ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಹೊನ್ನೂರು | ಕಸ ಎತ್ತಲು ಮನೆ ಮನೆಗೆ ಬರುತ್ತಿಲ್ಲ ಆಟೊ

ಹೊಳೆಹೊನ್ನೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳ ಹಿಡಿದ ಸ್ವಚ್ಛ ಭಾರತ ಯೋಜನೆ
Last Updated 22 ನವೆಂಬರ್ 2022, 5:23 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾರಿಗೆ ತಂದ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಯೋಜನೆ ಸಾರ್ವಜನಿಕರ ಪ್ರಯೋಜನಕ್ಕೆ ಸಿಗುತ್ತಿಲ್ಲ. ಕಳೆದ ವರ್ಷ ಪ್ರತಿ ಗ್ರಾಮ ಪಂಚಾಯಿತಿಗೂ ಒಂದೊಂದು ಲಗ್ಗೇಜ್ ಆಟೊ, ಪ್ರತಿ ಮನೆಗೂ ಬಕೆಟ್ ವಿತರಿಸಲಾಗಿತ್ತು. ಆದರೆ ಅವು ಉಪಯೋಗಕ್ಕೆ ಬಾರದೇ ತಟಸ್ಥವಾಗಿವೆ.

ಗ್ರಾಮ ಪಂಚಾಯಿತಿಗಳಲ್ಲಿರುವ ಲಗ್ಗೇಜ್‌ ಆಟೊಗಳು ಕಸ ಎತ್ತಲು ಮನೆ ಮನೆಗೆ ಬರುತ್ತಿಲ್ಲ. ವರ್ಷದಲ್ಲಿ ಒಮ್ಮೆ ಸ್ವಚ್ಛತಾ ದಿನದಂದು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತಿದೆ. ಇನ್ನೂ ಕೆಲವು ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗಲು ಬಳಸಲಾಗುತ್ತಿದ್ದು, ಕೆಲವೆಡೆ ಜನರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.

‘ಒಂದು ಆಟೊದ ಬೆಲೆ ₹ 6.5 ಲಕ್ಷ ಎಂದು ಅಂದಾಜಿಸಲಾಗಿದ್ದು, ರಾಜ್ಯದಲ್ಲಿರುವ 5,963 ಗ್ರಾಮ ಪಂಚಾಯಿತಿಗಳಿಗೆ ₹ 387 ಕೋಟಿ ಖರ್ಚು ಮಾಡಲಾಗಿದೆ. ಇದರ ಜೊತೆ ಹೆಚ್ಚುವರಿ ಚಾಲಕರಿಗೆ ಭತ್ಯೆ, ಡೀಸೆಲ್ ಖರ್ಚು ನೀಡಲಾಗುತ್ತಿದೆ. ಪಟ್ಟಣದ ಸುತ್ತಮುತ್ತಲಿನ 16 ಗ್ರಾಮ ಪಂಚಾಯಿತಿಗಳಲ್ಲಿ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತಿದೆ’ ಎಂಬ ಮಾಹಿತಿ ಇದೆ.

‘ಮನೆಮನೆಗೂ ವಿತರಿಸಲಾಗಿದ್ದ ಬಕೆಟ್‌ಗಳು ನೀರು ತುಂಬಲು, ಬಟ್ಟೆ, ಪಾತ್ರೆ ತೊಳೆಯಲು ಉಪಯೋಗವಾಗುತ್ತಿದ್ದು ಕಸ ವಿಲೇವಾರಿಗೆ ಬಳಕೆ ಆಗಿದ್ದು ವಿರಳ. ವಾಣಿಜ್ಯ ಮಳಿಗೆಗಳಿಗೆ ಕಸದ ತೊಟ್ಟಿ ನೀಡಲಾಗಿದೆ. ಅದು ತುಂಬಿದಾಗ ಕಸ ತೆರವುಗೊಳಿಸಲು ಗ್ರಾಮ ಪಂಚಾಯಿತಿಗೆ ಪರಿಪರಿಯಾಗಿ ಕೇಳಬೇಕಾದ ಪರಿಸ್ಥಿತಿಯಿದೆ’ ಎನ್ನುತ್ತಾರೆ ವ್ಯಾಪಾರಿ ಆನವೇರಿ ಗ್ರಾಮದ ಅನಿಲ್ ಎಚ್‌.

ಕಸವಿಲೇವಾರಿ ಘಟಕ ಸಮಸ್ಯೆ: ‘ಶೇ 80ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಮಾಡಲು ನಿರ್ದಿಷ್ಟ ಸ್ಥಳವಿಲ್ಲ. ಅಲ್ಲದೇ ಕಸ ವಿಲೇವಾರಿ ಘಟಕ ಇಲ್ಲ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕು ಎಂದು ಸರ್ಕಾರದ ಆದೇಶವಿದೆ. ಗ್ರಾಮ ಪಂಚಾಯಿತಿಯೇ ಜನರ ತೆರಿಗೆ ಹಣ ಹಾಗೂ ನರೇಗಾ ಯೋಜನೆಯ ಹಣವನ್ನು ವಿನಿಯೋಗಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಾಗಿದೆ. ಗ್ರಾಮಾಡಳಿತ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಯೋಜನೆ ಹಳ್ಳ ಹಿಡಿಯುತ್ತಿದೆ. ಸಾರ್ವಾಜನಿಕರ ತೆರಿಗೆ ಹಣ
ಕೂಡ ವ್ಯಯವಾಗುತ್ತಿದೆ
ಎಂಬುದು ಸಾರ್ವಜನಿಕರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT