ಬುಧವಾರ, ನವೆಂಬರ್ 13, 2019
17 °C

ವಿವಿಧೆಡೆ ಸಂಭ್ರಮದ ಭೂಮಿ ಹುಣ್ಣಿಮೆ

Published:
Updated:
Prajavani

ಸೊರಬ: ತಾಲ್ಲೂಕಿನಾದ್ಯಂತ ಭೂಮಿ ಹುಣ್ಣಿಮೆ ಪ್ರಯುಕ್ತ ಭಾನುವಾರ ರೈತರು ತಾವು ಬೆಳೆದ ವಿವಿಧ ಬೆಳೆಗೆ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಭೂಮಿಗೆ ಬಯಕೆ ಶಾಸ್ತ್ರ ತೀರಿಸಿದರು.

ಭೂಮಿಯನ್ನು ಹೆಣ್ಣಿನಂತೆ ಗೌರವಿಸಿ, ಗರ್ಭಿಣಿ ಹೆಣ್ಣಿಗೆ ಸೀಮಂತಶಾಸ್ತ್ರ ಮಾಡುವಂತೆ, ತೆನೆಯೊಡೆಯುವ ಬೆಳೆಗೆ ಕೃಷಿ ಕುಟುಂಬಗಳು ಪೂಜೆ ಸಲ್ಲಿಸಿ ಎಡೆ ಅರ್ಪಿಸುವ ಸಂಪ್ರದಾಯ ಮಲೆನಾಡು ಭಾಗದಲ್ಲಿದೆ.

ರೈತ ಕುಟುಂಬಗಳು ಮುಂಗಾರಿನಲ್ಲಿ ಭೂಮಿ ಹದಗೊಳಿಸಿ ಬಿತ್ತನೆ ಮಾಡಿ ತೆನೆ (ಹೊಡಿ) ಬಿಡುವ ಸಮಯದಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ, ಎಡೆ ಹಿಡಿದು ಪೂಜೆ ಮಾಡುವುದು ಸಂಪ್ರದಾಯ. ಈ ವರ್ಷ ಸುರಿದ ಮಳೆಯಿಂದ ಭತ್ತದ ಬೆಳೆಗೆ ಅನುಕೂಲವಾಗಿದೆ.

ಮುಂಜಾನೆಯೇ ಅಲಂಕೃತ ಭೂಮಣ್ಣಿ ಬುಟ್ಟಿಯಲ್ಲಿ ಚರಗ ತುಂಬಿಕೊಂಡ ರೈತರು ತಮ್ಮ ಹೊಲಕ್ಕೆ ಹೋಗಿ ‘ಹಚ್ಚಂಬ್ಲಿ ಹರಬಿಸೊಪ್ಪು ಹಿತ್ತಲಾಗಿರೋ ದಾರಿರೆಕಾಯಿ ಭೂಂಕವ್ವನ ಬಯ್ಕೆಬಾನ ಎದ್ದೆದ್ ಉಣ್ಣೆ ಭೂಂಕವ್ವೋ.. ಹೋಯ್ ಹೋಯ್’ ಎಂದು ಕೂಗುತ್ತಾ ಹೊಲಕ್ಕೆಲ್ಲಾ ಚರಗಾ ಚೆಲ್ಲಿದರು.

ಮಧ್ಯಾಹ್ನದ ಹೊತ್ತಿಗೆ ಕುಟುಂಬದವರೆಲ್ಲರೂ ತಮ್ಮ ಬೆಳೆಗೆ ಸೀರೆ-ಕುಪ್ಪಸ, ತಾಳಿ, ಮೂಗುತಿ ತೊಡಿಸಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಯೇ ಊಟ ಮಾಡಿದರು. ಬೆಳೆಗೆ, ಗೂಳಿ(ಕಾಗೆ)ಗೆ, ಇಲಿಗಳಿಗೆ ಒಂದೊಂದು ಎಡೆ ನೀಡಿದರು. ಒಂದು ಕೊಟ್ಟೆ ಕಡುಬನ್ನು ಜಮೀನಿನಲ್ಲಿ ಹೂತು, ಆ ಜಮೀನಿನ ಬೆಳೆಯನ್ನು ಒಕ್ಕಲು ಮಾಡುವ ಸಂದರ್ಭದಲ್ಲಿ ಕಿತ್ತು ತಿನ್ನುವ ಸಂಪ್ರದಾಯ ಇದೆ.

ಬೆಳೆದು ನಿಂತ ಫಸಲಿಗೆ ಸೀಮಂತ

ತ್ಯಾಗರ್ತಿ: ಹಸಿರುಟ್ಟ ಬುವಿಗೂ, ಶ್ರಮಜೀವಿ ರೈತನಿಗೂ ವಿಶೇಷ ನಂಟು. ಒಬ್ಬರಿಗೊಬ್ಬರು ಎಂಬ ಬಾಳ್ವೆ ಎಂದಿಗೂ ಮಾಸದ ಸುಂದರ ಬಂಧ. ಸೀಗೆ ಹುಣ್ಣಿಮೆ ಹಬ್ಬ ಇದಕ್ಕೆ ಸಾಕ್ಷಿಯಂತಿದೆ. ಈ ಹಬ್ಬವನ್ನು ಭೂಮಿತಾಯಿಯ ಬಯಕೆ ಹಬ್ಬ ಎಂದೂ ಕರೆಯುತ್ತಾರೆ. 

ಸಾಗರ ತಾಲ್ಲೂಕಿನ ತ್ಯಾಗರ್ತಿ, ಬರೂರು ಹಾಗೂ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ರೈತರು ಭೂಮಿಹುಣ್ಣಿಮೆಯನ್ನು ಭಾನುವಾರ ಮುಂಜಾನೆಯಿಂದಲೇ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಿದರು.

ಬೆಳೆದು ನಿಂತ ಫಸಲಿಗೆ ಸೀಮಂತ ಮಾಡುವ ದಿನವಿದು. ಹಾಗಾಗಿ, ರೈತರು ಬಿತ್ತಿದ ಬೆಳೆಗಳುಉತ್ತಮ ಫಲ ನೀಡಿ, ರೈತರ ಬದುಕು ಸಮೃದ್ಧಿಯಾಗಲಿ ಎಂದು ಬೇಡುತ್ತಾ ಭೂಮಿಪೂಜೆ ನೆರವೇರಿಸಿದರು.

 

ಸಡಗರದ ಸೀಗೆ ಹುಣ್ಣಿಮೆ

ಹೊಸನಗರ: ಸೀಗೆ ಹುಣ್ಣಿಮೆ ನಿಮಿತ್ತ ಭೂಮಿ ತಾಯಿಯ ಹಬ್ಬವಾದ ಭೂಮಿ ಹುಣ್ಣಿಮೆಯನ್ನು ತಾಲ್ಲೂಕಿನ ರೈತರು ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ನಸುಕಿನಲ್ಲಿಯೇ ಭೂಮಿಪೂಜೆಗೆ ಅಣಿಯಾದ ರೈತರು ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಪೂಜೆ ನೆರವೇರಿಸಿದರು.

ವಿವಿಧ ಬಗೆಯ ಖಾದ್ಯಗಳನ್ನು ನೈವೇದ್ಯ ಮಾಡಿ, ಊಟ ತಿಂದು ಸಂಭ್ರಮಪಟ್ಟರು.

ಮಲೆನಾಡಿನ ಬಹುಸಂಖ್ಯಾತ ದೀವರ ಜನಾಂಗದವರು ಶನಿವಾರದಿಂದಲೇ ಪೂಜೆಗೆ ಸಿದ್ಧತೆ ಮಾಡಿಕೊಂಡು ಭೂಮಿತಾಯಿಯ ಸೀಮಂತಕಾರ್ಯವನ್ನು ವೈಶಿಷ್ಟ್ಯ ಪೂರ್ಣವಾಗಿ ಪೂರೈಸಿದರು. 

ರೈತರ ಹೊಲಗದ್ದೆಗಳಿಗೆ ವಿಶೇಷ ಪೂಜೆ

ಆನಂದಪುರ: ಭೂಮಿಪೂಜೆಯ ಅಂಗವಾಗಿ ಭಾನುವಾರ ರೈತರು ತಮ್ಮ ಹೊಲಗಳಿಗೆ ಸಂಭ್ರಮ, ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

ತೋಟಗಳಲ್ಲಿ ಅಡಿಕೆ ಮರ, ಬಾಳೆಮರ, ಬೆಳೆದು ನಿಂತ ಭತ್ತದ ಸಸಿಗಳ ಮುಂದೆ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಶೃಂಗರಿಸಿದ್ದರು. ಭತ್ತದ ಸಸಿಗಳಿಗೆ ಮಹಿಳೆಯರ ಕಿವಿಯೋಲೆ ಹಾಗೂ ಮೂಗುತಿ, ತಾಳಿ ಸರ ಇನ್ನಿತರ ಆಭರಣಗಳಿಂದ ಅಲಂಕರಿಸಲಾಗಿತ್ತು.

ಭೂತಾಯಿಗೆ ಹಲವು ಬಗೆಯ ತರಕಾರಿ, ಸೊಪ್ಪುಗಳಿಂದ ಮಾಡಿದ ಬೆರಕೆ ಸೊಪ್ಪಿನ ಪಲ್ಯವನ್ನು ಗದ್ದೆಗಳಿಗೆ ಚರಗ ರೂಪದಲ್ಲಿ ಹಾಕಲಾಯಿತು. ಬಣ್ಣಗಳಿಂದ ಶೃಂಗರಿಸಿದ ಕುಕ್ಕೆಗಳಲ್ಲಿ ತಯಾರಿಸಿ ಅಡುಗೆ ತೆಗೆದುಕೊಂಡು ಹೋಗಿ ದೇವರಿಗೆ ನೈವೇದ್ಯ ಮಾಡಲಾಯಿತು. ಕುಟುಂಬದ ಸದಸ್ಯರು ಹೊಲದಲ್ಲಿಯೇ ಊಟ ಸವಿದರು.

 

ಪ್ರತಿಕ್ರಿಯಿಸಿ (+)