ಎಲ್ಲ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ಘಟಕ

ಶಿವಮೊಗ್ಗ: ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ, ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ 271 ಗ್ರಾಮ ಪಂಚಾಯಿತಿಗಳಲ್ಲಿ 53ರಲ್ಲಿ ಘಟಕ ಸ್ಥಾಪನೆಗೆ ಜಮೀನು ಗುರುತಿಸಲಾಗಿದೆ. 48 ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದೆ. ಕೇವಲ 12 ಪಂಚಾಯಿತಿಗಳು ಕಾರ್ಯ ಆರಂಭಿಸಿವೆ. ಜಮೀನು ಅಂತಿಮಗೊಳಿಸದ ಕಡೆ ಹಳೆ ಕಟ್ಟಡಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸಬೇಕು. ಈಗಾಗಲೇ ಅನುದಾನ ಬಿಡುಗಡೆಯಾಗಿರುವ ಪಂಚಾಯಿತಿಗಳಲ್ಲಿ ವಾಹನ ಖರೀದಿ, ಬಕೆಟ್ ಖರೀದಿ, ಶೆಡ್ ನಿರ್ಮಾಣ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪ್ರತಿ ಮನೆಗೆ ಕುಡಿಯುವ ನೀರು:
ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಮನೆ ಮನೆಗೆ ಗಂಗೆ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಪ್ರತಿ ಮನೆಗೂ ನೀರು ಸರಬರಾಜು ಮಾಡುವ ಈ ಯೋಜನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಈಗಾಗಲೇ ನಲ್ಲಿ ಸಂಪರ್ಕ ಇರುವ ಮನೆಗಳನ್ನು ಹೊಸದಾಗಿ ಕ್ರಿಯಾ ಯೋಜನೆಯಲ್ಲಿ ಸೇರಿಸಬಾರದು. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಆಯಾ ಗ್ರಾಮ ಪಂಚಾಯತಿಗಳೇ ನಿರ್ವಹಿಸಬೇಕು. ಅದಕ್ಕಾಗಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಉದ್ಯೋಗ ಖಾತ್ರಿ ಅನುಷ್ಠಾನ: ಉದ್ಯೋಗ ಖಾತ್ರಿಗೆ ಈ ವರ್ಷ ₨ 218 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಎಲ್ಲಾ ಇಲಾಖೆಗಳೂ ತಮಗೆ ನಿಗದಿಪಡಿಸಿರುವ ಮಾನವ ದಿನಗಳ ಗುರಿ ಪೂರ್ಣಗೊಳಿಸಬೇಕು. ಸಾಮಾಜಿಕ ಅರಣ್ಯ ಇಲಾಖೆ ಇದುವರೆಗೆ ಯಾವುದೇ ಗುರಿ ಸಾಧಿಸಿಲ್ಲ. ಹಿಂದಿನ ವರ್ಷದ ಅಪೂರ್ಣ ಕಾಮಗಾರಿ ತಕ್ಷಣ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ವೈಜ್ಞಾನಿಕ ತೆರಿಗೆ ನಿಗದಿ: ಎಲ್ಲ ಗ್ರಾಮ ಪಂಚಾಯಿತಿಗಳೂ ಎರಡು ವರ್ಷಗಳಿಗೊಮ್ಮೆ ಮೌಲ್ಯ ಮಾಪನ ಮಾಡಿ ವೈಜ್ಞಾನಿಕ ತೆರಿಗೆ ನಿಗದಿಪಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅತೀಕ್ ಸೂಚಿಸಿದರು.
ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್, ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.