ಬುಧವಾರ, ಮೇ 18, 2022
24 °C
ಐವರು ಗ್ರಂಥಾಲಯ ಸಿಬ್ಬಂದಿ, 19 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಕುವೆಂಪು ವಿ.ವಿಗೆ ರಜೆ: ಆನ್‌ಲೈನ್‌ ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 5 ಜನ ಗ್ರಂಥಾಲಯ ಸಿಬ್ಬಂದಿ, 19 ವಿದ್ಯಾರ್ಥಿಗಳಿಗೆ ಕೊರೊನಾ
ಸೋಂಕು ಬಂದ ಕಾರಣ ಕುವೆಂಪು ವಿಶ್ವವಿದ್ಯಾಲಯಕ್ಕೆ ಜ.17ರಿಂದ ಜ.21ರವರೆಗೆ ರಜೆ ಘೋಷಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ವಿಶ್ವವಿದ್ಯಾಲಯದ ಗ್ರಂಥಾಲಯದ 5 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಹಲವು ಮಂದಿಯಲ್ಲಿ 70 ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 19 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಸೋಂಕಿತ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಉಳಿದ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ 5 ದಿನ ರಜೆ ಘೋಷಿಸಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ. ವೀರಭದ್ರಪ್ಪ ಸುತ್ತೋಲೆ ಹೊರಡಿಸಿದ್ದಾರೆ.

ಆನ್‌ಲೈನ್‌ ತರಗತಿ: ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಿರುವ ಕಾರಣ ಜ.17ರಿಂದ ಜ. 21ರ ವರೆಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಮಾಡುವಂತೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದಷ್ಟೇ ಶಿಕ್ಷಣವೂ ಮುಖ್ಯವಾಗಿರುವುದರಿಂದ ಆನ್‌ಲೈನ್‌ನಲ್ಲಿ ಪಾಠ ಮಾಡುವಂತೆ ತಿಳಿಸಲಾಗಿದೆ ಎಂದು ಕುಲಪತಿ ಬಿ.ಪಿ. ವೀರಭದ್ರಪ್ಪ ತಿಳಿಸಿದ್ದಾರೆ.

ಎಲ್ಲರೂ ಹೋಂ ಕ್ವಾರಂಟೈನ್‌: ಕೊರೊನಾ ಸೋಂಕು ದೃಢಪಟ್ಟಿರುವ 24 ಮಂದಿಯಲ್ಲಿ ಯಾರಿಗೂ ಆರೋಗ್ಯದಲ್ಲಿ ಏರುಪೇರು ಆಗಿಲ್ಲ. ಕೆಲವರಿಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ಎಲ್ಲರನ್ನೂ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ವಿ.ವಿ. ಕ್ಯಾಂಪಸ್‌ ಸ್ಯಾನಿಟೈಸಿಂಗ್‌: ವಿಶ್ವವಿದ್ಯಾಲಯ ಆವರಣದಲ್ಲಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ಗೃಹಗಳು ಸೇರಿ ಎಲ್ಲ ವಿಭಾಗಗಳು, ಕಚೇರಿಗಳ ಕಟ್ಟಡಗಳಿಗೂ ನಿತ್ಯ ಸ್ಯಾನಿಟೈಸ್‌ ಮಾಡುವಂತೆ ಕುಲಪತಿ ಸೂಚನೆ ನೀಡಿದ್ದು, ಭಾನುವಾರ ಸ್ಯಾನಿಟೈಸ್‌ ಮಾಡಲಾಯಿತು.

ನೆಗೆಟಿವ್‌ ವರದಿ ಕಡ್ಡಾಯ: ರಜೆ ಬಳಿಕ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕೊರೊನಾ ನೆಗೆಟಿವ್‌ ವರದಿ ತರುವುದು ಕಡ್ಡಾಯ. ಸೋಂಕಿಗೆ ಒಳಗಾಗಿರುವ ವಿದ್ಯಾರ್ಥಿಗಳು ಹಾಗೂ ಕೊರೊನಾ ಲಕ್ಷಣ ಇರುವ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು ಕಡ್ಡಾಯವಿಲ್ಲ.

‘ಪರೀಕ್ಷೆ ಮಾಡಿಸಿಕೊಳ್ಳಿ’:

ವಿಶ್ವವಿದ್ಯಾಲಯದಲ್ಲಿ 5 ಜನ ಗ್ರಂಥಾಲಯ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಸಿಕೊಂಡ ಕಾರಣ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವುದು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ತಲೆ ನೋವಾಗಿದೆ. ಈವರೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 116 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಇನ್ನೂ ಅನೇಕ ವಿದ್ಯಾರ್ಥಿಗಳು ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎಂಬುದು ತಿಳಿದು ಬಂದಿದೆ.

ಆದರೆ, ಈಗಾಗಲೇ ಹಬ್ಬದ ನಿಮಿತ್ತ ವಿದ್ಯಾರ್ಥಿಗಳು ಊರುಗಳಿಗೆ ತೆರಳಿದ್ದು, ಇದರಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಸಂಖ್ಯೆ ಸಾಕಷ್ಟಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕುಲಪತಿ ಮನವಿ ಮಾಡಿದ್ದಾರೆ.

ಬಂದ್‌ ಆಗಿದ್ದ ಶಾಲೆ–ಕಾಲೇಜು ಪುನರಾರಂಭ:

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಒಂದು ವಾರ ಬಂದ್‌ ಆಗಿದ್ದ ಶಾಲೆಗಳು ಜ.17ರಿಂದ ಆರಂಭವಾಗುತ್ತಿವೆ.

ಶಿವಮೊಗ್ಗ ತಾಲ್ಲೂಕಿನ ಕುಂಸಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು, ರಿಪ್ಪನ್‌ಪೇಟೆ ಪದವಿ ಪೂರ್ವ ಕಾಲೇಜು, ನವೋದಯ ಶಾಲೆ, ವಿನೋಬನಗರದ ಡಿವಿಎಸ್‌ ಕಾಲೇಜು, ಪೋದಾರ್, ಭವನ್‌ ಶಾಲೆ, ಸ್ವಾಮಿ ವಿವೇಕಾನಂದ ಸೇರಿ ಕೆಲ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ತಾತ್ಕಾಲಿಕವಾಗಿ ಶಾಲಾ–ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು.

 

ವಿದ್ಯಾರ್ಥಿಗಳು, ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಬಂದಿರುವ ಕಾರಣ 5 ದಿನ ರಜೆ ಘೋಷಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು.

ಬಿ.ಪಿ.ವೀರಭದ್ರಪ್ಪ, ಕುಲಪತಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.