ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಶಿಕ್ಷಣ; ಸೌಕರ್ಯ ಮಾತ್ರ ಕಳಪೆ

ಮಟ್ಟಿಹಾಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
Last Updated 7 ಜನವರಿ 2020, 19:45 IST
ಅಕ್ಷರ ಗಾತ್ರ

ಕೊಲ್ಹಾರ: ತಾಲ್ಲೂಕಿನ ಮಟ್ಟಿಹಾಳ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಸಿರು ವಾತಾವರಣದ ನಡುವೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದರೆ, ಕೊಠಡಿಗಳು, ಶೌಚಾಲಯ, ಅಡುಗೆ ಕೋಣೆ ಕೊರತೆಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಈ ಶಾಲೆಯು 1964ರ ಅಕ್ಟೋಬರ್‌ 2ರ ಗಾಂಧಿ ಜಯಂತಿ ದಿನ ಸ್ಥಾಪನೆಯಾಗಿದೆ. 1ರಿಂದ 7ನೇ ತರಗತಿಗಳಲ್ಲಿ 234 ವಿದ್ಯಾರ್ಥಿಗಳಿದ್ದು, ಮುಖ್ಯ ಶಿಕ್ಷಕರು ಸೇರಿ 7 ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕರು ಗುಣಮಟ್ಟದ ಬೋಧನೆ ಮಾಡುತ್ತಿರುವ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಶಾಲೆ ಆವರಣದಲ್ಲಿ ನಾಲ್ಕು ಆರ್‌ಸಿಸಿ ಚಾವಣಿ ಹಾಗೂ 2 ಶೀಟ್ ಚಾವಣಿಗಳಿರುವ 6 ಕೊಠಡಿಗಳಿದ್ದು, ಅವು ಕೂಡ ಶಿಥಿಲಾವಸ್ಥೆಯಲ್ಲಿವೆ. ಮಳೆಗಾಲ ಬಂದರೆ ಸಾಕು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪರದಾಟ ತಪ್ಪಿದಲ್ಲ. ಕೊಠಡಿಗಳಲ್ಲಿ ಎಲ್ಲೆಂದರಲ್ಲಿ ನೀರು ಸೋರಿಕೆಯಾಗಿ ವಿದ್ಯಾರ್ಥಿಗಳು ಜೀವಭಯದಲ್ಲೇ ತರಗತಿಯಲ್ಲಿ ಕುಳಿತರೆ, ಶಿಕ್ಷಕರಿಗೆ ಅದೇ ಪರಿಸ್ಥಿತಿಯಲ್ಲಿ ತರಗತಿಗಳನ್ನು ನಡೆಸುವ ಅನಿವಾರ್ಯತೆ ಇದೆ.

ಕೊಠಡಿಗಳ ಕೊರತೆಯಿಂದ ಒಂದೇ ಕೊಠಡಿಯಲ್ಲಿ ನಡುವೆ ತಾತ್ಕಾಲಿಕ ಗೋಡೆ ನಿರ್ಮಿಸಿ, ಒಂದೇ ಕೊಠಡಿಯಲ್ಲಿ ಎರಡು ತರಗತಿಗಳನ್ನು ನಡೆಸಲಾಗುತ್ತಿದೆ. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಒಂದು ಕಡೆ ತರಗತಿ, ಮತ್ತೊಂದು ಕಡೆಯಲ್ಲಿ ಬಿಸಿಯೂಟ ಅಡುಗೆ ಸಾಮಗ್ರಿಗಳ ದಾಸ್ತಾನು ಮಾಡಲಾಗಿದೆ.

ಶೌಚಾಲಯ ಸಮಸ್ಯೆ ಹೇಳ ತೀರದು. ಇರುವ ಶೌಚಾಲಯ ಬಳಸದ ಸ್ಥಿತಿಯಲ್ಲಿದ್ದರೆ, ಹೆಣ್ಣು ಮಕ್ಕಳಿಗೆ ಶೌಚಾಲಯವೇ ಇಲ್ಲ. ಶಿಕ್ಷಕರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 4–5 ಜನರು ನಿಲ್ಲಲು ಸಾಧ್ಯವಾಗದ ಇಕ್ಕಟ್ಟಾದ ಅಡುಗೆ ಕೋಣೆಯಲ್ಲೇ ಅಡುಗೆ ಸಹಾಯಕರು 234 ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸಲು ಹೆಣಗುತ್ತಿದ್ದಾರೆ.

ಶಾಲಾ ಕಾಂಪೌಂಡ್ ಅಪೂರ್ಣವಾಗಿದೆ. ಕಳೆದ ವರ್ಷ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಶಾಲಾ ಕೊಠಡಿ ದುಃಸ್ಥಿತಿ ನೋಡಿ, ‘ಇಲ್ಲಿ ತರಗತಿಗಳನ್ನು ನಡೆಸಕೂಡದು’ ಎಂದು ರಿಜಿಸ್ಟ್ರಾರ್‌ನಲ್ಲಿ ಬರೆದು ಹೋಗಿದ್ದಾರೆ.

ಕಳೆದ ವರ್ಷ ಜಿಲ್ಲಾ ಪಂಚಾಯಿತಿ ವತಿಯಿಂದ ಹೈಟೆಕ್ ಶೌಚಾಲಯ ಮಂಜೂರಾಗಿ ಕಾಮಗಾರಿ ಪ್ರಾರಂಭವಾದ ವಾರದಲ್ಲಿ ಏಕಾಏಕಿ ನಿಲ್ಲಿಸಲಾಗಿದೆ. ಸದ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ₹10 ಲಕ್ಷ ವೆಚ್ಚದಲ್ಲಿ ಒಂದು ಕೊಠಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಾಲೆಗೆ ಇನ್ನೂ 2–3 ಕೊಠಡಿಗಳ ಅವಶ್ಯಕತೆ ಇದೆ. ತುರ್ತಾಗಿ ಬಾಲಕಿಯರಿಗೆ ಶೌಚಾಲಯ ವ್ಯವಸ್ಥೆ ಹಾಗೂ ಅಡುಗೆ ಕೋಣೆ ನಿರ್ಮಾಣವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT