ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಭರ್ತಿಯತ್ತ ಭದ್ರಾ ಜಲಾಶಯ; ನದಿ ಪಾತ್ರಗಳಲ್ಲಿ ಕಟ್ಟೆಚ್ಚರ

Last Updated 11 ಸೆಪ್ಟೆಂಬರ್ 2020, 14:53 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿಗೆ ಒಂದೂವರೆ ಅಡಿ ಬಾಕಿ ಇದ್ದು, ಯಾವುದೇ ಕ್ಷಣದಲ್ಲಿ ಕ್ರಸ್ಟ್‌ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲು ನೀರಾವರಿ ನಿಗಮ ಸಿದ್ಧವಾಗಿದೆ.

186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 184.5 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಒಳ ಹರಿವು 2,864 ಕ್ಯುಸೆಕ್‌ ಇದೆ. ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವ ಕಾರಣ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಯಾವುದೇ ಕ್ಷಣದಲ್ಲಿ ನಾಲ್ಕು ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲು ನೀರಾವರಿ ನಿಗಮದ ಅಧಿಕಾರಿಗಳು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.

ನದಿ ಪಾತ್ರದ ಜನರು, ಬಲ ಮತ್ತು ಎಡ ದಂಡೆ ನಾಲೆಯ ಜನರು ತಗ್ಗು ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಅನಗತ್ಯವಾಗಿ ನದಿ, ನಾಲೆಗಳ ಪಾತ್ರದಲ್ಲಿ ಬಟ್ಟೆ ತೊಳೆಯಲು, ದನ ಕರು ಮೇಯಿಸಲು, ನೀರು ತರಲು ಹೋಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

71.535 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 70.802 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈ ಜಲಾಶಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ.

ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುತ್ತದೆ. ಪ್ರಸಕ್ತ ವರ್ಷದಿಂದ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರಕ್ಕೂ ನೀರು ಬಿಡಲಾಗಿದೆ. ಅಲ್ಲದೇ, ನದಿ ಮೂಲಕ ಹಲವು ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಳಿಗೂ ಈ ನೀರೇ ಆಧಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT