ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಮಧ್ಯೆ ವಿಶಿಷ್ಟ ಸಾಧನೆ

ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗಿ
Last Updated 20 ಆಗಸ್ಟ್ 2019, 9:26 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಹಿರೇಬೇವನೂರ ತಾಂಡಾ ನಿವಾಸಿ, ರಾಜೇಶ ಪವಾರ ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿ, ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.

ತಂದೆ ಸುರೇಶ, ತಾಯಿ ಲಕ್ಷ್ಮೀಬಾಯಿ ಇವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜೇಶ ಚಿಕ್ಕ ವಯಸ್ಸಿನಲ್ಲಿಯೇ ಪೋಲಿಯೊಗೆ ತುತ್ತಾಗಿ ಎಡಗಾಲು ಊನವಾಯಿತು. ಅಂಗವಿಕಲತೆ ಮಧ್ಯದಲ್ಲೇ ಓದು ಮತ್ತು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡರು.

ಅಥ್ಲೆಟಿಕ್‌ನಲ್ಲಿ ಮೊದಲ ವರ್ಷವೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಕೀರ್ತಿ ಇವರದ್ದು. ಅಲ್ಲಿಂದ ಆರಂಭವಾದ ಪದಕಗಳ ಬೇಟೆ ನಿರಂತರವಾಗಿ ನಡೆದಿದೆ. ರಾಜೇಶ ಅವರ ಸಾಧನೆಗೆ ಶ್ರೀ ಚನ್ನಬಸಪ್ಪ ಪ್ರಶಸ್ತಿ, ಸೇವಾಲಾಲ ರತ್ನ ಪ್ರಶಸ್ತಿ, ಶಂಕರಲಿಂಗ ಬಾಲ ತಪಸ್ವಿ ಕ್ರೀಡಾ ಪ್ರಶಸ್ತಿ, ಜಿಲ್ಲಾಡಳಿತದಿಂದ ಸನ್ಮಾನ ಸೇರಿ ನಾನಾ ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ರಾಜ್ಯಮಟ್ಟದ ಸಾಧನೆ: ಬೆಂಗಳೂರು, ಮೈಸೂರು, ಧಾರವಾಡ, ವಿಜಯಪುರ ಸೇರಿ ರಾಜ್ಯದ ನಾನಾ ಕಡೆ ನಡೆದ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ 9 ಚಿನ್ನ, ಬೆಳ್ಳಿ ಪದಕ ಸಂಪಾದನೆ ಮಾಡಿದ್ದಾರೆ.

ರಾಷ್ಟ್ರಮಟ್ಟದ ಸಾಧನೆ: 2014ರಲ್ಲಿ ಚೆನೈನಲ್ಲಿ ನಡೆದ 8ನೇ ಪ್ಯಾರಾ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ 1,500 ಮೀ. ಓಟದಲ್ಲಿ ಚಿನ್ನ, 2015ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ದಿವ್ಯಾಂಗ್ ಕ್ರೀಡಾಕೂಟದಲ್ಲಿ 400 ಮೀ. ಓಟದಲ್ಲಿ ಚಿನ್ನ, 800 ಮೀ. ಓಟದಲ್ಲಿ ಬೆಳ್ಳಿ, 2015ರಲ್ಲಿ ಗುಜರಾತ್‌ನಲ್ಲಿ ನಡೆದ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀ. ಓಟದಲ್ಲಿ ಚಿನ್ನ, 2016ರಲ್ಲಿ ಹರಿಯಾಣದಲ್ಲಿ ನಡೆದ ಪ್ಯಾರಾ ಸೀನಿಯರ್ಸ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಓಟದಲ್ಲಿ ಬೆಳ್ಳಿ, 2016 ರಲ್ಲಿ ದೆಹಲಿಯ ನ್ಯಾಶನಲ್ ವಿಶ್ವವಿದ್ಯಾಲಯದಲ್ಲಿ ನಡೆದ ಕ್ರೀಡಾಕೂಟದಲ್ಲಿ 200 ಮೀ. ಓಟದಲ್ಲಿ ಚಿನ್ನ, 2017ರಲ್ಲಿ ಉತ್ತರಪ್ರದೇಶದಲ್ಲಿ ನಡೆದ 15ನೇ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಓಟದಲ್ಲಿ ಬೆಳ್ಳಿ, 2017 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ನ್ಯಾಶನಲ್ ಮ್ಯಾರಥಾನ್‌ನಲ್ಲಿ 5 ಕಿ.ಮೀನಲ್ಲಿ ಚಿನ್ನ, 2018ರಲ್ಲಿ ದೆಹಲಿಯಲ್ಲಿ ನಡೆದ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀ. ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

ಅಂತರರಾಷ್ಟ್ರೀಯ ಸಾಧನೆ: 2017ರಲ್ಲಿ ಮಲೇಶಿಯಾದಲ್ಲಿ ನಡೆದ ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ 800 ಮೀ. ಓಟದಲ್ಲಿ ಚಿನ್ನ, 2018ರಲ್ಲಿ ಶ್ರೀಲಂಕಾದಲ್ಲಿ ನಡೆದ ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ 100 ಮೀ. ಹಾಗೂ 400 ಮೀ. ಓಟದಲ್ಲಿ ಚಿನ್ನ, ಹಾಂಗಕಾಂಗ್‌ನಲ್ಲಿ ನಡೆದ ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ 200 ಮೀ. ಓಟದಲ್ಲಿ ಚಿನ್ನ, 400 ಮೀ. ಓಟದಲ್ಲಿ ಬೆಳ್ಳಿ, 2018ರ ಅಕ್ಟೋಬರ್‌ನಲ್ಲಿ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಸೌತ್ ಏಶಿಯನ್ ಪ್ಯಾರಾ ಕ್ರೀಡಾಕೂಟದಲ್ಲಿ 100 ಮೀ. ಓಟದಲ್ಲಿ ಚಿನ್ನ, ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದೀಗ ಸ್ನಾತಕೋತ್ತರ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT