ಶುಕ್ರವಾರ, ಜನವರಿ 24, 2020
22 °C
ಓದಿದ್ದು ಪಿಯು; ನಾಲ್ಕು ಚಿನ್ನದ ಪದಕ ಮುಡಿಗೆ

ಥ್ರೋಬಾಲ್‌ನಲ್ಲಿ ಜಾಫರ್ ಮಿಂಚು

ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇವರ ಹೆಸರು ಮಹಮ್ಮದ್ ಜಾಫರ್ ಮುಲ್ಲಾ. ವಯಸ್ಸು 24. ಓದಿದ್ದು ಪಿಯು. ಆದರೆ, ಅಂತರರಾಷ್ಟ್ರೀಯ ಮಟ್ಟದ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಲ್ಲಿಯ ಪಿಡಿಜೆ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವಾಗಲೇ ಮಹಮ್ಮದ್, ಥ್ರೋಬಾಲ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಇದನ್ನು ಗಮನಿಸಿದ ಶಾಲೆಯ ಶಿಕ್ಷಕ, ಥ್ರೋಬಾಲ್ ತರಬೇತುದಾರ ಆರ್.ಆರ್.ಕುಲಕರ್ಣಿ ಅವರು ಉತ್ತಮ ಮಾರ್ಗದರ್ಶನ ಮಾಡಿದರು. ಕ್ರೀಡಾ ಕೌಶಲಗಳನ್ನು ಹೇಳಿಕೊಟ್ಟರು. ಇದರ ಪರಿಣಾಮ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಡೆದ ಥ್ರೋಬಾಲ್ ಸ್ಪರ್ಧೆಯಲ್ಲಿ ಮಹಮ್ಮದ್ ಉತ್ತಮ ಸಾಧನೆ ಮಾಡಿದರು.

ಆರಂಭದಲ್ಲಿ ಇವರು ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿದ್ದರು. ಆಗ, ಅಂದರೆ 2012ರಲ್ಲಿ ಬೈಂದೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, 2013ರಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ: 2017ರಲ್ಲಿ ಇಂಡೋ ಶ್ರೀಲಂಕಾ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ, ಇದೇ ವರ್ಷ ನಡೆದ ಇಂಡೋ–ಮಲೇಷಿಯಾ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ, ಎರಡು ಬಾರಿ ಇಂಡೋ–ಥಾಯ್ಲೆಂಡ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

‘ಆರ್.ಆರ್.ಕುಲಕರ್ಣಿ ಮತ್ತು ಶರಣಕುಮಾರ ನಾಯಕ್ ನನ್ನ ತರಬೇತುದಾರರು. ಶ್ರೀಲಂಕಾ ಮತ್ತು ಥಾಯ್ಲೆಂಡ್‌ನಲ್ಲಿ ನಡೆದ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶರಣಕುಮಾರ ನಾಯಕ್ ಅವರು ಭಾರತದ ತಂಡದ ನಾಯಕರಾಗಿದ್ದರು. ಅವರು 2006ರಲ್ಲಿ ಚೀನಾದಲ್ಲಿ ಜರುಗಿದ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಂಡಿದ್ದರು’ ಎಂದು ಮಹಮ್ಮದ್ ಜಾಫರ್ ಮುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಲೂ ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದೇನೆ. ಥ್ರೋಬಾಲ್ ಸ್ಪರ್ಧೆಯಲ್ಲಿ ಸಾಧನೆ ತೋರಿರುವ ಕರ್ನಾಟಕದ ಆತೀಬ್, ಪೂರ್ಣಿಮಾ ಮತ್ತು ಸಬಿಯಾ ಅವರಿಗೆ ರಾಜ್ಯ ಸರ್ಕಾರವು ‘ಕ್ರೀಡಾರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕದಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಪಾಲಕರು ಮತ್ತು ಶಿಕ್ಷಕರು ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಕೌಶಲ ಬೆಳೆಸಿದರೆ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮುತ್ತಾರೆ’ ಎಂದು ಜಿಲ್ಲಾ ಥ್ರೋಬಾಲ್ ಅಸೋಸಿಯೇಷನ್ ಅಧ್ಯಕ್ಷ ಆರ್.ಆರ್.ಕುಲಕರ್ಣಿ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು