ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷದಲ್ಲಿ 15 ಮಂದಿ ಸಾವು

ಅವೈಜ್ಞಾನಿಕ ರಸ್ತೆ ಕಾಮಗಾರಿ: ಅಪಘಾತ ಹೆಚ್ಚಳದಿಂದ ನಾಗರಿಕರ ಆತಂಕ
Last Updated 22 ಮಾರ್ಚ್ 2022, 4:32 IST
ಅಕ್ಷರ ಗಾತ್ರ

ಪಾವಗಡ: ಅವೈಜ್ಞಾನಿಕ ರಸ್ತೆ ಕಾಮಗಾರಿ, ಸಂಚಾರ ನಿಯಮಗಳ ಪಾಲನೆ ಮಾಡದಿರುವ ಕಾರಣ ತಾಲ್ಲೂಕಿನ ತುಮಕೂರು–ಬಳ್ಳಾರಿ ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ರಾಜವಂತಿ ಕೆರೆ, ಪಳವಳ್ಳಿ ಕಟ್ಟೆ, ನಾಗಲಮಡಿಕೆ ಕ್ರಾಸ್ ಸಮೀಪ ಹೆಚ್ಚಿನ ಅಪಘಾತಗಳು ಸಂಭವಿಸಿವೆ. 2019ರಿಂದ ಇಲ್ಲಿಯವರೆಗೆ ಈ ಮೂರು ಸ್ಥಳಗಳಲ್ಲಿಯೇ 18 ಅಪಘಾತಗಳು ಸಂಭವಿಸಿವೆ. 15 ಮಂದಿ ಮೃತಪಟ್ಟಿದ್ದಾರೆ. 25ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.

ತುಮಕೂರು ರಸ್ತೆಯ ರಾಜವಂತಿ ಕೆರೆ, ಕಟ್ಟೆ ಹೆಚ್ಚು ಅಪಘಾತ ಸಂಭವಿಸುವ ಸ್ಥಳ. ಪಟ್ಟಣದ ಚಳ್ಳಕೆರೆ ಕ್ರಾಸ್‌ನಿಂದ ನಾಗಲಮಡಿಕೆ ಕ್ರಾಸ್ ಪ್ರದೇಶ ಮತ್ತೊಂದು ಅಪಘಾತ ವಲಯ. ಮೂರು ದಿನಗಳ ಹಿಂದೆ ಬಸ್ ಅಪಘಾತ ನಡೆದ ಪಳವಳ್ಳಿ ಕಟ್ಟೆ ಪ್ರದೇಶದಲ್ಲಿ ಮೂರು ವರ್ಷಗಳಲ್ಲಿ 5ಕ್ಕೂ ಹೆಚ್ಚಿನ ಅಪಘಾತ ಸಂಭವಿಸಿ 9 ಮಂದಿ ಮೃತಪಟ್ಟಿದ್ದಾರೆ.

ಇತ್ತೀಚೆಗೆ ತುಮಕೂರು–ಕಲ್ಯಾಣದುರ್ಗ ಮಾರ್ಗದ ಕಾಮಗಾರಿ ನಡೆಸಿದ ಸಂಸ್ಥೆಯವರು ಕೆರೆಗಳ ಬಳಿ ಸಮರ್ಪಕ ತಡೆಗೋಡೆ ನಿರ್ಮಿಸಿಲ್ಲ. ಪಳವಳ್ಳಿ ಕಟ್ಟೆ ಬಳಿ ನಡೆದ ಅಪಘಾತದಲ್ಲಿ ಬಸ್ ಕಂದಕಕ್ಕೆ ಉರುಳಿದ್ದರೆ ಹೆಚ್ಚಿನ ಅವಘಡ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಕಟ್ಟೆಯಿಂದ ಕೆಳಗೆ ಉರುಳದೆ ನಿಂತಿದೆ. ಇದೇ ಮಾರ್ಗದಲ್ಲಿ ಕೆಲ ದಿನಗಳ ಹಿಂದೆ ಖಾಸಗಿ ಬಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದರು.

ಕಾಮಗಾರಿ ನಡೆಸಿದ ಸಂಸ್ಥೆಯವರು ಕೆರೆ, ಕಟ್ಟೆಗಳ ಬಳಿ ಗುಣಮಟ್ಟದ ತಡೆಗೋಡೆ ನಿರ್ಮಿಸಬೇಕು. ಜೊತೆಗೆ ತಿರುವುಗಳನ್ನು ಕಡಿಮೆ ಮಾಡದೆ ಬೇಕಾಬಿಟ್ಟಿ ರಸ್ತೆ ನಿರ್ಮಿಸಿರುವುದು ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ. ಪಳವಳ್ಳಿ ಕಟ್ಟೆ ಆರಂಭದಲ್ಲಿ ವೇಗವಾಗಿ ಬರುವ ವಾಹನಗಳು ರಸ್ತೆ ಏರುಪೇರಿನಿಂದ ನಿಯಂತ್ರಣ ತಪ್ಪುತ್ತವೆ.

ಕೆಲವು ದಿನಗಳ ಹಿಂದೆ ಕಣಿವೆ ಬಳಿ ರಸ್ತೆ ವಿಭಜಕಕ್ಕೆ ಟ್ಯಾಂಕರ್ ಡಿಕ್ಕಿಯಾಗಿ 1,200 ಲೀಟರ್ ಇಂಧನ ರಸ್ತೆ ಮೇಲೆ ಹರಿದಿತ್ತು. ರಾತ್ರಿ ವೇಳೆಯಾದ್ದರಿಂದ ಅನಾಹುತ ತಪ್ಪಿದೆ. ಕಣಿವೆ ಬಳಿ ಏಕಾಏಕಿ ರಸ್ತೆ ವಿಭಜಕ ಆರಂಭವಾಗುವುದರಿಂದ ರಾತ್ರಿವೇಳೆ ರಸ್ತೆ ವಿಭಜಕ ಕಾಣುವುದಿಲ್ಲ ಎಂಬುದು ಚಾಲಕರ
ದೂರು.

ಎಸ್‌ಎಸ್‌ಕೆಪಿಯು ಕಾಲೇಜಿನವರೆಗೆ ರಸ್ತೆ ವಿಭಜಕ ಅಳವಡಿಸಿ ಸಿಗ್ನಲ್ ಲೈಟ್, ಸೂಚನಾ ಫಲಕ ಅಳವಡಿಸಿ ವಿಭಜಕ ಆರಂಭವಾಗುವ ಸ್ಥಳದಲ್ಲಿ ರಸ್ತೆ ಉಬ್ಬು ನಿರ್ಮಿಸಿದರೆ ಅಪಘಾತಗಳನ್ನು ತಡೆಯಬಹುದು ಎಂಬುದು ಸಾರ್ವಜನಿಕರು, ತಜ್ಞರ ಅಭಿಪ್ರಾಯ. ರಾಜ್ಯ ಹೆದ್ದಾರಿಗಳ ಸ್ಥಿತಿಯೇ ಹೀಗಾದರೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿ ಹೇಳತೀರದು.

‘ಅಪಘಾತ ವಲಯಗಳಲ್ಲಿ ಸೂಚನಾ ಫಲಕ ಅಳವಡಿಸಿಲ್ಲ. ಅವೈಜ್ಞಾನಿಕ ಕಾಮಗಾರಿಗಳಿಂದವಾಹನಗಳು ಕೆಲವೊಮ್ಮೆ ಚಾಲಕನ ನಿಯಂತ್ರಣಕ್ಕೆ ಸಿಗುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ’ ಎಂದುಪಳವಳ್ಳಿ ಗ್ರಾಮ ಪಂಚಾಯಿತಿ ಸದಸ್ಯಪಿ.ಬಿ. ದಿನೇಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT