್ಲ ಮಕ್ಕಳ ತಜ್ಞರು

ರವಿ ಆರ್.ತಿಮ್ಮಾಪುರ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ಹಾಗೂ ಮಕ್ಕಳ ತಜ್ಞರು ಇಲ್ಲದೆ ಗರ್ಭಿಣಿಯರು ಹಾಗೂ ಬಾಣಂತಿಯರು ದೂರದ ಶಿರಸಿ, ಸಿದ್ಧಾಪುರ, ಶಿಕಾರಿಪುರ, ಸಾಗರ, ಶಿವಮೊಗ್ಗ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಹಲವು ದಶಕಗಳಿಂದಲೂ ಇದೆ.

ಆನವಟ್ಟಿಯ ಸುತ್ತಲ ಗ್ರಾಮಗಳಲ್ಲಿ ಮಕ್ಕಳಿಗೆ ಜ್ವರ, ಶೀತ, ಭೇದಿಯಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಕೊರೊನಾ 3ನೇ ಅಲೆಯ ಭಯ ಸೃಷ್ಟಿಯಾಗಿದೆ.

ಆರೋಗ್ಯ ಕೇಂದ್ರದಲ್ಲಿ ಐವರು ವೈದ್ಯರ ನೇಮಕಾತಿಗೆ ಅವಕಾಶವಿದ್ದು, ಈಗ ಮೂವರು ವೈದ್ಯರು ಲಭ್ಯವಿದ್ದಾರೆ. ಅರವಳಿಕೆ ತಜ್ಞ ಹಾಗೂ ಮಕ್ಕಳ ತಜ್ಞರ ಕೊರತೆ ಕಾಡುತ್ತಿದೆ. 

‘ಆನವಟ್ಟಿ ಆರೋಗ್ಯ ಕೇಂದ್ರದಲ್ಲಿ ಮೊದಲ ಹೆರಿಗೆ ಮಾಡಿಸುತ್ತಿಲ್ಲ. ಮೊದಲ ಹೆರಿಗೆ ನಾರ್ಮಲ್ ಆಗಿದ್ದರೆ ಮಾತ್ರ, ಎರಡನೇ ಹೆರಿಗೆ (ಕೆಲವೊಂದು) ಮಾಡಿಸುತ್ತಿದ್ದಾರೆ. ರಾತ್ರಿ ವೇಳೆ ಹೆರಿಗೆ ರೋಗಿ ಬಂದರೆ ಶಿಕಾರಿಪುರಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸುತ್ತಾರೆ. ಇಂತಹ ಪರಿಸ್ಥಿತಿಗೆ ಯಾವಾಗ ಕೊನೆ ಸಿಗುತ್ತದೆ’ ಎಂದು ಪ್ರಶ್ನೆ ಮಾಡುತ್ತಾರೆ ನೊಂದ ಮಹಿಳೆಯರು.

‘ನನ್ನ ಪತ್ನಿ ಗರ್ಭಿಣಿಯಾಗಿದ್ದು, ಸ್ಕ್ಯಾನಿಂಗ್ ಮಾಡಿಸಲು ಕೂಲಿ ಕೆಲಸ ಬಿಟ್ಟು ಅವಳೊಂದಿಗೆ ಶಿರಸಿಗೆ ಹೋಗಬೇಕು. ಇದೊಂದೇ ಕಾರಣಕ್ಕೆ ಅಲ್ಲ. ಆರೋಗ್ಯದಲ್ಲಿ ಸಮಸ್ಯೆಯಾದರೆ ಮತ್ತೆ ಮತ್ತೆ ಆಸ್ಪತ್ರೆಗೆ ಹೋಗುತ್ತಲೇ ಇರಬೇಕು. ಇದರಿಂದ ನನ್ನ ದುಡಿಮೆ ಹಾಳಾಗುತ್ತದೆ. ಜತೆಗೆ ಆಸ್ಪತ್ರೆಗೆ ಹಣ ಖರ್ಚಾಗಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಆನವಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಹಾಗೂ ಮಕ್ಕಳ ವೈದ್ಯರು ಇದ್ದರೆ ನನ್ನ ಕೂಲಿ ಕೆಲಸವೂ ನಡೆಯುತ್ತದೆ. ಬಸ್‍ನಲ್ಲಿ ಪ್ರಯಾಣ ಮಾಡಿ, ಗರ್ಭಿಣಿ ಆಯಾಸಪಟ್ಟು ಕೊಳ್ಳುವುದೂ ತಪ್ಪುತ್ತದೆ’ ಎನ್ನುತ್ತಾರೆ ಎಲೆಕ್ಟ್ರಕಲ್ ದಿನಗೂಲಿ ಕೆಲಸ ಮಾಡುವ ಅನಿಲ.

‘ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ಸಿಬ್ಬಂದಿ ಹಾಗೂ ಕೆಲ ವೈದ್ಯರು ಜನರಿಗೆ ಗೌರವ ನೀಡದೆ ಬೇಕಾಬಿಟ್ಟಿ ಮಾತನಾಡುತ್ತಾರೆ. ಆಸ್ಪತ್ರೆಗೆ ಯಾಕೆ ಬಂದಿದ್ದೇವೆ ಅನ್ನಿಸುವ ಹಾಗೆ ವರ್ತಿಸುತ್ತಾರೆ. ಇಂತಹ ವರ್ತನೆಗಳಿಗೆ ಕಡಿವಾಣ ಹಾಕಬೇಕು. ಬಡವರು, ಕೂಲಿ ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರ ಹಲವು ಸೌಲಭ್ಯ ಕಲ್ಪಿಸಿದೆ. ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಹೆಚ್ಚು ಜನರು ಬರುವಂತೆ ಸಿಬ್ಬಂದಿ ಹಾಗೂ
ವೈದ್ಯರು ಸೇವೆ ನೀಡುವ
ಅವಶ್ಯಕತೆ ಇದೆ’ ಎನ್ನುತ್ತಾರೆ ಸ್ಥಳೀಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು