ಆನವಟ್ಟಿ: ಸಮೀಪದ ಮೂಗುರು ಗ್ರಾಮದಲ್ಲಿ ಹರಿದು ಹೋಗಿರುವ ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಗೇಟ್ ತೆರೆಯಲು ಶನಿವಾರ ಅಧಿಕಾರಿಗಳು ಕ್ರೇನ್ ತರಿಸಿದ್ದರು. ಆದರೆ ಸುತ್ತಲಿನ ಗ್ರಾಮಸ್ಥರು ಗೇಟ್ ತೆರೆಯಬಾರದು ಎಂದು ಪ್ರತಿಭಟಿಸಿದ ನಂತರ ಕ್ರೇನ್ ವಾಪಸ್ ಕಳುಹಿಸಲಾಯಿತು.
‘ಮೂಗುರು ಬ್ಯಾರೇಜ್‌ನಲ್ಲಿ ಮೂರು ಗೇಟ್‌ವರೆಗೂ ನೀರು ಇದೆ ಎಂದು ಅಧಿಕಾರಿಗಳು ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ. ನೆಲಮಟ್ಟದ ಒಂದು ಗೇಟ್ ನೆಲದೊಳಗೆ ಇರುವುದರಿಂದ, ನೀರಿನ ಸಂಗ್ರಹ ಇರುವುದು ಎರಡು ಗೇಟ್‌ಗಳಷ್ಟು ಮಾತ್ರ. ಸುತ್ತಲಿನ ಗ್ರಾಮದ ಜನರು ಮಿತವಾಗಿ ನೀರಿನ ಬಳಕೆ ಮಾಡಿಕೊಂಡು ಜನ ಜಾನುವಾರಿಗೆ ಕುಡಿಯುವ ನೀರಿನ ಅಭಾವ ಆಗದಂತೆ ಎಚ್ಚರ ವಹಿಸಿದ್ದೇವೆ’ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
‘ಮುಂದಿನ ಹಳ್ಳಿಗಳ ಅನುಕೂಲಕ್ಕಾಗಿ ಗೇಟ್ ತೆರೆದರೇ, ಆ ಹಳ್ಳಿ ತಲುಪುವ ಮುಂಚೆ ನೀರು ಖಾಲಿಯಾಗುತ್ತದೆ. ಅಧಿಕಾರಿಗಳು ಮುಂದಾಲೋಚನೆ ಮಾಡದೇ ಗೇಟ್ ತೆರೆದರೆ, ನೀರು ನಮ್ಮ ಬಳಕೆಗೂ ಸಿಗುವುದಿಲ್ಲ. ಮುಂದಿನ ಗ್ರಾಮಗಳ ಬಳಕೆಗೂ ಸಿಗುವುದಿಲ್ಲ. ಹಾಗಾಗಿ ಹತ್ತಾರು ಹಳ್ಳಿ ಬಳಕೆ ಮಾಡಿಕೊಳ್ಳುತ್ತಿರುವ ಅಚ್ಚುಕಟ್ಟುದಾರರಿಗೆ ತೊಂದರೆ ನೀಡದೇ. ಮೂಗುರು ಸುತ್ತಲ ಗ್ರಾಮಗಳ ಜನರ ಬಳಕೆಗೆ ಬಿಡಬೇಕು’ ಎಂದು ಗ್ರಾಮಸ್ಥರಾದ ಪ್ರಸನ್ನ ಕುಮಾರ್, ರಾಜು ಗೌಡ, ಗಿರೀಶ್, ಶಿವರುದ್ರಗೌಡ, ಎಚ್.ಆರ್. ನಾಗರಾಜ, ಎಲ್.ಜಿ. ಮಾಲತೇಶ್, ಶಿವಲಿಂಗೇಗೌಡ, ರವಿಕಿರಣ ಕುಬಟೂರು ಮನವಿ ಮಾಡಿದರು.
‘ಮೂಗೂರು ಗ್ರಾಮದ ಹಿಂದಿನ ಗ್ರಾಮಗಳ ಬ್ಯಾರೇಜ್‌ಗಳಲ್ಲೂ ನೀರಿನ ಪ್ರಮಾಣ ಕಡಿಮೆ ಇದೆ. ಮೂಗುರು ಗ್ರಾಮ ಬ್ಯಾರೇಜ್ ಗೇಟ್ ತೆಗೆದರೆ ನಾವು ಹಿಂದಿನ ಬ್ಯಾರೇಜ್‌ಗಳ ಗೇಟು ತೆರೆಯುವಂತೆ ಒತ್ತಾಯಿಸಬೇಕಾಗುತ್ತದೆ. ಮುಂದಿನ ಎರಡು ತಿಂಗಳು ಬೇಸಿಗೆ ಕಾಲ ಇರುವುದರಿಂದ ಲಭ್ಯವಿರುವ ನೀರನ್ನು ಖಾಲಿ ಮಾಡಿಕೊಳ್ಳುವ ಬದಲು ಬ್ಯಾರೇಜ್ ಸುತ್ತಲ ಗ್ರಾಮಗಳಾದ ಲಕ್ಕವಳ್ಳಿ, ಬಂಕಸಾಣ, ತಲಗಡ್ಡೆ, ಕಚವಿ, ತುಮರಿಕೊಪ್ಪ, ಹೊಸಕೊಪ್ಪ, ಮೂಗುರು ಗ್ರಾಮಗಳ ಅಚ್ಚುಕಟ್ಟುದಾರರಿಗೆ ಬಿಟ್ಟುಕೊಡಬೇಕು. ಒಂದು ವೇಳೆ ಬಲವಂತವಾಗಿ ಬ್ಯಾರೇಜ್ ಗೇಟ್ ತೆರೆದರೆ, ಸ್ಥಳದಲ್ಲೇ ವಾಸ್ತವ್ಯ ಹೂಡಿ ತೀವ್ರ ಹೋರಾಟ ಮಾಡಲಾಗುವುದು’ ಎಂದು ಅಧಿಕಾರಿಗಳಿಗೆ ಪ್ರತಿಭಟನಕಾರರು ಎಚ್ಚರಿಕೆ
ನೀಡಿದರು.
‘ಇಲ್ಲಿಯ ವಾಸ್ತವಿಕ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುತ್ತೇವೆ. ಅಲ್ಲಿಂದ ಏನು ಉತ್ತರ ಬರುತ್ತದೆ ನೋಡಿ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಸಂತೋಷ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.