ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ವಿನೋಬನಗರ ಸುತ್ತ ನಿತ್ಯವೂ ಸಂತೆ; ಸುಗಮ ಸಂಚಾರಕ್ಕೆ ಅಡೆತಡೆ

ಹಣ್ಣು, ತರಕಾರಿ ವ್ಯಾಪಾರಕ್ಕೆ ರಸ್ತೆಗಳೇ ಮಾರುಕಟ್ಟೆ, ಸುಗಮ ಸಂಚಾರಕ್ಕೆ ಅಡೆತಡೆ
Last Updated 14 ಜನವರಿ 2022, 5:53 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಪ್ರಮುಖ ಬಡಾವಣೆ ವಿನೋಬನಗರದಲ್ಲಿ ಪ್ರತ್ಯೇಕ ಮಾರುಕಟ್ಟೆ ಇಲ್ಲ. ಹೀಗಾಗಿ ಇಲ್ಲಿ ರಸ್ತೆ ಬದಿಯೇ ನಿತ್ಯ ಸಂತೆ ನಡೆಯುತ್ತದೆ.

ಹಲವು ದಶಕಗಳಿಂದ ಪ್ರತ್ಯೇಕ ಮಾರುಕಟ್ಟೆ ಇಲ್ಲದೆ ರಸ್ತೆಯಲ್ಲೇ ತರಕಾರಿ ಮಾರಾಟ ನಡೆಯುತ್ತಿದೆ. ಎಪಿಎಂಸಿ ಮಾರುಕಟ್ಟೆ ಎದುರು ರಸ್ತೆಯೂ ಸೇರಿ ವಿನೋಬನಗರದ ಒಳ ರಸ್ತೆಗಳ ಬದಿಯೂ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವುದರಿಂದ ತರಕಾರಿ ಖರೀದಿಗಾಗಿ ಜನರು ಗುಂಪು ಗುಂಪಾಗಿ ಬರುತ್ತಾರೆ. ಇದರಿಂದ ಆ ರಸ್ತೆ ಮಾರ್ಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.

ವ್ಯಾಪಾರಿಗಳಿಗೆ ಸಂಕಷ್ಟ:

ಪಾಲಿಕೆ ವ್ಯಾಪ್ತಿಯಲ್ಲಿ ತರಕಾರಿ, ಹಣ್ಣು ಮಾರಾಟಗಾರರು ಸೇರಿ 3,300 ಬೀದಿಬದಿ ವ್ಯಾಪಾರಿಗಳಿದ್ದಾರೆ. ಅವರಲ್ಲಿ 1,880 ವ್ಯಾಪಾರಿಗಳಿಗೆ ಗುರುತಿನ ನೀಡಲಾಗಿದೆ. ಬೀದಿಬದಿಯ ವ್ಯಾಪಾರಿಗಳಿಗೆ ಕಾರ್ಡ್ ನೀಡುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ನಗರದಲ್ಲಿ ಸಂಚಾರ ಸಮಸ್ಯೆ ಎದುರಾದಾಗ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ರಸ್ತೆಗಳನ್ನು ಆಕ್ರಮಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಕಾರಣಕ್ಕೆ ತೆರವಿನ ನೆಪದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಅಲೆದಾಡಿಸುತ್ತಿದ್ದಾರೆ. ಶಾಶ್ವತ ನೆಲೆ ಕಲ್ಪಿಸಲು ಪ್ರಯತ್ನಗಳೇ ನಡೆದಿಲ್ಲ. ಪ್ರಮುಖ ರಸ್ತೆಗಳ ಬದಿ, ಪಾದಚಾರಿಗಳ ಮಾರ್ಗ, ಪಾರ್ಕಿಂಗ್ ಜಾಗದಲ್ಲೇ ವ್ಯಾಪಾರ ಮಾಡುತ್ತಿದ್ದಾರೆ.

ಟೆಂಡರ್ ಕರೆಯಲಿಲ್ಲ, ಮಳಿಗೆ ಸಿಗಲಿಲ್ಲ:‌

ಬೀದಿಬದಿ ವ್ಯಾಪಾರಸ್ಥರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಕಾರಣ ಈ ಹಿಂದೆ ಲಕ್ಷ್ಮೀ ಚಿತ್ರಮಂದಿರದಿಂದ ಪೊಲೀಸ್ ಚೌಕಿವರಿಗೆ 287 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿತ್ತು. ಅವರನ್ನು ವಿನೋಬನಗರದ ಶಿವಾಲಯದ ಬಳಿ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದ್ದರು. ಮಾರುಕಟ್ಟೆಯಲ್ಲಿ ಮಳಿಗೆ ನಿರ್ಮಾಣವಾಗಿದೆ. ಟೆಂಡರ್ ಕರೆಯಲು ಸರ್ಕಾರದ ಅನುಮತಿ ನೀಡಿದೆ. ಆದರೆ,
ಪಾಲಿಕೆ ಅಧಿಕಾರಿಗಳು ಟೆಂಡರ್ ಕರೆಯದೇ ವಿಳಂಬ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಅನುಮತಿ ನಂತರ ಮಳಿಗೆ ಹಂಚಿಕೆ:

ವಿನೋಬನಗರದ ಸುತ್ತ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗಾಗಿಯೇ ಶಿವಾಲಯದ ಬಳಿ ಮಳಿಗೆ ನಿರ್ಮಿಸಲಾಗಿದೆ. ಆದರೆ, ಸರ್ಕಾರ ಪಾರದರ್ಶಕವಾಗಿ ಮಳಿಗೆ ಹಂಚಿಕೆಯಲ್ಲಿ ಟೆಂಡರ್‌ ಕರೆದು ಮಳಿಗೆ ಹಂಚಿಕೆ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ಸರ್ಕಾರದ ಈಗಿನ ಮಾರ್ಗಸೂಚಿ ಪ್ರಕಾರ ಯಾರು ಬೇಕಾದರೂ ಟೆಂಡರ್‌ನಲ್ಲಿ ಭಾಗವಹಿಸಬಹುದು. ಇದು ಇಲ್ಲಿನ ವ್ಯಾಪಾರಿಗಳಿಗೆ ಅನ್ಯಾಯ ಮಾಡಿದಂತೆ ಆಗುತ್ತಿದೆ. ಈ ಗೊಂದಲ ಬಗೆಹರಿಸುವಂತೆ ಜಿಲ್ಲಾ ಉಸ್ತುವಾರಿ, ನಗರರಾಭಿವೃದ್ಧಿ ಸಚಿವರಿಗೆ ಮನವಿ ಮಾಡಲಾಗಿದೆ. ಸರ್ಕಾರದ ಅನುಮತಿ ದೊರೆತ ಕೂಡಲೇ ಸರ್ಕಾರದ ಆದೇಶದಂತೆ ಮಳಿಗೆ ಹಂಚಿಕೆ ಮಾಡಲಾಗುವುದು ಎನ್ನುತ್ತಾರೆ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ.

ಕೊರೊನಾ: ಜೀವನ ನಿರ್ವಹಣೆಗೆ ತರಕಾರಿ ವ್ಯಾಪಾರ

‘ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿದ್ದವರು ಕೊರೊನಾ ಕಾರಣದಿಂದ ವಾಪಸ್‌ ಬಂದಿದ್ದಾರೆ. ಜೀವನ ರೂಪಿಸಿಕೊಳ್ಳಲು ತರಕಾರಿ ವ್ಯಾಪಾರ ಪ್ರಾರಂಭಿಸಿದ್ದೇವೆ. ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ತೆಗದುಕೊಂಡು ವ್ಯವಸ್ಥಿತವಾದ ತರಕಾರಿ ಮಾರುಕಟ್ಟೆ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಹೊಸದಾಗಿ ತರಕಾರಿ ವ್ಯಾಪಾರ ಆರಂಭಿಸಿರುವ ವಿನಯ್.

ಹೆಚ್ಚಿದ ತಳ್ಳುಗಾಡಿ ವ್ಯಾಪಾರ

ಲಾಕ್‌ಡೌನ್‌ ಸಮಯದಲ್ಲಿ ಹಣ್ಣು, ತರಕಾರಿ, ಹೂವುಗಳ ಮಾರಾಟಕ್ಕೆ ಸಂಚಾರಿ ವಾಹನಗಳು, ತಳ್ಳುಗಾಡಿಗಳ ವ್ಯವಸ್ಥೆ ಮಾಡಲಾಗಿತ್ತು. ಹಾಪ್‌ಕಾಮ್ಸ್, ಎಪಿಎಂಸಿ, ಮಹಾನಗರ ಪಾಲಿಕೆಯಿಂದ ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸ್ವಯಂ ಇಚ್ಛೆಯಿಂದ ಸ್ವಂತ ವಾಹನಗಳಲ್ಲಿ ಬೀದಿಗಳಿಗೆ ತೆರಳಿ ವ್ಯಾಪಾರ ಮಾಡುವವರಿಗೆ ಪ್ರೋತ್ಸಾಹ ನೀಡಲಾಗಿತ್ತು. ಜನರೂ ಮನೆ ಬಾಗಿಲಿಗೆ ಬರುವವರ ಬಳಿ ಖರೀದಿಸಲು ಒಲವು ತೋರಿದ್ದರು. ಈಗ ವ್ಯಾಪಾರಿಗಳು ಆಯಾ ಬೀದಿಗಳಲ್ಲಿ ಕಾಯಂ ಗ್ರಾಹಕರನ್ನು ಕಂಡುಕೊಂಡಿದ್ದಾರೆ. ಬದಲಾದ ಪರಿಸ್ಥಿಯಲ್ಲಿ ವಾರದ ಸಂತೆಯ ಸ್ವರೂಪವೂ ಬದಲಾಗಿದೆ.

ವಿನೋಬನಗರದ ಶಿವಾಲಯದ ಪಕ್ಕದಲ್ಲಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಮಳಿಗೆ ನಿರ್ಮಿಸಲಾಗಿದೆ. ಸದ್ಯ 70 ವ್ಯಾಪಾರಿಗಳಿಗೆ ಮಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಸರ್ಕಾರ ಅನುಮತಿ ಕೇಳಿದ್ದೇವೆ. ಬಂದ ಕೂಡಲೇ ಹಂಚಿಕೆ ಮಾಡಲಾಗುವುದು.

ಚಿದಾನಂದ್ ವಟಾರೆ, ಪಾಲಿಕೆ ಆಯುಕ್ತ

ವಿನೋಬನಗರದ ಶಿವಾಲಯದ ಪಕ್ಕದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಸರಿಯಾಗಿ ಸರ್ಕಾರದಿಂದ ಹಣ ಬರುತ್ತಿಲ್ಲ. ಹೀಗಾಗಿ ಮಳಿಗೆಗಳು ಇನ್ನೂ ಹಂಚಿಕೆಯಾಗಿಲ್ಲ. ಇದರಿಂದ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗಿದೆ.

-ಎಚ್‌.ಸಿ.ಯೋಗೀಶ್‌, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT