ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,500 ಮನೆ ನಿರ್ಮಾಣ

ಆಶ್ರಯ ಸಮಿತಿಗೆ ನೂತನ ಸದಸ್ಯರ ನೇಮಕ
Last Updated 11 ಸೆಪ್ಟೆಂಬರ್ 2020, 15:57 IST
ಅಕ್ಷರ ಗಾತ್ರ

ತುಮಕೂರು: ವಸತಿ ಇಲಾಖೆಯು ನಗರದಲ್ಲಿ 2,500 ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡಿದೆ. ಈಗ ನೇಮಕವಾಗಿರುವ ಆಶ್ರಯ ಸಮಿತಿಯ ಸದಸ್ಯರು ಶೀಘ್ರ ಫಲಾನುಭವಿಗಳನ್ನು ಆಯ್ಕೆಮಾಡಿ, ಜಾಗ ಗೊತ್ತುಮಾಡಿ, ಸಮಿತಿಗೆ ಪಟ್ಟಿ ನೀಡುವಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

‌ನಗರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ತುಮಕೂರು ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಗೆ ನೇಮಕವಾಗಿರುವ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದಲ್ಲಿ 22 ಸಾವಿರ ಜನರು ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಅರ್ಧದಷ್ಟುಪುನರಾವರ್ತನೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಮೊದಲು ಪಟ್ಟಿಯನ್ನುಪರಿಷ್ಕರಿಸಿ ಅರ್ಹರಿಗೆ ಮನೆಗಳು ತಲುಪುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಜಾತ್ಯತೀತ, ಧರ್ಮಾತೀತರಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಮಂಜೂರಾಗಿರುವ 2,500 ಮನೆಗಳ ಜತೆಗೆ, ಘೋಷಿತ ಕೊಳೆಗೇರಿಗಳಲ್ಲಿ ಈಗಾಗಲೇ ಕಚ್ಚಾ ಮನೆ ನಿರ್ಮಿಸಿಕೊಂಡು ವಾಸವಿರುವ ಜನರಿಗೆ ಅಲ್ಲಿಯೇ ಸುಮಾರು 1,450 ಪಕ್ಕಾ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಮುಂದಾಗಿದೆ. ಸಾಧ್ಯವಾದಷ್ಟು ನಗರದ ವಸಂತ ನರಸಾಪುರ, ತುಮಕೂರು ನಡುವೆ ಜಾಗ ಗುರುತಿಸಿ, ಬಡವರಿಗೆ ಮನೆ ನಿರ್ಮಿಸಿಕೊಟ್ಟರೆ, ಭವಿಷ್ಯದಲ್ಲಿ ದುಡಿಯುವ ಜನರಿಗೆ ಹತ್ತಿರದಲ್ಲೇ ಉದ್ಯೋಗ ದೊರೆಯಲಿದೆ ಎಂಬುದು ನಮ್ಮ ಆಲೋಚನೆ. ಈ ನಿಟ್ಟಿನಲ್ಲಿ ಜಾಗ ಗುರುತಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷಧನಿಯಾಕುಮಾರ್, ‘ಶಾಸಕರು ಆಶ್ರಯ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸದಸ್ಯರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮವಾಗಿ ಕೆಲಸ ಮಾಡಬೇಕು’ ಎಂದರು.

ಆಶ್ರಯ ಸಮಿತಿಗೆ ನೇಮಕವಾಗಿರುವ ಗಿರೀಶ್, ಸಿದ್ಧಗಂಗಯ್ಯ, ವಿನಯ್‌ಜೈನ್, ಸರೋಜಗೌಡ ಅವರನ್ನು ಅಭಿನಂದಿಸಲಾಯಿತು. ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಗಿರಿಜಾ, ಪ್ರಮುಖರಾದ ಕೊಪ್ಪಲ್‌ ನಾಗರಾಜು, ನಯಾಜ್‌ಅಹಮದ್, ಮಲ್ಲಸಂದ್ರ ಶಿವಣ್ಣ ಉಪಸ್ಥಿತರಿದ್ದರು.

ಕುಡಿಯುವ ನೀರಿಗೆ ಶಾಶ್ವತ ಪರಿಹಾರ

ತುಮಕೂರು ನಗರದ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ ಸುಮಾರು ₹25 ಕೋಟಿಯಲ್ಲಿ ಪ್ರಮುಖ ರಸ್ತೆಗಳ ಡಾಂಬರೀಕರಣ, ಉನ್ನತ ದರ್ಜೆಗೆರಿಸುವ ಕೆಲಸ ನಡೆಯತ್ತಿದೆ.ಅಲ್ಲದೆ ಅಮಾನಿಕೆರೆ, ಗಂಗಸಂದ್ರ ಕೆರೆ ಮತ್ತು ಮರಳೂರು ಕೆರೆಗಳಿಗೆ ಹೇಮಾವತಿ ನೀರು ತುಂಬಿಸಿ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಶೇ 80 ರಷ್ಟು ಅಮಾನಿಕೆರೆ ತುಂಬಿದೆ. ಮುಂದಿನ ದಿನಗಳಲ್ಲಿ ಉಳಿದ ಕೆರೆಗಳನ್ನು ತುಂಬಿಸಲಿದ್ದೇವೆ. ಇದರಿಂದ ತುಮಕೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗಲಿದೆ ಎಂದರು.

ಪುಡ್ ಸ್ಟ್ರೀಟ್ ನಿರ್ಮಾಣ

ತುಮಕೂರು ನಗರದ ಕೆಇಬಿ ರಸ್ತೆಯ ಇಕ್ಕೆಲ ಮತ್ತು ಬಿಜಿಎಸ್ ವೃತ್ತದ ಸಮೀಪ ಪುಡ್ ಸ್ಟ್ರೀಟ್ ವೆಂಡರ್ ಜೋನ್ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ. ಬಸ್ ನಿಲ್ದಾಣ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಮುಂದಿನ ಏಳೆಂಟು ತಿಂಗಳಲ್ಲಿ ನಗರದ ಎಲ್ಲ ರಸ್ತೆಗಳ ಅಭಿವೃದ್ದಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT