ಶನಿವಾರ, ಏಪ್ರಿಲ್ 10, 2021
29 °C
6ರಿಂದ 10ನೇ ತರಗತಿ; 250 ವಿದ್ಯಾರ್ಥಿಗಳು

ಪ್ರತಿಭಾವಂತರ ಕೀರ್ತಿ ಹೆಚ್ಚಿಸಿದ ಶಾಲೆ

ಸಿದ್ದು ಹತ್ತಳ್ಳಿ Updated:

ಅಕ್ಷರ ಗಾತ್ರ : | |

Prajavani

ತಾಂಬಾ: ಇಲ್ಲಿಗೆ ಸಮೀಪದ ಬಂಥನಾಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಒಂದಿಲ್ಲೊಂದು ಸಾಧನೆ ಮಾಡುತ್ತ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬಂಥನಾಳದ ಸಂಗನಬಸವ ಶ್ರೀಗಳ ತಪೋವನ ವಿದ್ಯಾ ಪೀಠದದ 7 ಎಕರೆ ಜಾಗೆಯಲ್ಲಿ ಸುಂದರ ಕಟ್ಟಡ ಹೊಂದಿರುವ ಈ ಶಾಲೆ, ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಆಶಾಕಿರಣವಾಗಿದೆ.
ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಓದುತ್ತಿದ್ದು, 6ನೇ ತರಗತಿಯಿಂದ 10ನೇ ತರಗತಿವರಿಗೆ ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಕಂಪ್ಯೂಟರ್ ಜ್ಞಾನವನ್ನು ನೀಡಲಾಗುತ್ತಿದೆ.

ಗ್ರಂಥಾಲಯ, ವಿಜ್ಞಾನ ಉಪಕರಣ, ಪ್ರಯೋಗಾಲಯ, ಆಟದ ಮೈದಾನ, ಊಟದ ಸಭಾಂಗಣ, ಅಡುಗೆ ಕೋಣೆ, ಸಮುದಾಯ ಭವನ, ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ. ಇಲ್ಲಿಯ ಕೈತೋಟ ಆಕರ್ಷಕವಾಗಿವೆ.

2006-07ರಲ್ಲಿ ಕನ್ನಡ ಅಭಿವೃದ್ಧಿ ಪ್ರತಿಷ್ಠಾನ ನಡೆಸಿದ ಪರೀಕ್ಷೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಮಾಲಾಶ್ರೀ ಶೀಲವಂತ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆಯುವ ಮೂಲಕ ₹75 ಸಾವಿರ ನಗದು ಬಹುಮಾನ ಪಡೆದಿದ್ದಾಳೆ.

2001ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಷಯ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿ 22 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಹಲವಾರು ಸಾಂಸ್ಕ್ರತಿಕ ಕ್ರೀಡಾಕೂಟಗಳಲ್ಲಿ ಇಲ್ಲಿಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

‘ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಸಾಲದು. ಶಾಲೆಗೆ ಭೇಟಿ ನೀಡಿ ಮಕ್ಕಳ ಪ್ರಗತಿಯ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳ ಶ್ರೇಯೊಭಿವೃದ್ಧಿಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರವೂ ಇದೆ. ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡ ಕಲಿಕಾ ಪ್ರಕಿಯೆ ಇದಾಗಿದೆ. ಈ ಮೂರು ಜನ ಸರಿಯಾಗಿ ಸ್ಪಂದಿಸಿದರೆ ಗುಣಮಟ್ಟದ ಶಿಕ್ಷಣದೊಂದಿಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯ’ ಎಂದು ಪ್ರಾಚಾರ್ಯ ರವೀಂದ್ರ ಬಂಥನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.