ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಂದೂರು | ಲಾಂಚ್ ಅವ್ಯವಸ್ಥೆಗೆ ಕೊನೆ ಎಂದು...?

ಹೊಳೆಬಾಗಿಲಿನಲ್ಲಿ 2 ಲಾಂಚ್ ಸ್ಥಗಿತ; ಸ್ಥಳೀಯರಿಗೆ ತಪ್ಪದ ಗೋಳು; ಪ್ರಯಾಣಿಕರ ಸುರಕ್ಷತೆಗೆ ಬೇಕಿದೆ ಆದ್ಯತೆ
ಸುಕುಮಾರ್ ಎಂ.
Published 21 ಏಪ್ರಿಲ್ 2024, 21:33 IST
Last Updated 21 ಏಪ್ರಿಲ್ 2024, 21:33 IST
ಅಕ್ಷರ ಗಾತ್ರ

ಹೊಳೆಬಾಗಿಲು (ತುಮರಿ): ಶರಾವತಿ ಮುಳುಗಡೆ ಸಂತ್ರಸ್ತರು ಸೇರಿದಂತೆ ಕರೂರು - ಬಾರಂಗಿ ಹೋಬಳಿಯ ಜನರಿಗೆ ಆದ್ಯತೆ ನೀಡದೇ, ಈ ಭಾಗದ ಜನರ ಸಂಪರ್ಕ ಕೊಂಡಿಯಾಗಿರುವ ‘ಸಿಗಂದೂರು ಲಾಂಚ್’ ಸಮರ್ಪಕ ಸೇವೆಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಿರುದ್ಧ ಸ್ಥಳೀಯರು ದೂರಿದ್ದಾರೆ.

ಶರಾವತಿ ಕಣಿವೆಯ ತುಮರಿ, ಬ್ಯಾಕೋಡು, ಕಟ್ಟಿನಕಾರು ಭಾಗದ 30,000ಕ್ಕೂ ಅಧಿಕ ಜನರು ದಿನನಿತ್ಯದ ಕೆಲಸಗಳಿಗೆ, ಕೋರ್ಟ್, ಕಚೇರಿ ಕಾರ್ಯಗಳಿಗೆ ತಾಲ್ಲೂಕು ಕೇಂದ್ರವನ್ನು  ಸಂಪರ್ಕಿಸಿಲು ಲಾಂಚ್ ಮೂಲಕವೇ ಸಾಗಬೇಕಾದ ಅನಿವಾರ್ಯತೆ ಇದೆ. ಆದರೆ ಜನರಿಗೆ ಅನುಕೂಲಕ್ಕೆ ತಕ್ಕಂತೆ ಲಾಂಚ್ ಸೇವೆ ಸಿಗದೇ ಪರದಾಡುತ್ತಿದ್ದಾರೆ. ತಾಂತ್ರಿಕ ದೋಷ ಕಾರಣ ನೀಡುವುದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಾಕಷ್ಟು ಅಡ್ಡಿಯಾಗಿದೆ ಎಂದು ಗ್ರಾಮದ ಕೆ.ಜಯಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೇವೆ ನಿಲ್ಲಿಸಿದ ಎರಡು ಲಾಂಚ್: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸಿಗಂದೂರು ದೇವಿ ದರ್ಶನ ಪಡೆಯಲು ಟಿ.ಟಿ., ಬಸ್, ಕಾರು, ದ್ವಿಚಕ್ರ ವಾಹನಗಳ ಮೂಲಕ ಸಾವಿರಾರು ಮಂದಿ ಆಗಮಿಸುತ್ತಿದ್ದು, ಭಾನುವಾರ ಸಹ ನೂರಾರು ವಾಹನಗಳು ಸುಡು ಬಿಸಿಲಿನಲ್ಲಿ ಅಂಬಾರಗೋಡ್ಲು ದಡದಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂತು. ಆದರೆ ಜನರಿಗೆ ಸೇವೆ ನೀಡಬೇಕಾದ ಎರಡು ಲಾಂಚ್‌ಗಳು ತಾಂತ್ರಿಕ ದೋಷದಿಂದ ಏಕಾಏಕಿ ಸ್ಥಗಿತಗೊಂಡ ಪರಿಣಾಮ ಸ್ಥಳಿಯರು, ಚುನಾವಣೆ ಕಾರ್ಯಕ್ಕೆ ತೆರಳಬೇಕಿದ್ದ ಸಿಬ್ಬಂದಿ, ಪೊಲೀಸ್ ವಾಹನಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಅಂಬಾರಗೋಡ್ಲು - ಕಳಸವಳ್ಳಿ ಕಡವಿನಲ್ಲಿ ಒಟ್ಟು 4 ಲಾಂಚ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಸಿಗಂದೂರು ಸೇತುವೆ ಕಾಮಗಾರಿ ನಡೆಸುತ್ತಿರುವ ದಿಲೀಪ್ ಬಿಲ್ಡ್ ಕಂಪನಿಗೆ ಒಂದು ಲಾಂಚ್ ನೀಡಲಾಗಿದೆ. ಉಳಿದ 3 ಲಾಂಚ್‌ಗಳ ಪೈಕಿ ಒಂದು ತಾಂತ್ರಿಕ ದೋಷದಿಂದ ಏ.13ರಂದು ಸ್ಥಗಿತಗೊಂಡಿದೆ. ಸ್ಥಗಿತಗೊಂಡು ವಾರ ಕಳೆದರೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನುಳಿದ ಎರಡು ಲಾಂಚ್‌ಗಳ ಮೇಲೆ ಕಾರ್ಯಭಾರ ಹೆಚ್ಚಿದ್ದು, ಈ ಪೈಕಿ ಮತ್ತೊಂದು ಲಾಂಚ್‌ನಲ್ಲಿ ಭಾನುವಾರ ಭಾರಿ ತಾಂತ್ರಿಕ ದೋಷ ಕಂಡುಬಂದಿದ್ದು, ಅದೂ ಸ್ಥಗಿತಗೊಂಡಿದೆ. 

ಸುರಕ್ಷತೆ ಇಲ್ಲದ ಲಾಂಚ್ ಸೇವೆ: ಸಿಗಂದೂರು ಲಾಂಚ್ ಸುಗಮ ಸಂಚಾರ ನೀಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೇ ನಿರ್ಲಕ್ಷ್ಯದಿಂದ 2020ರ ಸೆಪ್ಟೆಂಬರ್‌ನಲ್ಲಿ ಎರಡು ಲಾಂಚ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪರಾಗಿದ್ದರು. ಲಾಂಚ್ ಡಿಕ್ಕಿ ಪ್ರಕರಣದ ನಂತರವು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಲವು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ.

‘ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು, ಉಳಿದಿರುವ ಒಂದೇ ಲಾಂಚ್‌ನಲ್ಲಿ ಭಾನುವಾರ ನಿಯಮ ಮೀರಿ ಸೇವೆ ನೀಡಲಾಗುತ್ತಿದೆ. ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೇ ಜನರನ್ನು ತುಂಬಿಸುದರಿಂದ ನಮಗೆ ಸುರಕ್ಷತೆಯ ಚಿಂತೆ ಎದುರಾಗಿದೆ’ ಎಂದು ಪ್ರವಾಸಿಗ ನಾಗರಾಜ್ ಪಾವಗಡ ‘ಪ್ರಜಾವಾಣಿ’ ಎದುರು ಆತಂಕ ವ್ಯಕ್ತಪಡಿಸಿದರು.

‘ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸಿಗಂದೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸ್ಥಳೀಯರು ಸಾಗರಕ್ಕೆ ಬರಲು ಹಾಗೂ ಮರಳಿ ತಮ್ಮೂರಿಗೆ ಹೋಗಲು ನಿತ್ಯ ಸಂಕಟ ಎದುರಿಸುವಂತಾಗಿದೆ. ಸ್ಥಳೀಯ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ನಮ್ಮ ನೋವು ಆಲಿಸಬೇಕು’ ಎಂದು ಮಹಿಳೆಯರು ನೋವು ತೋಡಿಕೊಂಡರು. 

ಆಂಬಾರಗೋಡ್ಲು ಬಳಿ ಲಾಂಚ್ ಸೇವೆಗೆ ಸರದಿ ಸಾಲಿನಲ್ಲಿ ನಿಂತಿರುವ ನೂರಾರು ವಾಹನಗಳು
ಆಂಬಾರಗೋಡ್ಲು ಬಳಿ ಲಾಂಚ್ ಸೇವೆಗೆ ಸರದಿ ಸಾಲಿನಲ್ಲಿ ನಿಂತಿರುವ ನೂರಾರು ವಾಹನಗಳು
ತಾಂತ್ರಿಕ ದೋಷದ ಕಾರಣ ನೀಡಿ ಪದೇ ಪದೇ ಲಾಂಚ್ ನಿಲ್ಲಿಸುವುದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ.
ಕೆ.ಜಯಂತ್, ತುಮರಿ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT