ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಗೆ ಪ್ರಮಾಣಪತ್ರ ನೀಡಲು ವಿಳಂಬ: ಆರಗ ಪ್ರತಿಭಟನೆ

ತಹಶೀಲ್ದಾರ್‌ ಕೊಠಡಿ ಬಾಗಿಲಿನಲ್ಲೇ ಕುಳಿತು ಶಾಸಕರ ಆಕ್ರೋಶ
Published 19 ಜೂನ್ 2024, 14:39 IST
Last Updated 19 ಜೂನ್ 2024, 14:39 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ ಜಾತಿ ಪ್ರಮಾಣಪತ್ರ ನೀಡಲು ನಾಲ್ಕು ತಿಂಗಳಿಂದ ಅಧಿಕಾರಿಗಳು ಸತಾಯಿಸುತ್ತಿರುವುದನ್ನು ಖಂಡಿಸಿ ಶಾಸಕ ಆರಗ ಜ್ಞಾನೇಂದ್ರ ಬುಧವಾರ ತಹಶೀಲ್ದಾರ್‌ ಕೊಠಡಿ ಬಾಗಿಲಿನಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿಗೆ ಬುಧವಾರ ದಿಢೀರ್‌ ಭೇಟಿ ನೀಡಿದ ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಾಚಿಕೆ ಇಲ್ಲದ ಇಂತಹ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ತಕ್ಷಣ ಪ್ರಮಾಣಪತ್ರ ವಿತರಿಸಲು ಕ್ರಮ ಕೈಗೊಳ್ಳದಿದ್ದರೆ ಇಲ್ಲಿಂದ ಎದ್ದು ಹೋಗಲ್ಲ ಎಂದು ಎಚ್ಚರಿಕೆ ನೀಡಿದರು.

ನಾಲ್ಕು ತಿಂಗಳಿನಿಂದ ಇಂಗ್ಲಿಷ್‌ನಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಮಹಿಳೆ ತಾಲ್ಲೂಕು ಕಚೇರಿಗೆ ಬರುತ್ತಿದ್ದಾರೆ. ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಸಿಬ್ಬಂದಿ ದಿನ ಬಂದು ಕಿರಿಕಿರಿ ಮಾಡ್ತೀಯಾ ಸುಮ್ಮನೆ ಹೋಗು ಅಂತ ದಬಾಯಿಸುತ್ತಿದ್ದಾರೆ. ಇದು ಸಭ್ಯತೆಯೇ? ಎಂದು ಪ್ರಶ್ನಿಸಿದರು.

‘ಮಧ್ಯವರ್ತಿಗಳ ಕೆಲಸ ಸಲೀಸಾಗಿ ಆಗುತ್ತದೆ. ಜನರ ಕೆಲಸ ಮಾತ್ರ ಆಗುತ್ತಿಲ್ಲ. ಒಂದು ಕಚೇರಿಯಿಂದ ಮತ್ತೊಂದು ಕಡೆಗೆ ಏಕೆ ಅಲಿಸುತ್ತೀರಿ. ಸರ್ಕಾರ ನಿಮಗೆ ಸಂಬಳ ಕೊಡುವುದಿಲ್ಲವಾ. ಸಂಬಳ ತೆಗೆದುಕೊಂಡು ಕೆಲಸ ಮಾಡದಿದ್ದರೆ ಹೇಗೆ? ನಿಮ್ಮ ಕೆಟ್ಟ ಕೆಲಸದಿಂದ ಜನರಿಂದ ನಾನು ಮಾತು ಕೇಳಬೇಕಾಗಿದೆ. ಇನ್ನು ನಾನು ಸುಮ್ಮನಿರಲ್ಲ’ ಎಂದು ಗರಂ ಆದರು.

ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿದ ಅವರು, ‘ತಾಲ್ಲೂಕು ಕಚೇರಿಯ ಆಡಳಿತ ಸುಧಾರಣೆ ಮಾಡ್ತಿರೋ ಇಲ್ಲವೋ’ ಎಂದು ಪ್ರಶ್ನಿಸಿದ ಅವರು, ಕಚೇರಿ ಬಾಗಿಲಿನಲ್ಲಿ ಕುಳಿತುಕೊಂಡರೆ ಕಂದಾಯ ಇಲಾಖೆಗೆ ಮುಜುಗರವಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಿ‘ ಎಂದರು.

ಕಚೇರಿ ಸಿಬ್ಬಂದಿ ವರ್ತನೆ ಕರಿತಂತೆ ಸಮಗ್ರ ಮಾಹಿತಿ ಪಡೆದು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಭರವಸೆ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.

ಬಳಿಕ ಉಪನೋಂದಣಾಧಿಕಾರಿ, ಕಸಬಾ ನಾಡ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಸಾರ್ವಜನಿಕರ ಕೆಲಸ ತಕ್ಷಣ ಮಾಡಿಕೊಡಬೇಕು ಎಂದು ಸೂಚಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಬಿಜೆಪಿ ಮುಖಂಡ ತಳಲೆ ಪ್ರಸಾದ್‌ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT