ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ ಗುರುತಿಸಿ- ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಸೂಚನೆ

Last Updated 15 ಜನವರಿ 2022, 8:34 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವುದು ಅವಶ್ಯವಾಗಿದ್ದು, ಶಿವಮೊಗ್ಗ ಸುತ್ತ ಸೂಕ್ತ ಜಾಗವನ್ನು ಗುರುತಿಸಿದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕೆಐಎಡಿಬಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕೆಲವೆಡೆ ಸುಸಜ್ಜಿತವಾದ ಟ್ರಕ್ ಟರ್ಮಿನಲ್‍ಗಳ ಸ್ಥಾಪನೆಯಾಗಿದೆ. ಹಲವೆಡೆ ಇನ್ನೂ ಆಗಬೇಕಿದೆ. ಟ್ರಕ್ ಟರ್ಮಿನಲ್‍ಗಳ ಸ್ಥಾಪನೆಯಿಂದ ಅಪಘಾತಗಳು ಕಡಿಮೆಯಾಗುತ್ತದೆ. ವಾಯುಮಾಲಿನ್ಯ ಮತ್ತು ದಟ್ಟಣೆ ಕೂಡ ಕಡಿಮೆ ಆಗುತ್ತದೆ. ಜೊತೆಗೆ ಉದ್ಯೋಗಾವಕಾಶದೊಂದಿಗೆ ಮಿನಿ ಟೌನ್‍ಶಿಪ್ ನಿರ್ಮಾಣ ಆಗುತ್ತದೆ. ಹೀಗೆ ಟ್ರಕ್ ಟರ್ಮಿನಲ್‍ನಿಂದ ಅನೇಕ ಅನುಕೂಲ ಇವೆ.ಟರ್ಮಿನಲ್ ಇಲ್ಲದಿದ್ದರೆ ರಸ್ತೆ ಬದಿ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಮುಂಜಾವಿನಲ್ಲಿ ಬೇಗ ಹೊರಡುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು, ಆರ್‌ಐ, ಗ್ರಾಮ ಲೆಕ್ಕಿಗರು ಸೇರಿ ತಳಮಟ್ಟದ ಅಧಿಕಾರಿಗಳ ಸಭೆ ಕರೆದು ಶಿವಮೊಗ್ಗ ಸುತ್ತ ಜಾಗ ಇದೆಯಾ ಎಂದು ಪರಿಶೀಲಿಸುವಂತೆ ಅವರು ಸೂಚಿಸಿದರು.

ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಯಶವಂತಪುರಗಳಲ್ಲಿ ಸುಸಜ್ಜಿತ ಟರ್ಮಿನಲ್‍ಗಳು ಇವೆ. ಸರ್ಕಾರಿ ಜಮೀನು ಗುರುತಿಸುವುದು ಉತ್ತಮ. ಅದು ಲಭ್ಯವಿಲ್ಲದಿದ್ದರೆ ನಗರೋತ್ಥಾನ ಅಥವಾ ಕೆಐಎಡಿಬಿ ಜಾಗವನ್ನು ಗುರುತಿಸಬೇಕು. ರಾಷ್ಟ್ರೀಯ ಹೆದ್ದಾರಿ ಸುತ್ತ 2 ರಿಂದ 5 ಕಿ.ಮೀ ಒಳಗೆ ಜಾಗ ಗುರುತಿಸಬೇಕು. ತಹಶೀಲ್ದಾರರು, ನಗರಾಭಿವೃದ್ಧಿ ಮತ್ತು ಕೆಎಐಡಿಬಿ ಅಧಿಕಾರಿಗಳು ಜಾಗ ಗುರುತಿಸಲು ಜಿಲ್ಲಾಧಿಕಾರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾತನಾಡಿ, ‘ತಾಲ್ಲೂಕು ಅಧಿಕಾರಿಗಳು ಮತ್ತು ಆರ್‌ಐ, ವಿಎಗಳ ಸಭೆ ಕರೆದು ಜಾಗ ಲಭ್ಯತೆ ಬಗ್ಗೆ ಪರಿಶೀಲಿಸಲಾಗುವುದು. ಎನ್‍ಎಚ್ ಬಳಿ ಅದರಲ್ಲೂ ಶಿವಮೊಗ್ಗ ಸುತ್ತಮುತ್ತ ಜಾಗ ನೋಡುತ್ತೇವೆ. ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಒಳಿತಾಗುತ್ತದೆ’ ಎಂದರು.

ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕೆಐಎಡಿಬಿ ಕಾರ್ಯಪಾಲಕ ಎಂಜಿನಿಯರ್ ನಾರಾಯಣಪ್ಪ ಮಾತನಾಡಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಎಫ್. ಹೊನ್ನಳ್ಳಿ, ಸೂಡಾ ಆಯುಕ್ತ ಕೊಟ್ರೇಶ್, ಶಿವಮೊಗ್ಗ ತಹಶೀಲ್ದಾರ್ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT