ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ವರ್ಷ ಪೂರೈಸಲಿದೆ ಭಿನ್ನ ಹಾದಿಯ ಹೋರಾಟ

ಕಿರಣ್‌ಕುಮಾರ್
Published 17 ಜನವರಿ 2024, 7:10 IST
Last Updated 17 ಜನವರಿ 2024, 7:10 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಮಂಗಳವಾರ ಒಂದು ವರ್ಷ ಪೂರೈಸಿದೆ.

ಶತಮಾನ ಪೂರೈಸಿರುವ ಈ ಕಾರ್ಖಾನೆ ಉಳಿಸಿಕೊಳ್ಳಲು ಗುತ್ತಿಗೆ, ಕಾಯಂ ಹಾಗೂ ನಿವೃತ್ತ ಕಾರ್ಮಿಕರು ಕಳೆದೊಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಹೋರಾಟಕ್ಕೆ ಪ್ರತಿಫಲ ಇನ್ನು ಲಭಿಸಿಲ್ಲ.

ವಿಭಿನ್ನ ಹೋರಾಟ: ಕಾರ್ಖಾನೆ ಉಳಿವಿಗಾಗಿ  ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ, ರಸ್ತೆ ತಡೆ, ಭದ್ರಾವತಿ ಬಂದ್, ಪಾದಯಾತ್ರೆ, ಅರೆಬೆತ್ತಲೆ ಮೆರವಣಿಗೆ, ಪಂಜಿನ ಮೆರವಣಿಗೆ, ಸಹಿ ಅಭಿಯಾನ, ರಕ್ತದಲ್ಲಿ ಪತ್ರ ಚಳುವಳಿ ಸೇರಿದಂತೆ ಹಲವು ವಿಭಿನ್ನ ಹೋರಾಟಗಳ ನಡೆಸಲಾಗಿದೆ. ಅದರ ಭಾಗವಾಗಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ಕಾರ್ಖಾನೆಯ ಶತಮಾನೋತ್ಸವ ಆಚರಿಸಲಾಗಿತ್ತು. 

ಹೋರಾಟಕ್ಕೆ ವ್ಯಾಪಕ ಬೆಂಬಲ: ಕಾರ್ಮಿಕರ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆ, ಶಿಕ್ಷಣ ಸಂಸ್ಥೆಗಳು, ಮಠ ಮಂದಿರ, ರೈತರು ಬೆಂಬಲ ಸೂಚಿಸಿದ್ದಾರೆ.

ಉಡುಪಿ ಪೇಜಾವರ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ವಿನಯ ಗುರೂಜಿ, ಹೊಸದುರ್ಗ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಮುರುಘ ರಾಜೇಂದ್ರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಜೆ. ಪಟೇಲ್ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ. 

ಹಿಂದೆಯೂ 73 ದಿನ ಪ್ರತಿಭಟನೆ ನಡೆದಿತ್ತು..

ವಿಐಎಸ್‌ಎಲ್‌ ಖಾಸಗೀಕರಣಗೊಳಿಸುವ ಇಲ್ಲವೇ ಖಾಸಗಿ ಸಹಭಾಗಿತ್ವದಲ್ಲಿ ಆಸಕ್ತಿ ವ್ಯಕ್ತಪಡಿಸುವಿಕೆಗೆ (Expression of intrest) ಸೇಯ್ಲ್‌ ಬಿಡ್‌ ಕರೆದಿತ್ತು. ಆಗ ಅದರ ವಿರುದ್ಧ 73 ದಿನಗಳ ಕಾಲ ವಿಐಎಸ್‌ಎಲ್‌ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಬಿಡ್‌ದಾರರು ಯಾರೂ ಮುಂದೆ ಬಾರದ ಕಾರಣ ಆ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಪ್ರತಿಭಟನೆಯನ್ನು ಕಾರ್ಮಿಕರು ವಾಪಸ್‌ ಪಡೆದಿದ್ದರು. ಆದರೆ ಸರ್ಕಾರ ಮುಂದೆ ಬಂಡವಾಳ ಹಿಂತೆಗೆಯುವಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರಿಂದ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿತ್ತು.

ರಾಜ್ಯ ಸರ್ಕಾರದಿಂದ ಕಾರ್ಖಾನೆಗೆ ಅಗತ್ಯವಿರುವ ಗಣಿ ಮಂಜೂರಾತಿ ಮಾಡಿಸಿಕೊಡಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಬಂಡವಾಳ ತೊಡಗಿಸುವಂತೆ ಮನವಿ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ
– ಬಿ.ಕೆ. ಸಂಗಮೇಶ್ವರ, ಭದ್ರಾವತಿ ಶಾಸಕ
ಈ ಹಿಂದೆ ಉಕ್ಕುಪ್ರಾಧಿಕಾರದ ವ್ಯಾಪ್ತಿಯ ಹಲವು ಕಾರ್ಖಾನೆಗಳು ನಷ್ಟಕ್ಕೆ ಒಳಗಾಗಿದ್ದವು. ಅಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ವಿಐಎಸ್‌ಎಲ್ ವಿಚಾರದಲ್ಲಿ ಮಲತಾಯಿಧೋರಣೆ ಅನುಸರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು
–ಜೆ. ಎನ್. ಚಂದ್ರಹಾಸ ವಿಐಎಸ್ಎಲ್ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT