ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಒಬಿಸಿಗೂ ಅನುದಾನ ಬಳಕೆ ಖಾತರಿ: ಸಚಿವ ಕೆ. ರಾಜಣ್ಣ

Published 17 ಜನವರಿ 2024, 4:42 IST
Last Updated 17 ಜನವರಿ 2024, 4:42 IST
ಅಕ್ಷರ ಗಾತ್ರ

ತುಮಕೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿ ಸಲುವಾಗಿ ಜಾರಿಗೆ ತಂದಿರುವ ಎಸ್‌ಸಿಪಿ, ಟಿಎಸ್‌ಪಿಗೆ ಸಂಬಂಧಿಸಿದ ಕಾಯ್ದೆ ಮಾದರಿಯಲ್ಲೇ ಹಿಂದುಳಿದ ವರ್ಗಗಳ ಅನುದಾನ ಬಳಕೆಗೂ ಜಾರಿಗೊಳಿಸುವ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಪ್ರತಿಪಾದಿಸಿದರು.

ನಗರದಲ್ಲಿ ಮಂಗಳವಾರ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಒಕ್ಕೂಟದ ದಶಮಾನೋತ್ಸವ ಹಾಗೂ ಕೆ.ಎನ್.ರಾಜಣ್ಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಹಿಂದುಳಿದವರ ಅನುದಾನ ಬಳಕೆ ಖಾತರಿ ಕುರಿತು ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸಮಸ್ಯೆಯಾಗುತ್ತಿದೆ. ಬಾಡಿಗೆ ಕಟ್ಟಡಗಳನ್ನು ಪಡೆದು ಹಾಸ್ಟೆಲ್‌ಗಳನ್ನು ನಡೆಸಲು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಲಾಗುವುದು. ನಗರದ ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ದೇವರಾಜ ಅರಸು ಹೆಸರು ನಾಮಕರಣ ಮಾಡುವ ಕುರಿತು ಒಕ್ಕೂಟದಿಂದ ಮನವಿ ಸಲ್ಲಿಸಿದರೆ, ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಆ.20ರಂದು ದೇವರಾಜ ಅರಸು ಜನ್ಮದಿನದಂದು ಬುದ್ಧ, ಬಸವ, ಅಂಬೇಡ್ಕರ್‌, ಭಗೀರಥ, ವಾಲ್ಮೀಕಿ ಸೇರಿದಂತೆ ಎಲ್ಲ ಸಮುದಾಯದ ಪ್ರಮುಖರ ಜಯಂತಿಗಳನ್ನು ‘ದಾರ್ಶನಿಕರ ಜಯಂತಿ’ ಎಂದು ಆಚರಿಸಬಹುದು. ಇದಕ್ಕಾಗಿ ಎಲ್ಲ ಸಮುದಾಯದವರು ಸಂಘಟಿತರಾಗಬೇಕು ಎಂದು ಮನವಿ ಮಾಡಿದರು.

ಒಗ್ಗಟ್ಟಿನಿಂದ ರಾಜಕೀಯ ಅಧಿಕಾರ ಪಡೆದುಕೊಳ್ಳಬೇಕು. ದೇವರಾಜ ಅರಸು ದೂರದೃಷ್ಟಿಯಿಂದ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದರು. ಇದರ ಫಲವಾಗಿ ಪ್ರಸ್ತುತ ಅನೇಕ ಸಮುದಾಯಗಳು ಸಮಾಜದ ಮುನ್ನೆಲೆಗೆ ಬಂದಿವೆ. ಜೆಡಿಎಸ್‌, ಬಿಜೆಪಿಯವರು ಅಧಿಕಾರಕ್ಕೆ ಬಂದರೆ ತಳ ಸಮುದಾಯಗಳ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಎಲ್ಲರೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಉತ್ತಮ ಶಿಕ್ಷಣದಿಂದ ಸಮುದಾಯದ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಾಕುಮಾರ್‌, ‘ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಒಕ್ಕೂಟ ರಚಿಸಲಾಗಿದೆ. ದಶಮಾನೋತ್ಸವದ ಹೆಸರಿನಲ್ಲಿ ಎಲ್ಲರನ್ನು ಜಾಗೃತಗೊಳಿಸುವ ಕೆಲಸವಾಗುತ್ತಿದೆ. ಸರ್ಕಾರ ಹಿಂದುಳಿದ ವರ್ಗದವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್‌, ವಿವಿಧ ಸಮುದಾಯಗಳ ಮುಖಂಡರಾದ ಶಿವಣ್ಣ ಮಲ್ಲಸಂದ್ರ, ಮೈಲಪ್ಪ, ಟಿ.ಆರ್‌.ಆಂಜಿನಪ್ಪ, ಅಜಯ್‌ಕುಮಾರ್‌, ಗುರುಪ್ರಸಾದ್‌, ಪಿ.ಮೂರ್ತಿ, ವೆಂಕಟಸ್ವಾಮಿ, ಪಾಪಣ್ಣ, ಬಲರಾಮಯ್ಯ, ಕೊಟ್ಟ ಶಂಕರ್‌, ಎಸ್‌.ನಾಗಣ್ಣ, ಮಂಜೇಶ್‌, ಹೆಬ್ಬೂರು ಶ್ರೀನಿವಾಸ್, ಹೆಬ್ಬೂರು ಶ್ರೀನಿವಾಸಮೂರ್ತಿ, ನಯಾಜ್‌ ಅಹ್ಮದ್‌ ಮೊದಲಾದವರು ಭಾಗವಹಿಸಿದ್ದರು.

ಪ್ರಮುಖ ಹಕ್ಕೊತ್ತಾಯಗಳು

  • ಲೋಕಸಭಾ ಚುನಾವಣೆಗೆ ಮುನ್ನ ಜಾತಿ ಗಣತಿಯ ವರದಿ ಸ್ವೀಕರಿಸಬೇಕು. ವರದಿ ಆಧಾರದ ಮೇಲೆ ಬಜೆಟ್‌ನಲ್ಲಿ ಕಾರ್ಯಕ್ರಮ ಜಾರಿಗೊಳಿಸಬೇಕು.

  • ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ನಿರ್ದೇಶಕರ ನೇಮಕದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕು.

  • ವಿಧಾನ ಪರಿಷತ್ ಸದಸ್ಯರ ಆಯ್ಕೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಲ್ಲಿ ಸಮುದಾಯದ ಅರ್ಹರನ್ನು ಪರಿಗಣಿಸಬೇಕು.

  • ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ವಿದ್ಯಾರ್ಥಿ ನಿಲಯಗಳ ನಿರ್ಮಾಣ. ‌

  • ತುಮಕೂರು ವಿ.ವಿಯಲ್ಲಿ ದೇವರಾಜ ಅರಸು ಹೆಸರಲ್ಲಿ ಅಧ್ಯಯನ ಪೀಠ ತೆರೆಯಬೇಕು. ಶೈಕ್ಷಣಿಕ ಬ್ಲಾಕ್‌ ಒಂದಕ್ಕೆ ಅರಸು ಹೆಸರಿಡಬೇಕು.

  • ‌ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ದೇವರಾಜ ಅರಸು ಹೆಸರು ನಾಮಕರಣ ಮಾಡಬೇಕು.

  • ನಗರದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಿಸಬೇಕು.

  • ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮುದಾಯದ ಸಂಘಟನೆಗೆ ಶ್ರಮಿಸಿದವರನ್ನು ಆಯ್ಕೆ ಮಾಡಬೇಕು.

  • ದೇವರಾಜ ಅರಸು ಹುಟ್ಟೂರಿನ ನಿವಾಸ ಸಮಾಧಿ ಸ್ಥಳವನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಿ ಸಂರಕ್ಷಿಸಬೇಕು.

  • ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ಶಿಷ್ಯ ವೇತನ ವಿತರಿಸಬೇಕು. ಪದವಿವರೆಗೆ ಉಚಿತವಾಗಿ ಶಿಕ್ಷಣ ನೀಡಬೇಕು.

  • ತುಮಕೂರು ವಿ.ವಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಿಸಬೇಕು.

  • ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಟೆಂಡರ್‌ನಲ್ಲೂ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಬೇಕು.

  • ಎಸ್‌ಸಿಪಿ ಟಿಎಸ್‌ಪಿ ಮಾದರಿಯ ಕಾಯ್ದೆಯನ್ನು ಹಿಂದುಳಿದ ವರ್ಗಗಳ ಅನುದಾನ ವಿನಿಯೋಗಕ್ಕೂ ಜಾರಿಗೊಳಿಸಬೇಕು.

ಅಸಮಾಧಾನ; ಗೈರು

ಹಿಂದುಳಿದ ವರ್ಗಗಳ ಒಕ್ಕೂಟದಲ್ಲಿ ಅಸಮಾಧಾನ ಮುನ್ನೆಲೆಗೆ ಬಂದಿದ್ದು ಕೆಲವು ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಹಾಗೂ ಕುರುಬ ಸಮುದಾಯದ ಪಿ.ಕೆಂಪರಾಜು ಉಪಾಧ್ಯಕ್ಷ ಹಾಗೂ ಗೊಲ್ಲ ಸಮುದಾಯದ ಮುಖಂಡ ಚಂದ್ರಶೇಖರಗೌಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಲಿಜ ಸಮುದಾಯದ ಎಸ್.ಟಿ.ಶ್ರೀನಿವಾಸ್ ಜಿ.ಎಂ.ಸಣ್ಣಮುದ್ದಯ್ಯ ಇತರ ಪ್ರಮುಖರು ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT