ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತಿಂಗಳಲ್ಲಿ 336 ಶಿಶುಗಳ ಮರಣ!

ಹಲವು ಸೌಲಭ್ಯಗಳಿದ್ದರೂ ಸಾಧ್ಯವಾಗದ ತಾಯಂದಿರ ಜೀವ ರಕ್ಷಣೆ
Last Updated 14 ಡಿಸೆಂಬರ್ 2016, 9:25 IST
ಅಕ್ಷರ ಗಾತ್ರ

ಶಿವಮೊಗ್ಗ:  ಶಿಶು ಮರಣ ತಡೆಯಲು ಸರ್ಕಾರ ಹಲವು ಯೋಜನೆ ರೂಪಿಸಿ ದರೂ ಮರಣ ಪ್ರಮಾಣ ಮಾತ್ರ ಏರು ಗತಿಯಲ್ಲೇ ಸಾಗಿದೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ ಒಂದು ಸಾವಿರಕ್ಕೆ 35ರಷ್ಟು ಶಿಶುಗಳು ಮರಣ ಹೊಂದುತ್ತಿವೆ!

2015–16ನೇ ಸಾಲಿನಲ್ಲಿ  19.6ರಷ್ಟಿದ್ದ ನವಜಾತ ಶಿಶು ಮರಣ ಪ್ರಮಾಣ  ಪ್ರಸಕ್ತ ವರ್ಷ(ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ) 21.16ಕ್ಕೆ ಏರಿಕೆಯಾಗಿದೆ. ಕೇವಲ 7 ತಿಂಗಳ ಅವಧಿಯಲ್ಲಿ 336 ಶಿಶುಗಳು ಮರಣ ಹೊಂದಿವೆ.  ಪ್ರಸಕ್ತ ವರ್ಷ ಪೂರ್ಣಗೊಳ್ಳುವಷ್ಟರಲ್ಲಿ ಶಿಶು ಮರಣದ ಪ್ರಮಾಣ ಇನ್ನೂ ಹೆಚ್ಚಾಗುವ ಆತಂಕ ಜಿಲ್ಲೆಯಲ್ಲಿ ಎದುರಾಗಿದೆ.

ಕಳೆದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ 336 ಶಿಶುಗಳು ಮರಣ ಹೊಂದಿವೆ. ಏಪ್ರಿಲ್‌ನಲ್ಲಿ 48, ಮೇನಲ್ಲಿ 49, ಜೂನ್‌ನಲ್ಲಿ 46, ಜುಲೈನಲ್ಲಿ 48, ಆಗಸ್ಟ್‌ನಲ್ಲಿ 56, ಸೆಪ್ಟೆಂಬರ್‌ನಲ್ಲಿ 50, ಅಕ್ಟೋಬರ್‌ನಲ್ಲಿ 39 ಶಿಶುಗಳು ಮರಣ ಹೊಂದಿವೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಮರಣ ಹೊಂದುವ ಶಿಶುಗಳ ಲೆಕ್ಕ ಮಾತ್ರ ಸಿಗುತ್ತದೆ. ಮನೆಗಳಲ್ಲೇ ಹೆರಿಗೆ ಯಾಗುವ ಶಿಶುಗಳ ಮರಣ ಪ್ರಮಾಣ ತುಸು ಹೆಚ್ಚೇ ಇದೆ.

ತಾಲ್ಲೂಕುವಾರು ವಿವರ:  ಏಳು ತಿಂಗಳ ಅವಧಿಯಲ್ಲಿ ಶಿಶು ಮರಣ ಪ್ರಮಾಣ ತಾಲ್ಲೂಕುಗಳಿಗೆ ಹೋಲಿಸಿದರೆ, ಶಿವಮೊಗ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ, 235 ಶಿಶುಗಳು. ಮರಣ ಹೊಂದಿವೆ. ಉಳಿದಂತೆ ಶಿಕಾರಿಪುರದಲ್ಲಿ 32, ಭದ್ರಾವತಿ 29, ಸಾಗರ 21, ಸೊರಬ 12, ಹೊಸನಗರ 4 ಹಾಗೂ ತೀರ್ಥಹಳ್ಳಿ 3  ಶಿಶುಗಳು ಮೃತಪಟ್ಟಿವೆ.

ತಾಯಂದಿರ ಮರಣದಿಂದ ಆತಂಕ:  ಗರ್ಭಿಣಿಯರ ಆರೋಗ್ಯ, ಸುರಕ್ಷಿತ ಹೆರಿಗೆಗಾಗಿ ಮಡಿಲು ಕಿಟ್,  ವಿಟಮಿನ್‌ಯುಕ್ತ ಪೌಷ್ಟಿಕಾಂಶ ಇರುವ ಆಹಾರ ಪೂರೈಕೆ, ಲಸಿಕೆ ಸೇರಿದಂತೆ ಹಲವು ಸೌಲಭ್ಯಗಳ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿ ಗೊಳಿಸಿದ್ದರೂ ತಾಯಂದಿರ ಮರಣ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಏಳು ತಿಂಗಳಿನಲ್ಲಿ 14 ತಾಯಂದಿರು ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲ್ಲೂ ಕಿನಲ್ಲೇ 12 ತಾಯಂದಿರು ಮೃತಪಟ್ಟರೆ, ಭದ್ರಾವತಿ ಹಾಗೂ ಸೊರಬದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. 

ಕಳೆದ ಸಾಲಿನ ವಿವರ:  2015–16ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ 561 ಶಿಶು ಮರಣ ಪ್ರಕರಣ ದಾಖಲಾಗಿದ್ದವು. ಜತೆಗೆ, 26 ತಾಯಂದಿರು ಮೃತ ಪಟ್ಟಿದ್ದರು. ಕಳೆದ ವರ್ಷ ಒಂದು ಲಕ್ಷಕ್ಕೆ ಸರಾಸರಿ 90.18 ತಾಯಂದಿರು ಸಾವನ್ನಪ್ಪಿದ್ದರು. ಈ ಸಾಲಿನಲ್ಲಿ ಇದರ ಪ್ರಮಾಣ ಈವರೆಗೆ 88.18ಕ್ಕೆ ತಲುಪಿದೆ. 

‘ಅವಧಿ ಪೂರ್ವ ಇಲ್ಲವೇ ಅವಧಿ ಮೀರಿ ಹೆರಿಗೆಯಾದ ಸಂದರ್ಭದಲ್ಲಿ ಶಿಶು ಮರಣಗಳು ಸಂಭವಿಸುತ್ತಿವೆ. ಗರ್ಭಿಣಿ ಯರು ರಕ್ತ ಹೀನತೆ, ಪೌಷ್ಟಿಕಾಂಶ ಆಹಾರದ ಕೊರತೆ, ಹೃದಯ ಸಂಬಂಧಿ ಕಾಯಿಲೆಗಳು, ಮಗುವಿನ ತೂಕದಲ್ಲಿ ಏರುಪೇರು ಮತ್ತಿತರ ಕಾರಣಗಳಿಂದ ನವಜಾತ ಶಿಶುಗಳು ಮರಣ ಹೊಂದುತ್ತವೆ. 

ಸರ್ಕಾರ ಗರ್ಭಿಣಿಯರ ಆರೈಕೆಗಾಗಿ ಹಾಗೂ ಆರೋಗ್ಯವಂತ ಶಿಶುಗಳ ಜನನಕ್ಕಾಗಿ ಅನೇಕ ಯೋಜನೆ ಹಮ್ಮಿಕೊಂಡಿದೆ. ಪ್ರತಿ ತಿಂಗಳು 9ರಂದು ಜಿಲ್ಲೆಯ ಎಲ್ಲೆಡೆ ಪ್ರಧಾನಿ ಸುರಕ್ಷತಾ ಮಾತೃತ್ವ ಅಭಿಯಾನ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT