ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ– ವನ್ಯಜೀವಿ ಸಂಘರ್ಷ ತಪ್ಪಿಸಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಸರ್ಕಾರಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ
Last Updated 5 ಜನವರಿ 2023, 6:08 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜ್ಯದಲ್ಲಿ ಮಾನವ– ವನ್ಯಜೀವಿ ನಡುವೆ ಸಂಘರ್ಷ ಹೆಚ್ಚುತ್ತಿದೆ. ಅದನ್ನು ತಪ್ಪಿಸುವ ಬಗೆ, ಪರಿಸರ, ವಾತಾವರಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಯಾರು ಏನೂ ಮಾತಾಡುತ್ತಿಲ್ಲ. ಸರ್ಕಾರ ವನ್ಯಜೀವಿ ಸಂರಕ್ಷಣೆ ಕಡೆ ಕಾಳಜಿ ತೋರಬೇಕಿದೆ’ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.

ಇಲ್ಲಿನ ಡಿವಿಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಅಯೋಜಿಸಿದ್ದ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮಕ್ಕಳೊಂದಿಗಿನ ಸಂವಾದದ ವೇಳೆ, ರಾಜವಂಶಸ್ಥರಾಗಿ ಜನಪರ ಆಡಳಿತ ನೀಡಲು ಸರ್ಕಾರಕ್ಕೆ ಏನು ಸಲಹೆ ಕೊಡುತ್ತೀರಿ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ರಾಜವಂಶಸ್ಥನಾಗಿ ಅಲ್ಲ ಬದಲಿಗೆ ಸರ್ಕಾರಕ್ಕೆ ಸಾಮಾನ್ಯ ಪ್ರಜೆಯಾಗಿ ಸಲಹೆ ಕೊಡುವೆ. ವನ್ಯಜೀವಿ ಸಂರಕ್ಷಣೆ ಕಡೆ ಆದಷ್ಟು ಕಾಳಜಿ ವಹಿಸಬೇಕಿದೆ. ಇದರಿಂದ ನಾಡಿನ ಎಲ್ಲ ವನ್ಯಜೀವಿ ಪ್ರೇಮಿಗಳಿಗೂ ಸಂತೋಷವಾಗಲಿದೆ. ಜನಪರ ನೀತಿ–ನಿಯಮ ತರಬೇಕಾದರೆ ಮೈಸೂರು ಸಂಸ್ಥಾನದಲ್ಲಿ ಯಾವ ರೀತಿ ಆಡಳಿತ ನಡೆಯುತ್ತಿತ್ತು ಎಂಬುದನ್ನು ನೋಡಿಕೊಂಡು ಅದೇ ಆದರ್ಶದಲ್ಲಿ ಅಳುವವರು ನಡೆಯಲಿ’ ಎಂದು ಕಿವಿಮಾತು ಹೇಳಿದರು.

ಹಿಂದಿನ ಮೈಸೂರು ಮಹಾರಾಜರ ಕಾಲದ ವೈಭವವನ್ನು ಮತ್ತೆ ಕಾಣಬೇಕಾದರೆ ಅವರ ಹಾಗೆ ದೂರದರ್ಶಿತ್ವದ ಯೋಜನೆಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ರೂಪಿಸಬೇಕಿದೆ ಎಂದು ಹೇಳಿದ ಅವರು, ‘ಆ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಪ್ರಜೆಗಳು ಮತ್ತು ಆಡಳಿತ ವರ್ಗ ಮೈಸೂರು ಸಂಸ್ಥಾನಕ್ಕಾಗಿ ಕೆಲಸ ಮಾಡುತ್ತಿತ್ತು. ಮತ್ತು ಅತ್ಯಂತ ಪ್ರಾಮಾಣಿಕ ಹಾಗೂ ಆದರ್ಶಮಯವಾಗಿ ರಾಜರ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದರು. ಹಾಗಾಗಿ ಅಂದು ಮಹಾರಾಜರು ಕಟ್ಟಿದ ಸಂಸ್ಥೆಗಳು ನೂರಾರು ತಲೆಮಾರಿಗೆ ಉಪಯೋಗಕ್ಕೆ ಬರುವಂತಾಗಿದೆ’ ಎಂದರು.

‘ಮಹಾರಾಜರ ದೂರದರ್ಶಿತ್ವದ ಕೊಡುಗೆಗಳು ಶಿವಮೊಗ್ಗದಲ್ಲೂ ಕಾಣಬಹುದು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೂರು ವರ್ಷ ಪೂರೈಸಿ ಇನ್ನು ಯಶಸ್ವಿಯಾಗಿ ಮುಂದುವರಿದಿದೆ. ಯಾವ ಬೀಜ ನೆಟ್ಟರೆ ಉತ್ತಮ ಫಲ ಸಿಗುತ್ತದೆ ಎಂಬ ಅರಿವು ಅವರಿಗಿತ್ತು. ಸಂಸ್ಥೆಗಳನ್ನು ಕಟ್ಟುವಾಗ ನೂರಾರು ವರ್ಷ ಯೋಚನೆ ಮಾಡಿ ಕಟ್ಟಬೇಕಾಗಿದೆ. ಗ್ರಾಮ ಮತ್ತು ನಗರಗಳಲ್ಲಿ ಪರಿಸರವನ್ನು ಉಳಿಸಬೇಕಾಗಿದೆ. ಅದಕ್ಕಾಗಿ ಪೂರ್ವಜರ ಪದ್ಧತಿಯನ್ನು ಅನುಸರಿಸಬೇಕು. ಈಗ ಎಲ್ಲರಿಗೂ ಸುಲಭದ ಕೆಲಸ ಕೂಡ ಕಷ್ಟವಾಗಿದೆ. ಮನೆಯಿಂದ ಯಾರೂ ಕೈಚೀಲ ತೆಗೆದುಕೊಂಡು ಹೋಗಲ್ಲ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಸಂಪೂರ್ಣ ನಾಶವಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಪರಿಸರ ನಾಶವಾದರೆ ಸಮಾಜವೇ ನಾಶವಾದಂಗೆ’ ಎಂದರು.

‘ಡಿವಿಎಸ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಅದೇ ರೀತಿ ಅತ್ಯುತ್ತಮ ಸಂಸ್ಥೆಗಳು ಕಟ್ಟಬೇಕಾಗಿದೆ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ಈ ಕಾಲದಲ್ಲಿ ಎಲ್ಲರೂ ಕೂಡ ನಮ್ಮ ರಾಜ್ಯ, ದೇಶದ ಬಗ್ಗೆ ಅಭಿಮಾನವಿಟ್ಟು ಕೆಲಸ ಮಾಡಬೇಕಾಗಿದೆ’ ಎಂದರು.

ಡಿವಿಎಸ್ ಸಂಸ್ಥೆಯ ವತಿಯಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಿವಿಎಸ್ ಸಂಸ್ಥೆಯ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ, ಉಪಾಧ್ಯಕ್ಷ ಎಸ್.ಪಿ. ದಿನೇಶ್, ಕಾರ್ಯದರ್ಶಿ ಎಸ್. ರಾಜಶೇಖರ್, ಸಹ ಕಾರ್ಯದರ್ಶಿ ಡಾ.ಎ. ಸತೀಶ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಎಂ.ರಾಜು, ಜಿ. ಮಧುಸೂದನ್, ಡಿ.ಬಿ. ಅವಿನಾಶ್, ಎಚ್. ಮಂಜುನಾಥ್, ಎನ್.ಆರ್. ನಿತಿನ್, ಬಿ. ಗೋಪಿನಾಥ್, ಕೆ. ಬಸಪ್ಪಗೌಡ, ಡಾ.ಎಂ. ವೆಂಕಟೇಶ್, ಎಚ್.ಸಿ. ಉಮೇಶ್ ಇದ್ದರು.

ಮೀನಾಕ್ಷಿ ಭವನದ ಕಾಫಿ, ಸಿಹಿಮೊಗ್ಗೆಯ ಚೆಲುವು..

ಶಿವಮೊಗ್ಗದ ಮೀನಾಕ್ಷಿ ಭವನದಲ್ಲಿ ಉಪಾಹಾರ ಸ್ವೀಕರಿಸಿ ಕಾಫಿ ಕುಡಿದಿದ್ದನ್ನು ಪ್ರಸ್ತಾಪಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ‘ಮೈಸೂರಿಗೆ ಮರಳಿದರೂ ಇನ್ನೂ ಎರಡು ದಿನ ಕಾಫಿ ಕುಡಿಯುವುದಿಲ್ಲ. ಬುಧವಾರ ಬೆಳಿಗ್ಗೆಯಿಂದಲೇ ಬೇರೆ ಬೇರೆ ಕಡೆ ನನಗೆ ಅಷ್ಟೊಂದು ಕಾಫಿಯ ಆತಿಥ್ಯ ಸಿಕ್ಕಿದೆ’ ಎಂದು ಹೇಳಿದರು. ಸಭೆ ನಗೆಗಡಲಲ್ಲಿ ತೇಲಿತು.

ಶಿವಮೊಗ್ಗದ ಮಲೆನಾಡಿನ ಸಂಸ್ಕೃತಿ, ಚೆಲುವು, ಇಲ್ಲಿನ ವಾತಾವರಣ ಇನ್ನೂ ಮೈಸೂರು ಪ್ರಾಂತ್ಯದ ಪರಂಪರೆಯನ್ನು ಉಳಿಸಿಕೊಂಡಿದೆ. ಹೀಗಾಗಿ ಇಲ್ಲಿಗೆ ಬರುವುದು ನನಗೆ ಸಂತಸ ಎಂದು ಹೇಳಿದ ಅವರು, ಸಂವಾದದ ವೇಳೆ ವಿದ್ಯಾರ್ಥಿಗಳ ಎಲ್ಲ ಪ್ರಶ್ನೆಗಳಿಗೂ ಶಾಂತಚಿತ್ತದಿಂದ ಉತ್ತರಿಸಿ ನೆರೆದವರ ಮನಗೆದ್ದರು.

ರಾಜವಂಶದ ಯಾವುದೇ ಹೆಚ್ಚುಗಾರಿಕೆ ತಮಗಿಲ್ಲ. ದೇಶದ ಸಂವಿಧಾನಕ್ಕೆ ಬದ್ಧವಾಗಿರುವ ಸಾಮಾನ್ಯ ನಾಗರಿಕ ತಾವು ಎಂದು ಸಂವಾದದ ವೇಳೆ ಮನದಟ್ಟು ಮಾಡಿದಾಗ ಕರತಾಡನ ಮುಗಿಲುಮುಟ್ಟಿತು. ಮೈಸೂರು ಸಾಮ್ರಾಜ್ಯ ಬೆಳೆದು ಬಂದ ಬಗೆ, ಅಂದಿನ ಮಹಾರಾಜರ ಜನಪರ ಕಾರ್ಯಗಳು, ಮೀಸಲಾತಿ ನೀಡಿಕೆಯ ಬಗ್ಗೆ ಎದುರಾದ ಪ್ರಶ್ನೆಗಳಿಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT