ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ತಾಲ್ಲೂಕಿನಲ್ಲಿ ಅಂತರ್ಜಲ ತೀವ್ರ ಕುಸಿತ

ಅಟಲ್ ಭೂಜಲ ಯೋಜನೆ: ಚಿಕ್ಕನಾಯಕನಹಳ್ಳಿಯಲ್ಲಿ ಪ್ರಾಯೋಗಿಕ ಅನುಷ್ಠಾನ
Last Updated 13 ಫೆಬ್ರುವರಿ 2021, 1:30 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ 41 ತಾಲ್ಲೂಕುಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಳಕ್ಕೆ ರೂಪಿಸಿರುವ ‘ಅಟಲ್ ಭೂಜಲ’ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.

ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ ಶಾಸಕರು ವಿಡಿಯೊ ಕಾನ್ಫರೆನ್ಸ್ ಮೂಲಕವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ಸಲಹೆಗಳನ್ನು ನೀಡಿದರು.

ಕಾಮಗಾರಿ ಅನುಷ್ಠಾನಕ್ಕೆ ಚಾಲನೆ ನೀಡಿದ ನಂತರ ಮಾಧುಸ್ವಾಮಿ ಮಾತನಾಡಿ, ‘ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಈಗ ರಾಜ್ಯದ ಇತರೆ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಮಳೆ ನೀರು ಸಂಗ್ರಹ, ಮಳೆ ನೀರು ವ್ಯರ್ಥವಾಗದೆ ಕೆರೆಗಳ ಕಡೆಗೆ ಹರಿದು ಹೋಗುವಂತೆ ಮಾಡುವುದು, ಹಿಂಗು ಗುಂಡಿಗಳ ನಿರ್ಮಾಣ, ನೀರಿನ ಆವಿಯನ್ನು ತಡೆಯುವ ಸಲುವಾಗಿಅರಣೀಕರಣ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ’ ಎಂದು ವಿವರಿಸಿದರು.

ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದು, ಹನಿ, ತುಂತರು ನೀರಾವರಿ ಪ್ರೋತ್ಸಾಹಿಸುವುದು, ಬೆಳೆ ಪದ್ಧತಿ ಅನುಸರಿಸುವುದು, ಕಡಿಮೆ ನೀರು ಬಳಸಿ ಬೆಳೆ ಬೆಳೆಯುವ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಮಾಡಲಾಗುತ್ತದೆ. ಈ ಯೋಜನೆ ಜಾರಿಯಾದ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟವನ್ನು ವಾರ, ತಿಂಗಳು ಲೆಕ್ಕದಲ್ಲಿ ಅಳತೆ ಮಾಡಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತದೆ ಎಂದು ಹೇಳಿದರು.

ಭೂ ಪ್ರದೇಶದಲ್ಲಿ ಇರುವ ನೀರಿನ ಒಟ್ಟು ಪ್ರಮಾಣದಲ್ಲಿ ಶೇ 2ರಷ್ಟು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಇರುವ ಅತ್ಯಲ್ಪ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆಮಾಡಿಕೊಳ್ಳಬೇಕು. ಅಂತರ್ಜಲ ಸಂರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಮರುಭೂಮಿಯಾಗಲಿದೆ ಎಂದು ಎಚ್ಚರಿಸಿದರು.

ಶಾಸಕ ಜ್ಯೋತಿಗಣೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸಣ್ಣ ನೀರಾವರಿ ಹಾಗೂ ಅತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯಂಜಯಸ್ವಾಮಿ, ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT