ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬತ್ತಿದ ತುಂಗೆ, ಕುಡಿಯುವ ನೀರಿಗೆ ಹಾಹಾಕಾರ

ತೀರ್ಥಹಳ್ಳಿ ತಾಲ್ಲೂಕು: 23 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ
Published 10 ಮೇ 2023, 19:40 IST
Last Updated 10 ಮೇ 2023, 19:40 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ಹೃದಯಭಾಗ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿಯ ಒಡಲು ಸಂಪೂರ್ಣ ಬರಿದಾಗಿದೆ. ನದಿಯ ತಟದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ತಲೆದೋರಿದೆ.

ತೀರ್ಥಹಳ್ಳಿ ತಾಲ್ಲೂಕಿನ 95 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಕಂಡುಬಂದಿದೆ. ಆರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 23 ಗ್ರಾಮಗಳಿಗೆ ಇದೇ ಮೊದಲ ಬಾರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.

‘ಪ್ರತೀ ಬಾರಿ ಮಲೆನಾಡಿನಲ್ಲಿ ಬೇಸಿಗೆಯಲ್ಲೂ ಒಂದೆರಡು ಬಾರಿ ದೊಡ್ಡ ಮಳೆ ಆಗಿ ನದಿಯಲ್ಲಿ ಒಂದಷ್ಟು ನೀರು ಇರುತ್ತಿತ್ತು. ಈ ಬಾರಿ ಮಳೆ ಸುರಿದಿಲ್ಲ. ಬಿಸಿಲ ಝಳ ಹೆಚ್ಚಿದೆ. ಹೀಗಾಗಿ ನದಿ ಪೂರ್ಣ ಬತ್ತಿ ಹೋಗಿದೆ. ಜನ–ಜಾನುವಾರು ಮಾತ್ರವಲ್ಲ ಸುತ್ತಲಿನ ಅರಣ್ಯ ಪ್ರದೇಶದಲ್ಲಿನ ಕಾಡು ಪ್ರಾಣಿಗಳಿಗೂ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿದೆ’ ಎಂದು ಚಕ್ಕೋಡುಬೈಲು ಗ್ರಾಮದ ಸಿ.ಎಸ್.ರಾಜೇಶ್ ಶೆಟ್ಟಿ ಹೇಳುತ್ತಾರೆ.

ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಸಾಮಾನ್ಯ. ಆದರೆ, ಮಲೆನಾಡಿನಲ್ಲಿ ಅದರಲ್ಲೂ ತೀರ್ಥಹಳ್ಳಿಯ ಭೌಗೋಳಿಕ ಪರಿಸರದಲ್ಲಿ ಈ ರೀತಿ ಹಾಹಾಕಾರ ಆಗಿರುವುದು ವಿಶೇಷ ಎಂದು ಅವರು ತಿಳಿಸುತ್ತಾರೆ.

ವಿದ್ಯುತ್‌ ಕಡಿತಕ್ಕೆ ಸೂಚನೆ: ತುಂಗಾ ನದಿ ಪಾತ್ರದಲ್ಲಿನ ತೋಟಗಳಿಗೆ ರೈತರು ಪಂಪ್‌ಸೆಟ್‌ ಮೂಲಕ ನದಿ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇದು  ನದಿಯ ಒಡಲು ಬರಿದಾಗಲು ಕಾರಣವಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ಹೀಗಾಗಿ ತೋಟಗಳಿಗೆ ನಿತ್ಯ ನೀರು ಹಾಯಿಸುವುದು ತಪ್ಪಿಸಲು ವಾರಕ್ಕೆ ಎರಡು ಬಾರಿ ಮಾತ್ರ ವಿದ್ಯುತ್ ಪೂರೈಸುವಂತೆ ಮೆಸ್ಕಾಂಗೆ ಜಿಲ್ಲಾಡಳಿತ ಸೂಚಿಸಿದೆ.

‘ತಾಲ್ಲೂಕಿನಲ್ಲಿ ಫೆಬ್ರುವರಿಯಿಂದ ಕುಡಿಯುವ ನೀರಿಗೆ ಸಮಸ್ಯೆ ಕಾಣಿಸಿಕೊಂಡಿದೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಾಗಿದೆ. ಶಿವಮೊಗ್ಗ, ಹೊಸನಗರದಲ್ಲಿ ಮಳೆ ಸುರಿಯುತ್ತಿದೆ. ಆದರೆ, ನಮ್ಮಲ್ಲಿ ಮಳೆಯ ಸುಳಿವಿಲ್ಲ. ಇದರಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ’ ಎಂದು ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಎನ್‌.ಶೈಲಾ ಹೇಳುತ್ತಾರೆ.

‘ಅಂತರ್ಜಲ ಕುಸಿತ ಕೂಡ ಆಗಿದೆ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 500ರಿಂದ 600 ಅಡಿ ಕೊರೆದರೂ ನೀರು ಸಿಕ್ಕಿಲ್ಲ. ಮೂರು ಕಡೆ ಕೊಳವೆ ಬಾವಿ ಕೊರೆಯಿಸಿದರೆ ಎರಡು ಕಡೆ ವಿಫಲವಾಗುತ್ತಿವೆ. ಇರುವ ಕೊಳವೆ ಬಾವಿಗಳನ್ನು ಆಳಕ್ಕೆ ಕೊರೆಯಿಸಿ, ಬಾವಿಗಳಿಗೆ ರಿಂಗ್ ಅಳವಡಿಸಿ ನೀರು ಸಂಗ್ರಹಿಸುತ್ತಿದ್ದೇವೆ. ಬೇರೆ ಮೂಲಗಳಿಂದ ನೀರು ಕೊಡಲು ಸಾಧ್ಯವಾಗದ ಕಡೆ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ’ ಎಂದು ಹೇಳಿದರು.

ಚಿಬ್ಬಲಗುಡ್ಡೆ ಸಮೀಪ ತುಂಗಾ ನದಿಯ ಮತ್ಸ್ಯಾಧಾಮದ ವ್ಯಾಪ್ತಿಯ ಪ್ರದೇಶ ನೀರಿಲ್ಲದೇ ಬಣಗುಡುತ್ತಿದೆ.
ಪ್ರಜಾವಾಣಿ ಚಿತ್ರ: ವಿ.ನಿರಂಜನ
ಚಿಬ್ಬಲಗುಡ್ಡೆ ಸಮೀಪ ತುಂಗಾ ನದಿಯ ಮತ್ಸ್ಯಾಧಾಮದ ವ್ಯಾಪ್ತಿಯ ಪ್ರದೇಶ ನೀರಿಲ್ಲದೇ ಬಣಗುಡುತ್ತಿದೆ. ಪ್ರಜಾವಾಣಿ ಚಿತ್ರ: ವಿ.ನಿರಂಜನ

ಕುಡಿಯುವ ನೀರಿಗಾಗಿ ಚುನಾವಣೆ ಬಹಿಷ್ಕಾರ!

ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೂರು ಗ್ರಾಮಸ್ಥರು ಚುನಾವಣೆ ಬಹಿಷ್ಕಾರಿಸಲು ನಿರ್ಧರಿಸಿದ್ದರು. ಮಲೆನಾಡಿನಲ್ಲಿ ರಸ್ತೆ ಕಾಲುಸಂಕಕ್ಕೆ ಬೇಡಿಕೆ ಇರಿಸಿ ಮತದಾನ ಬಹಿಷ್ಕಾರಕ್ಕೆ ಮುಂದಾಗುವುದು ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಕುಡಿಯುವ ನೀರಿಗಾಗಿ ಚುನಾವಣೆಯ ಬಹಿಷ್ಕಾರದ ಬೆದರಿಗೆ ಒಡ್ಡಲಾಗಿದೆ. ಗ್ರಾಮಸ್ಥರ ಅಳಲಿಗೆ ಸ್ಪಂದಿಸಿದ ತಾಲ್ಲೂಕು ಪಂಚಾಯಿತಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದೆ.

ಮೀನುಗಳ ರಕ್ಷಣೆಯೇ ಸವಾಲು..

ತೀರ್ಥಹಳ್ಳಿ ತಾಲ್ಲೂಕಿನ ಚಿಬ್ಬಲಗುಡ್ಡೆ ಸಮೀಪ ತುಂಗಾ ನದಿಯ 500 ಮೀಟರ್ ಪ್ರದೇಶವನ್ನು ಸರ್ಕಾರ ಮತ್ಸ್ಯಧಾಮ ಎಂದು ಗುರುತಿಸಿದೆ. ಸ್ಥಳೀಯರು ‘ದೇವರ ಮೀನು’ ಎಂದು ಕರೆಯುವ ಮಹಶೀರ್ ಪ್ರಭೇದದ ಮೀನುಗಳು ಅಲ್ಲಿ ಕಾಣಸಿಗುತ್ತವೆ. ಅಲ್ಲಿ ನೀರು ಕಡಿಮೆ ಆಗಿರುವ ಕಾರಣ ಮೀನುಗಳಿಗೆ ಅಪಾಯ ಎದುರಾಗಿದೆ. ಇದೇ ಮೊದಲ ಬಾರಿಗೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸೂಚಿಸಿ ನದಿಯಲ್ಲಿನ ಮೋಟಾರ್ ಪಂಪ್ ಸೆಟ್ ತೆರವುಗೊಳಿಸಲಾಗಿದೆ. ಇನ್ನು ಮಳೆಯೇ ಬರಬೇಕು. ಅದೊಂದೇ ನಮಗೆ ಇರುವ ಪರಿಹಾರ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಹನಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT