ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಮಾವಿನ ಇಳುವರಿ ಕುಂಠಿತ

Last Updated 12 ಏಪ್ರಿಲ್ 2017, 5:08 IST
ಅಕ್ಷರ ಗಾತ್ರ

ಶಿವಮೊಗ್ಗ: ಹಣ್ಣುಗಳ ರಾಜ ಮಾವಿನ ಇಳುವರಿ ಕಳೆದ ವರ್ಷದಂತೆ ಈ ವರ್ಷವೂ ಕ್ಷೀಣಿಸಿದೆ. ಮಳೆ ಕೊರತೆಯ ಪರಿಣಾಮ ನೀರೀಕ್ಷೆಯಷ್ಟು ಮಾವು ಮಾರುಕಟ್ಟೆ ಪ್ರವೇಶಿಸಿಲ್ಲ.ಅತಿ ಬಿಸಿಲು, ನೀರಿನ ಕೊರತೆ, ಅಂತರ್ಜಲ ಕುಸಿತ,  ಮಳೆ ಪ್ರಮಾಣ ಇಳಿಕೆಯಿಂದಾಗಿ ಮಾರುಕಟ್ಟೆಗೆ ಮಾವು ಪೂರೈಕೆ ತಡವಾಗುತ್ತಿದೆ. ಈಗಾಗಲೇ ಕೆಲವು ತಳಿಯ ಮಾವಿನ ಕಾಯಿಗಳು ಮಾರುಕಟ್ಟೆ ಪ್ರವೇಶಿಸಿವೆ. ಮಣ್ಣಿನಲ್ಲಿ ತೇವಾಂಶದ ಕೊರತೆ, ಹೆಚ್ಚಿದ ಮಂಜು ಮುಸುಕಿದ ವಾತಾವರಣದಿಂದ ಮಾವು ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇದು ಮಾವು ಪ್ರಿಯರಿಗೆ ಬೇಸರ ತಂದಿದೆ.

‘ಜಿಲ್ಲೆಯಾದ್ಯಂತ 3,900 ಹೆಕ್ಟೇರ್‌ ಭೂಮಿಯಲ್ಲಿ ಮಾವು ಬೆಳೆ ಬೆಳೆಯ ಲಾಗುತ್ತಿದೆ. ಶಿಕಾರಿಪುರ, ಸೊರಬ ಹಾಗೂ ಶಿವಮೊಗ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಮಾವು ಬೆಳೆಗಾರರಿದ್ದಾರೆ. ಜಿಲ್ಲೆಯಲ್ಲಿ ಹೆಕ್ಟೇರ್‌ಗೆ 13 ಟನ್ ಇಳುವರಿ ಲಭ್ಯವಾಗಲಿದೆ. ಏಪ್ರಿಲ್, ಮೇ ಹಾಗೂ ಜೂನ್‌ ತಿಂಗಳಿನಲ್ಲಿ ಮಾವು ಮಾರು ಕಟ್ಟೆಗೆ ಬರುವುದು ವಾಡಿಕೆ.

ಹವಾಮಾನ ವೈಪರೀತ್ಯದಿಂದ ಈ  ಬಾರಿಯೂ ಇಳುವರಿ ಕಡಿಮೆಯಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ. ವಿಶ್ವನಾಥ್.
ಕಳೆದ ಬಾರಿ ಮೂಸಂಬಿ ಹಾಗೂ ಮಾವಿನ ಹಣ್ಣಿಗೆ ರಾಸಾಯನಿಕ ಮಿಶ್ರಣ ಮಾಡಿ, ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ, ದಂಡ ವಿಧಿಸಲಾಗಿತ್ತು. ವಶಕ್ಕೆ ಪಡೆದ ಹಣ್ಣಿನ ಮಾದರಿಯನ್ನ ಪ್ರಯೋಗಾ ಲಯಕ್ಕೆ ಕಳುಹಿಸಲಾಗಿತ್ತು. ಕೃಷಿ ಇಲಾಖೆಯು ಎಥೆಲಿನ್ ಗ್ಯಾಸ್‌ ಬಳಸಿ  ಹಣ್ಣಾಗಿಸು ವುದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ಕಾರ್ಬನ್‌ ಬಳಸುವಂತಿಲ್ಲ ಎಂದು ಸೂಚಿಸಿದೆ.

‘ಕಾರ್ಬನ್ ಕ್ಯಾಲ್ಸಿಯಂ ಮಿಶ್ರಣ ಮಾಡಿ, ಬೇಗನೆ ಹಣ್ಣಾಗಿಸಿ, ಮಾರು ಕಟ್ಟೆಯಲ್ಲಿ ಮಾರಾಟ ಮಾಡುವು ದರಿಂದ ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಉಂಟಾ ಗುತ್ತದೆ. ಈ ಕುರಿತು ಹಣ್ಣು ವ್ಯಾಪಾರಿ ಗಳಿಗೆ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳ ಲಾಗುವುದು’ ಎಂದು ಹಿರಿಯ ಆಹಾರ ಸಂರಕ್ಷಣಾ ಅಧಿಕಾರಿ ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.

‘ಪ್ರತಿ ವರ್ಷವೂ ಮಾವಿನ ಹಣ್ಣಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಮಾವಿನ ಸೀಕರಣೆ, ಮಾವಿನ ಜ್ಯೂಸ್‌ ಅನ್ನು ಮಕ್ಕಳು ಇಷ್ಟಪಡುತ್ತಾರೆ.  ಗುಣಮಟ್ಟದ ಮಾವು ಮಾರುಕಟ್ಟೆಗೆ ಬಂದರೆ ನಾವು ಖುಷಿಯಿಂದ ಖರೀದಿಸುತ್ತೇವೆ’ ಎನ್ನುತ್ತಾರೆ ಗೃಹಿಣಿ ಗಿರಿಜಮ್ಮ.

‘ಈ ಬಾರಿ ಮೂಡುಗಾಳಿಗೆ ಮಾವಿನ ಹೂವು ಹೆಚ್ಚಿನ ಪ್ರಮಾಣದಲ್ಲಿ ಉದುರಿವೆ. ನಿರೀಕ್ಷಿತ ಮಟ್ಟದಲ್ಲಿ ಫಸಲು ಬಂದಿಲ್ಲ. ಮಳೆ ಕಡಿಮೆ. ಸಹಜವಾಗಿ ಬೆಳೆಯ ಪ್ರಮಾಣದಲ್ಲೂ ಕುಂಠಿತ ವಾಗಿದೆ. ಹೆಚ್ಚಿದ ಬಿಸಿಗಾಳಿ  ಹೆಚ್ಚಾಗಿದ್ದೇ ಇದಕ್ಕೆ ಕಾರಣ’ ಎಂದು ಹಣ್ಣಿನ ವ್ಯಾಪಾರಿ ಫಯಾಜ್ ಅಭಿಪ್ರಾಯಪಡುತ್ತಾರೆ.

‘ಜಿಲ್ಲೆಯಲ್ಲಿ ಆಪೂಸ್, ರಸಪೂರಿ, ಬಾದಾಮಿ, ಅಲ್ಫಾನ್ಸೊ, ಸೆಂದೂರ, ಖಸಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಮದನ್‌ಪಲ್ಲಿ ಮಾವು ಮಾತ್ರ ಆಂಧ್ರಪ್ರದೇಶದಿಂದ ಬರುತ್ತಿದೆ. ಸದ್ಯ ಒಂದು ಕೆ.ಜಿ. ಮಾವಿನ ಹಣ್ಣಿಗೆ ₹ 150 ದರವಿದೆ. ಮಾವಿನ ಹಣ್ಣಿನ ಸುಗ್ಗಿ ಸಂದರ್ಭದಲ್ಲಿ ₹ 50ರಿಂದ ₹ 90ಕ್ಕೆ ಮಾರಾಟವಾಗಲಿದೆ’ ಎನ್ನುತ್ತಾರೆ ವ್ಯಾಪಾರಿ ಮಜೀಬುಲ್ಲಾ ಖಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT