ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ | ವಿನಾಯಕ ಚಿತ್ರಮಂದಿರದ ವಿನ್ಯಾಸದ ಗೋಡೆ ಕುಸಿತ; ಬೈಕ್‌ ಜಖಂ

Published 23 ಆಗಸ್ಟ್ 2023, 14:51 IST
Last Updated 23 ಆಗಸ್ಟ್ 2023, 14:51 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಾರ್ಕೆಟ್‌ ರಸ್ತೆಯಲ್ಲಿರುವ ಶ್ರೀ ವಿನಾಯಕ ಚಿತ್ರಮಂದಿರ ಮುಂಭಾಗದ ವಿನ್ಯಾಸದ ಗೋಡೆ ಮಂಗಳವಾರ ರಾತ್ರಿ ಸುಮಾರು 9.30ಕ್ಕೆ ಕುಸಿದಿದೆ. ಸೆಕೆಂಡ್‌ ಶೋ ಸಿನಿಮಾ ವೀಕ್ಷಣೆಗೆ ತೆರಳಿದ್ದ ಪ್ರೇಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸುಮಾರು 8ಕ್ಕೂ ಹೆಚ್ಚು ಬೈಕ್‌, ಸ್ಕೂಟಿಗಳು ಜಖಂಗೊಂಡಿವೆ.

ಮಂಗಳವಾರ ಸೆಕೆಂಡ್ ಶೋ ನೋಡಲು ಬೈಕ್‌ನಲ್ಲಿ ಅನೇಕರು ಬಂದಿದ್ದರು. ಗೋಡೆ ಕುಸಿತಗೊಂಡ ಪರಿಣಾಮ ಮುಂಭಾಗ ನಿಲ್ಲಿಸಿದ್ದ ಬೈಕ್‌ಗಳು ಜಖಂಗೊಂಡಿದ್ದು ಪ್ರೇಕ್ಷಕರು ವಾಪಸ್‌ ಮನೆಗೆ ತೆರಳಲು ಪರದಾಡಿದರು. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

1987ರಲ್ಲಿ ಆರಂಭಗೊಂಡ ವಿನಾಯಕ ಚಿತ್ರಮಂದಿರದಲ್ಲಿ 330 ಫಸ್ಟ್‌ ಕ್ಲಾಸ್‌, 140 ಬಾಲ್ಕನಿ ಸೀಟುಗಳಿವೆ. ಈಚೆಗೆ ಪ್ರೇಕ್ಷಕರನ್ನು ಸೆಳೆಯುವ ಚಿತ್ರಗಳ ಕೊರತೆ, ಒಟಿಟಿ, ಮಲ್ಟಿಫ್ಲೆಕ್ಸ್‌ ಮುಂತಾದ ಕಾರಣಗಳಿಂದ ಚಿತ್ರಮಂದಿರ ಸೊರಗಿತ್ತು. ಪ್ರತಿ ಶೋಗೆ ಸುಮಾರು ₹ 5,000 ಖರ್ಚಾಗುತ್ತದೆ. ಲಾಭಕ್ಕಿಂತ ನಷ್ಟ ಯಾಕೆ ಮಾಡಿಕೊಳ್ಳಬೇಕು ಎಂದು ಮಾಲೀಕರು ಹೊಸ ಉದ್ಯಮ ಸ್ಥಾಪಿಸುವ ಆಲೋಚನೆ ಹೊಂದಿದ್ದರು. ಕಾಂತಾರ ಸಿನಿಮಾ ನೀಡಿದ ಭರ್ಜರಿ ಕಲೆಕ್ಷನ್‌ ಮಾಲೀಕರ ಆಲೋಚನೆಗೆ ಅಲ್ಪಕಾಲದ ವಿರಾಮ ನೀಡಿತ್ತು.

ಶುಕ್ರವಾರ ಆರಂಭವಾದ ಜೈಲರ್‌ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಗ್ರಾಮೀಣ ಪ್ರದೇಶಗಳಿಂದಲೂ ಸಾಕಷ್ಟು ಜನರು ಸಿನಿಮಾ ವೀಕ್ಷಿಸುತ್ತಿದ್ದರು.

ವರ್ಷದ ಹಿಂದೆ ಜಿಲ್ಲಾಡಳಿತಕ್ಕೆ ದೂರು

‘ವಿನಾಯಕ ಚಿತ್ರಮಂದಿರ ಜಂಟಿ ಹಕ್ಕುದಾರಿಕೆಯಲ್ಲಿ ನಡೆಯುತ್ತಿದೆ. ಪರವಾನಗಿ 2021ರ ಡಿಸೆಂಬರ್‌ 31ರಂದು ನವೀಕರಣಗೊಂಡಿದೆ. ನನ್ನ ಸಹೋದರ ರವೀಂದ್ರ ಕಾಮತ್‌ ಪರವಾನಗಿ ನವೀಕರಣಕ್ಕಾಗಿ ವಿವಿಧ ಇಲಾಖೆಗಳ ನಿರಾಪೇಕ್ಷಣ ಪತ್ರ ಸಲ್ಲಿಸಿದ್ದಾರೆ. ಚಿತ್ರಮಂದಿರ ಕಟ್ಟಡ ಪರಿಶೀಲಿಸದೆ ನಿರಾಪೇಕ್ಷಣ ಪತ್ರವನ್ನು ಇಲಾಖೆ ನೀಡಿದೆ. ಆದರೆ, ಆಸನಗಳು ಯಾವುದೂ ಸರಿ ಇಲ್ಲ. ಚಿತ್ರಮಂದಿರದ ಗೋಡೆ, ಶೌಚಾಲಯ, ಆಡಿಟೋರಿಯಂ, ಚಾವಣಿ ಶಿಥಿಲಾವಸ್ಥೆ ತಲುಪಿದ್ದು, ಪ್ರೇಕ್ಷಕರ ತಲೆಯ ಮೇಲೆ ಬೀಳುವ ಪರಿಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ಅನಾಹುತವಾದಲ್ಲಿ ಸಂಬಂಧಪಟ್ಟ ಇಲಾಖೆ ನೇರ ಹೊಣೆಯಾಗುತ್ತದೆ’ ಎಂದು ಕೆ.ಗಣೇಶ್‌ ಕಾಮತ್‌ ಜಿಲ್ಲಾಡಳಿತಕ್ಕೆ 2022ರ ಮೇ 13ರಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT