ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡ ನಡುಮನೆಯಲ್ಲಿ ಎರಡು ದಿನಕ್ಕೊಮ್ಮೆ ನೀರು!

ಹೊಸನಗರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ
Published 18 ಮೇ 2023, 0:38 IST
Last Updated 18 ಮೇ 2023, 0:38 IST
ಅಕ್ಷರ ಗಾತ್ರ

ಹೊಸನಗರ: ಬೇಸಿಗೆಯಲ್ಲಿ ಅಧಿಕ ತಾಪಮಾನ ದಾಖಲಾಗುತ್ತಿದ್ದು, ಸಕಾಲಿಕವಾಗಿ ಮಳೆ ಸುರಿಯದಿದ್ದರೆ ಹೊಸನಗರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಇಷ್ಟೊತ್ತಿಗಾಗಲೇ ಒಂದೆರಡು ಬಾರಿ ಮಳೆ ಸುರಿದಿತ್ತು. ಈ ಭಾರಿ ಮೋಡ ಕಟ್ಟಿದರೂ ಮಳೆ ಸುರಿಯದೇ ಇರುವುದರಿಂದ ಬಿಸಿಲ ಬೇಗೆ ಹೆಚ್ಚಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣ ಕಂಡುಬರತೊಡಗಿದೆ.

ಸದ್ಯ ಪಟ್ಟಣ ಪಂಚಾಯಿತಿಯಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಜನರಿಗೆ ಅಗತ್ಯದಷ್ಟು ನೀರು ಲಭ್ಯವಾಗುತ್ತಿಲ್ಲ. ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನೀರಿನ ಅಸಮರ್ಪಕ ಪೂರೈಕೆಯಿಂದ ಬೇಸತ್ತ ನಾಗರಿಕರು ಪಟ್ಟಣ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಲೆನಾಡ ನಡುಮನೆಯಾಗಿರುವ, ಹೆಚ್ಚು ಮಳೆ ಬೀಳುವ ಹೊಸನಗರದಲ್ಲೇ ನೀರಿನ ಬವಣೆ ಶುರುವಾಗಿದೆ

ಪಟ್ಟಣಕ್ಕೆ ನೀರು ಪೂರೈಸುವ ಸಮೀಪದ ಕಲ್ಲುಹಳ್ಳ ಜಾಕ್ವೆಲ್‌ನಲ್ಲಿ ನೀರಿನ ಮೂಲ ಬತ್ತತೊಡಗಿದೆ. ಮುಂಗಾರುಪೂರ್ವ ಮಳೆ ಬಾರದೇ ಇದ್ದಲ್ಲಿ ಪರಿಸ್ಥಿತಿ ವಿಷಮಗೊಳ್ಳುವ ಸಂಭವ ಇದೆ. ಇಲ್ಲಿನ 11 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸುಮಾರು 1,100 ಗೃಹ ಬಳಕೆ ಹಾಗೂ 100ಕ್ಕೂ ಹೆಚ್ಚು ವಾಣಿಜ್ಯ ಬಳಕೆಯ ಸಂಪರ್ಕವಿದೆ. ಇದಕ್ಕೆ ಕಲ್ಲುಹಳ್ಳದ ಜಾಕ್ವೆಲ್ ಏಕಮಾತ್ರ ಜಲಮೂಲವಾಗಿದೆ. ಕಲ್ಲುಹಳ್ಳ ಶರಾವತಿ ಹಿನ್ನೀರು ನಡುವಿನ ಹೊಳೆಯಾಗಿದೆ. ಇಲ್ಲಿ ಈಗಾಗಲೇ ನೀರಿನ ಹರಿವು ನಿಂತು ತಿಂಗಳುಗಳೇ ಕಳೆದಿವೆ. ಹೊಳೆಯ ನಡುವಿನ ಜಾಕ್ವೆಲ್‌ನಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಲಭ್ಯವಿದೆ. ಅಲ್ಲಿ ಕಟ್ಟೆ ಕಟ್ಟಿ ನೀರು ಸಂಗ್ರಹಿಸಿಟ್ಟು, ಪೂರೈಸುವ ಕಾರ್ಯ ನಡೆಯುತ್ತಿದೆ.

ಏಪ್ರಿಲ್ ಮೊದಲ ವಾರದಲ್ಲಿಯೇ ಹೊಳೆಯ ನೀರು ಬತ್ತಿದ ಪರಿಣಾಮ ಪಟ್ಟಣ ಪಂಚಾಯಿತಿ ಆಡಳಿತ ಜಾಕ್ವೆಲ್ ಸಮೀಪ 30 ಅಡಿ ಉದ್ದಗಲದ ಹೊಂಡ ತೆಗೆದು ನೀರನ್ನು ಸಂಗ್ರಹಿಸಿದೆ. ಇದೇ ನೀರನ್ನು ಈಗ ಶುದ್ಧೀಕರಿಸಿ ಪಟ್ಟಣಕ್ಕೆ ಪೂರೈಸಲಾಗುತ್ತಿದೆ. ಹೊಂಡದಲ್ಲಿ ಸಂಗ್ರಹ ಆಗುತ್ತಿರುವ ನೀರು ಬರಿದಾದಲ್ಲಿ ನಲ್ಲಿ ಮೂಲಕ ನೀರು ಸರಬರಾಜು ಅಸಾಧ್ಯವಾಗಲಿದೆ.

2019ರಲ್ಲೂ ಹೀಗೆ ಆಗಿತ್ತು:

2019ರಲ್ಲಿಯೂ ಹೀಗೆ ನೀರಿನ ಕೊರತೆ ಉಂಟಾಗಿ ಜನರು ಪರದಾಡುವಂತಾಗಿತ್ತು. ನಂತರ ಎರಡು ಮೂರು ವರ್ಷ ಆಗಾಗ ಮಳೆ ಆಗುತ್ತಿದ್ದರಿಂದ ನೀರಿನ ಕೊರತೆ ಕಾಣಿಸಿಕೊಂಡಿರಲಿಲ್ಲ. ಪ್ರಸಕ್ತ ವರ್ಷ ಹಿನ್ನೀರು ಪ್ರದೇಶದ ಸುತ್ತಮುತ್ತಲ ತೋಟಗಳಿಗೆ ನೀರಿನ ಬೇಡಿಕೆ ಹೆಚ್ಚಿದ್ದು, ಬಳಕೆ ಪ್ರಮಾಣವೂ ಹೆಚ್ಚಿದೆ. ಇದೂ ಜಾಕ್ವೆಲ್‌ನಲ್ಲಿ ನೀರಿನ ಕೊರತೆಗೆ ಪ್ರಮುಖ ಕಾರಣವಾಗಿದೆ.

ಪಟ್ಟಣದಲ್ಲಿ ಪ್ರತಿವರ್ಷವೂ ಕುಡಿಯುವ ನೀರಿನ ಬವಣೆ ತಪ್ಪದಾಗಿದೆ. ಮಳೆ ಬಂದರೂ ಬಾರದೇ ಇದ್ದರೂ ನೀರಿಲ್ಲ. ಪಟ್ಟಣ ಪಂಚಾಯಿತಿ ಸಮರ್ಪಕ ಯೋಜನೆ ಜಾರಿಗೊಳಿಸದೇ ಇರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.
-ಶಿವಕುಮಾರ್ ನಾಗರಿಕ

ಹಳ್ಳ ಹಿಡಿದ ಯೋಜನೆ:

ಶರಾವತಿ ನದಿಗೆ ಚೆಕ್‌ ಡ್ಯಾಂ ನಿರ್ಮಿಸಿ ಪಟ್ಟಣಕ್ಕೆ ನೀರು ಒದಗಿಸುವ ಯೋಜನೆ ಸಹ ಜಾರಿಗೆ ಬಂದಿಲ್ಲ. ಈ ಹಿಂದೆ ನಿರ್ಮಿಸಿದ್ದ ಚೆಕ್ ಡ್ಯಾಂ ಒಂದೇ ಮಳೆಗೆ ಕೊಚ್ಚಿಹೋಯಿತು. ಜನಪ್ರತಿನಿಧಿಗಳು ನೀಡಿದ ಭರವಸೆ ಎಳ್ಳಷ್ಟೂ ಜಾರಿಗೆ ಆಗಿಲ್ಲ. ಹೊಸದಾಗಿ ಬಂದ ಶಾಸಕರೆಲ್ಲ ಹೊಸ ಹೊಸ ಯೋಜನೆಗಳ ಆಶ್ವಾಸನೆ ಕೊಟ್ಟರು. ಮತ್ತೆ ಇತ್ತ ಮುಖ ಮಾಡಿಲ್ಲ ಎಂಬುದು ನಾಗರಿಕರ ಆರೋಪವಾಗಿದೆ.

ಅಗತ್ಯ ತಯಾರಿ ಪ್ರಸಕ್ತ ವರ್ಷ ನೀರಿನ ಹರಿವು ನಿರೀಕ್ಷೆಗೂ ಮೀರಿ ಕುಸಿತವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಇದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.
- ಬಾಲಚಂದ್ರಪ್ಪ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಹೊಸನಗರ

ಜಲಜೀವನ್ ಮಿಷನ್ ಅಡಿ ವಾರಾಹಿ ನದಿ ನೀರನ್ನು ಹರಿಸುವ ಯೋಜನೆ ಇನ್ನೂ ಡಿಪಿಆರ್ ಹಂತದಲ್ಲಿಯೇ ಉಳಿದಿದೆ. ಪ್ರತಿ ವರ್ಷವೂ ಬೇಸಿಗೆಯಲ್ಲಿ ಪಟ್ಟಣಕ್ಕೆ ಶುದ್ಧ ನೀರಿಗೆ ಬರ ಎನ್ನುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT