ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ₹87.51 ಕೋಟಿ ಅನುದಾನ

ಅಭಿವೃದ್ಧಿ ಯೋಜನೆಗಳ ಪ್ರತಿಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ
Last Updated 19 ಜೂನ್ 2019, 14:45 IST
ಅಕ್ಷರ ಗಾತ್ರ

ಶಿವಮೊಗ್ಗ:ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗಾಗಿ ಈ ಸಾಲಿನಲ್ಲಿ ಜಿಲ್ಲೆಗೆ ₹ 87.51 ಕೋಟಿ ಅನುದಾನ ಲಭ್ಯವಿದೆ.ಭವಿಷ್ಯದಲ್ಲಿ ಬರದ ಪರಿಸ್ಥಿತಿ ಸಮರ್ಪಕವಾಗಿ ಎದುರಿಸಲು ಗ್ರಾಮೀಣ ಪ್ರದೇಶದಲ್ಲಿ ಹರಿಯುವ ಸಣ್ಣಸಣ್ಣ ಹಳ್ಳ ತೊರೆಗಳಿಗೆ 20 ಸಾವಿರ ಚೆಕ್‌ಡ್ಯಾಂ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತುರ್ತು ನೀರಿನ ವ್ಯವಸ್ಥೆಗಾಗಿ ಪ್ರಸ್ತುತ ₹4.05 ಕೋಟಿ ಪ್ರಸ್ತಾವ ಸಲ್ಲಿಸಿದ್ದರು. ತಕ್ಷಣ ₨ 3.05 ಕೋಟಿ ಬಿಡುಗಡೆ ಮಾಡಲಾಗಿದೆ. 36 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗಿದೆ.ಸಮಸ್ಯೆ ಇರುವ 136 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ

ಜಿಲ್ಲೆಯಲ್ಲೂ ಪ್ರತಿ ಪಂಚಾಯಿತಿಗೆ ಕನಿಷ್ಠ 5 ಚೆಕ್‌ಡ್ಯಾಂ ನಿರ್ಮಿಸಲು ಸೂಚಿಸಲಾಗಿದೆ. ಪ್ರತಿ ಚೆಕ್‌ಡ್ಯಾಂಗೆ₨ 5ರಿಂದ 6ಲಕ್ಷ ವೆಚ್ಚ ಮಾಡಬಹುದು. ಇದರಿಂದಆ ಭಾಗಗಳಲ್ಲಿ ಬೇಸಿಗೆಯಲ್ಲೂ ನೀರು ದೊರಕುತ್ತದೆ ಎಂದರು.

6 ಸಾವಿರ ದನದ ಕೊಟ್ಟಿಗೆ:

ಜಿಲ್ಲೆಯಲ್ಲಿ 22,432 ಕುಟುಂಬಗಳು ಪಶು ಸಂಗೋಪನೆಯಲ್ಲಿ ತೊಡಗಿವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 2019–20ನೇ ಸಾಲಿಗೆ ಜಿಲ್ಲೆಯಲ್ಲಿ 6 ಸಾವಿರ ದನದ ಕೊಟ್ಟಿಗೆ ನಿರ್ಮಿಸಲು ನಿರ್ಧರಿಸಲಾಗಿದೆ. ಪ್ರತಿ ಕೊಟ್ಟಿಗೆ ನಿರ್ಮಾಣಕ್ಕೆ ₹19,600 ನೀಡಲಾಗುವುದು ಎಂದರು.

ಮಳೆ ಕೊರತೆಗೆ ಅರಣ್ಯ ನಾಶವೂ ಒಂದು ಕಾರಣ. ಅದಕ್ಕಾಗಿ ರಾಜ್ಯದಲ್ಲಿ ಈ ವರ್ಷ 2 ಕೋಟಿ ಸಸಿ ನೆಡಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ 1.35 ಲಕ್ಷ ಸಸಿ ವಿತರಿಸಲಾಗುವುದು ಎಂದು ವಿವರ ನೀಡಿದರು.

ಎಂಜಿನಿಯರ್‌ಗಳಿಗೆ ತರಾಟೆ:

ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡುವ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಹಲವು ಯೋಜನೆಗಳ ಕಾಮಗಾರಿ ಮುಗಿದಿದ್ದರೂ ಬಿಲ್‌ ಮಾಡದೆ ವಿಳಂಬ ಮಾಡಿದ ಕಾರಣ ಮುಂದಿನ ಅನುದಾನ ಬಿಡುಗಡೆಗೆ ಸಮಸ್ಯೆಯಾಗಿದೆ. ಎಂಜಿನಿಯರ್‌ಗಳು ನಿರ್ಲಕ್ಷ್ಯ ಮಾಡಬಾರದು. ಉಳಿದ ಹಣ ಮುಂದೆ ಬಳಸಿಕೊಳ್ಳಬಹುದು ಎಂಬ ಧೋರಣೆ ಮೊದಲು ಕೈಬಿಡಬೇಕು. ಪ್ರತಿ 15 ದಿನಗಳಿಗೆ ಒಮ್ಮೆ ಬಿಲ್‌ ನಿರ್ವಹಣೆ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕರಾದ ಕುಮಾರ್ ಬಂಗಾರಪ್ಪ, ಹಾಲಪ್ಪ ಹರತಾಳು ಮಾತನಾಡಿ, ಹಲವು ಶಾಲೆಗಳಲ್ಲೂ ಮಕ್ಕಳಿಗೆ ಕುಡಿಯುವ ನೀರಿಲ್ಲ. ಬಿಸಿಯೂಟ ತಯಾರಿಕೆಗೂ ತೊಂದರೆಯಾಗಿದೆ ಎಂದು ದೂರಿದರು.

ಎಲ್ಲ ಶಾಲೆಗಳಿಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವು ಶಾಲೆಗಳಲ್ಲಿ ಸಮಸ್ಯೆಯಾಗಿದ್ದರೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ಭರವಸೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಡಿಕೆ ತೋಟ ಅಭಿವೃದ್ಧಿಯ ಜತೆಗೆ, ಇತರೆ ಬೆಳೆಗಳಿಗೂ ಆದ್ಯತೆ ನೀಡಲಾಗುವುದು. ಎಕರೆಗೆ ಒಟ್ಟು ₹1.17 ಲಕ್ಷ ನೀಡಲಾಗುವುದು. ಅದಕ್ಕಾಗಿ ₨ 25 ಕೋಟಿ ವ್ಯಯಿಸಲಾಗುತ್ತಿದೆ. ಜಿಲ್ಲೆಯ 427 ನೀರಿನ ಮೂಲಗಳಲ್ಲಿ ಹೂಳೆತ್ತಲು ಯೋಜನೆ ರೂಪಿಸಲಾಗಿದೆ ಎಂದರು.

832 ಶಾಲೆಗಳಿಗೆ ಕಾಂಪೌಂಡ್ ಇಲ್ಲ:

ಜಿಲ್ಲೆಯಲ್ಲಿ 1854 ಪ್ರಾಥಮಿಕ, 164 ಪ್ರೌಢಶಾಲೆಗಳಿವೆ. ಅವುಗಳಲ್ಲಿ 832 ಶಾಲೆಗಳಿಗೆ ಕಾಂಪೌಂಡ್ ಇಲ್ಲ ಎಂದು ಡಿಡಿಪಿಐ ಸುಮಂಗಲಾ ವಿವರ ನೀಡಿದರು.

ಸೊರಬ ತಾಲ್ಲೂಕು ಹರೀಶಿ ಗ್ರಾಮ ಪಂಚಾಯಿತಿಯ ಐವರು ಸದಸ್ಯರು ರಾಜೀನಾಮೆ ನೀಡಿ 10 ತಿಂಗಳಾದರೂ ಚುನಾವಣೆ ನಡೆಸಿಲ್ಲ. ಸ್ಥಿತಿಗತಿ ಕುರಿತು ಉಪ ವಿಭಾಗಾಧಿಕಾರಿ ಮಾಹಿತಿಯನ್ನೇ ನೀಡುತ್ತಿಲ್ಲ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ದೂರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಕೆ.ಎ.ದಯಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT