ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ರೋಗಕ್ಕೆ ತುತ್ತಾಗುವ ಯುವಕರು: ಡಾ.ಒ.ಎಸ್‌.ಸಿದ್ದಪ್ಪ ಕಳವಳ

Last Updated 29 ಸೆಪ್ಟೆಂಬರ್ 2021, 12:52 IST
ಅಕ್ಷರ ಗಾತ್ರ

ಶಿವಮೊಗ್ಗ: ಜೀವನಶೈಲಿ ಬದಲಾವಣೆಯ ಪರಿಣಾಮ ಯುವಜನರು ಸಹ ಹೃದ್ರೋಗ, ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಒ.ಎಸ್‌.ಸಿದ್ದಪ್ಪ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯವೂ ನಿಯಮಿತ ವ್ಯಾಯಾಮ ಅಗತ್ಯ. ಸುಸ್ತು, ಬೆವರುವುದು, ಮೇಲ್ಭಾಗದ ಹೊಟ್ಟೆಯಲ್ಲಿ ತೊಂದರೆಯಾದರೆ ಸ್ವಯಂ ಔಷಧೋಪಚಾರ ಮಾಡುವ ಬದಲು ತಕ್ಷಣ ಇಸಿಜಿ ಮಾಡಿಸಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹೃದ್ರೋಗ ವಿಭಾಗ ಆರಂಭವಾಗಿದೆ. ಸಂಸ್ಥೆಯಲ್ಲಿ ಉತ್ತಮ ಕಾರ್ಡಿಯಾಲಜಿ ವಿಭಾಗವಿದೆ. ಇನ್ನೊಂದು ವರ್ಷದಲ್ಲಿ ಎಂಸಿಎ ನಿಯಮಾವಳಿ ಅನ್ವಯ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈಗಾಗಲೇ ನಾಲ್ವರು ಕಾರ್ಡಿಯಾಲಜಿ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಾಲ್ಕು ಹುದ್ದೆ ತುಂಬಿದರೆ ಪೂರ್ಣ ಪ್ರಮಾಣದಲ್ಲಿ ವಿಭಾಗ ಕೆಲಸ ಮಾಡಬಹುದು. 50 ಹಾಸಿಗೆಯ ಹೃದ್ರೋಗ ಆಸ್ಪತ್ರೆ ಮಂಜೂರಾಗಿಗಿದೆ. ರೇಡಿಯಾಲಜಿ ವಿಭಾಗ ಕೂಡ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಶುಶ್ರೂಷಕರ 95 ಹುದ್ದೆ ಖಾಲಿ ಇವೆ. ಸರ್ಕಾರ ಸಂಸ್ಥೆಗೆ 150 ‘ಡಿ’ ಗ್ರೂಪ್ ಹುದ್ದೆ ಮಂಜೂರು ಮಾಡಿದೆ ಎಂದು ವಿವರ ನೀಡಿದರು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಶೇ 80ರಷ್ಟು ಸಾವು ಹೃದಯ ಸ್ತಂಭನ ಮತ್ತು ಹೃದ್ರೋಗದಿಂದ ಸಂಭವಿಸುತ್ತಿದೆ. 25 ವರ್ಷದ ಒಳಗಿನ ಯುವಜನರೂ ಸಮಸ್ಯೆ ಎದರಿಸುತ್ತಿರುವುದು ಖೇದಕರ ಸಂಗತಿ. ಇದಕ್ಕೆಲ್ಲ ಪ್ರಮುಖ ಕಾರಣ ಜೀವನಶೈಲಿ, ತಂಬಾಕು ವಸ್ತುಗಳ ಸೇವನೆ, ಆಹಾರ ಪದ್ಧತಿ ಮತ್ತು ಒತ್ತಡ ಎಂದು ವಿಶ್ಲೇಷಿಸಿದರು.

ಯಾಂತ್ರಿಕ ಜೀವನ ಶೈಲಿ ಬದಲಾಯಿಸಿಕೊಂಡು ಉತ್ತಮ ಆಹಾರ ಪದ್ಧತಿಯೊಂದಿಗೆ ಆರೋಗ್ಯಕ್ಕೆ ಅಗತ್ಯವಾದ ವ್ಯಾಯಾಮ, ವಾಯು ವಿಹಾರ ರೂಢಿಸಿಕೊಳ್ಳುವುದರ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.

ಪ್ರಸ್ತಾವಿಕ ಮಾತನಾಡಿದ ಹೃದಯ ವಿಭಾಗದ ಮುಖ್ಯಸ್ಥ ಡಾ.ಪರಮೇಶ್ವರಪ್ಪ, ಅವಿರತ ದುಡಿಯುವ ಹೃದಯ ಸಂರಕ್ಷಿಸಬೇಕು. ಪ್ರಸ್ತುತ ಹೃದ್ರೋಗ ವಿಶ್ವದ ಮೊದಲನೆ ಪಾತಕಿ. ವಿಶ್ವ ಆರೋಗ್ಯ ಸಂಸ್ಥೆ ಹೃದಯ ರೋಗಗಳ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆ.29ರಂದು ವಿಶ್ವ ಹೃದಯ ದಿನಾಚರಣೆ ಹಮ್ಮಿಕೊಳ್ಳುತ್ತಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ, ಆರ್‌ಸಿಎಚ್‌ಒ ನಾಗರಾಜ್ ನಾಯಕ್, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಡಾ.ಎಂ.ಡಿ.ಕಟ್ಟಿ. ಡಾ.ಮಹೇಶ್ ಮೂರ್ತಿ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT