ಶನಿವಾರ, ಫೆಬ್ರವರಿ 22, 2020
19 °C
ಬೀದಿಬದಿ ವ್ಯಾಪಾರಿಗಳು, ವಾಹನ ಸವಾರರು, ಜನಸಾಮಾನ್ಯರಿಗೆ ಸಂಕಷ್ಟ

ಸಿಂದಗಿ; ಬಿಡಾಡಿ ದನಗಳ ಹಾವಳಿ

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಯಾವುದೇ ರಸ್ತೆಗಳಲ್ಲಿ ನೋಡಿದರೂ ಬಿಡಾಡಿ ದನಗಳೇ ಕಂಡು ಬರುತ್ತವೆ.

ಮುಖ್ಯ ರಸ್ತೆಗಳಲ್ಲಿ ಆರಾಮವಾಗಿ ಮಲಗಿರುತ್ತವೆ. ಹೀಗಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸವಾರರು ನಿತ್ಯ ಪರದಾಡುವಂತಾಗಿದೆ.

ಬಿಡಾಡಿ ದನಗಳ ಪೈಕಿ ಬಹಳಷ್ಟು ದನಗಳು ಸಾಕಿದ ದನಗಳಾಗಿದ್ದು, ಅವುಗಳಿಗೆ ಸಂಬಂಧಿಸಿದವರು ಬೆಳಿಗ್ಗೆ ಮನೆಯಿಂದ ಹೊರ ಬಿಡುತ್ತಾರೆ. ಸಂಜೆ ಮತ್ತೆ ಕಟ್ಟಿಕೊಳ್ಳುತ್ತಾರೆ. ಬೀದಿ ದನಗಳ ಹಾವಳಿಯಿಂದ ರಸ್ತೆ ಬದಿ ವ್ಯಾಪಾರಿಗಳು ಕೂಡ ತೊಂದರೆ ಅನುಭವಿಸುವಂತಾಗಿದೆ.

‘ಪಟ್ಟಣದ ವಾರದ ಸಂತೆ ದಿನ ಬಜಾರ್‌ ಒಳ ಹೊಕ್ಕು ಜನರಿಗೆ ಗಾಯ ಮಾಡಿರುವ ಉದಾಹರಣೆಗಳೂ ಇವೆ. ದನಗಳ ಗುಂಪಿನಲ್ಲಿರುವ ಕೆಲವು ಗೂಳಿಗಳು ಎಲ್ಲೆಂದರಲ್ಲಿ ನುಗ್ಗಿ ಜನರಿಗೆ ಭಯದ ವಾತಾವರಣ ಉಂಟು ಮಾಡುತ್ತಿವೆ.

ಮಕ್ಕಳು-ಮಹಿಳೆಯರು ರಸ್ತೆಯಲ್ಲಿ ತಿರುಗಾಡದಂಥ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಾರ್ವಜನಿಕರು ತಮ್ಮ ಗೋಳು ತೋಡಿಕೊಂಡಿದ್ದಾರೆ.

‘ಪಟ್ಟಣದಲ್ಲಿ ಬಿಡಾಡಿ ದನಗಳನ್ನು ಹಿಡಿದು,ಕಟ್ಟಿ ಹಾಕಲು ಪುರಸಭೆಯ ಕೊಂಡವಾಡವೊಂದಿತ್ತು. ಆದರೆ, ಈಗ ಅದು ಖಾಸಗಿಯವರ ಒಡೆತನದಲ್ಲಿದೆ. ಅದೆಷ್ಟೋ ವರ್ಷಗಳ ಹಿಂದೆ ಪುರಸಭೆಯ ಕೆಲವು ಸದಸ್ಯರು ಕೊಂಡವಾಡವನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ’ ಎಂಬುದು ಹೆಸರು ಹೇಳಲು ಇಚ್ಛಿಸದ ಪುರಸಭೆ ಮಾಜಿ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಈ ಹಿಂದೆ ಪಟ್ಟಣದಲ್ಲಿ ಹಂದಿಗಳ ಸಂಖ್ಯೆ ವಿಪರೀತವಾದ ಹಿನ್ನೆಲೆಯಲ್ಲಿ ಪುರಸಭೆ ಅವುಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಕೈಗೊಂಡಿತ್ತು. ಹೀಗಾಗಿ, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದರು. ಈಗ ಬಿಡಾಡಿ ದನಗಳನ್ನು ಹತ್ತಿರದ ಗೋಶಾಲೆಗಳಿಗೆ ಸ್ಥಳಾಂತರಿಸುವ ಕಾರ್ಯ ಮಾಡಬೇಕು. ಆ ಮೂಲಕ ವ್ಯಾಪಾರಿಗಳು, ವಾಹನ ಸವಾರರಿಗೆ ನೆಮ್ಮದಿ ಕಲ್ಪಿಸಬೇಕು’ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಪುರಸಭೆ ಸಿಬ್ಬಂದಿ ಕೂಡಲೇ ಪಟ್ಟಣದಲ್ಲಿ ವಾಹನಗಳಲ್ಲಿ ಧ್ವನಿವರ್ಧಕ ಮೂಲಕ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಬೇಕು. ಅವರಿಗೆ ಒಂದಿಷ್ಟು ದಿನಗಳ ಗಡುವು ನೀಡಬೇಕು. ಇದಾದ ಬಳಿಕ ಅವುಗಳನ್ನು ವಾಹನಗಳಲ್ಲಿ ಗೋಶಾಲೆಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಮಾಡಬೇಕು’ ಎಂಬುದು ನಗರ ಸುಧಾರಣಾ ವೇದಿಕೆ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)