ಶುಕ್ರವಾರ, ಅಕ್ಟೋಬರ್ 22, 2021
30 °C
ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ

6 ಸಾವಿರ ಅ‍ಪೌಷ್ಟಿಕ ಮಕ್ಕಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ‘ಕೋವಿಡ್ ಮೂರನೇ ಅಲೆ ಬಂದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಸಮರ್ಥವಾಗಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜಾಗ್ರತೆವಹಿಸಲಾಗಿದೆ. ಜಿಲ್ಲೆಯಲ್ಲಿ 6 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗಿದೆ. ಅದರಲ್ಲಿ 2 ಸಾವಿರ ಮಕ್ಕಳು ಸೂಕ್ಷ್ಮ ಪರಿಸ್ಥಿತಿ ಎಂದು ಗುರುತಿಸಲಾಗಿದೆ. ಕೋವಿಡ್ ಪ್ರಕರಣ ಶೇ 2ರಷ್ಟು ಮೀರದಂತೆ ಎಚ್ಚರ ವಹಿಸಲಾಗುವುದು ಎಂದು
ತಿಳಿಸಿದರು.

ಸರ್ಕಾರದಿಂದ ಶಿರಾ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಪಟ್ಟಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಾಗಿದ್ದು, ಉದ್ಘಾಟನೆಯಾಗುತ್ತಿರುವ ಮೊದಲ ಘಟಕ ಇದಾಗಿದೆ. ಸುಮಾರು ₹ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ನಿಮಿಷಕ್ಕೆ 390 ಲೀಟರ್ ಆಮ್ಲಜನಕ ಉತ್ಪಾದನೆಯಾಗಲಿದೆ. ಇದರಿಂದ ಇಲ್ಲಿ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಆಮ್ಲಜನಕದ ಕೊರತೆಯಾಗುವುದಿಲ್ಲ ಎಂದು ಹೇಳಿದರು.

ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಮಾತನಾಡಿ, ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ, ಈಗ ಇಲ್ಲಿಯೇ ಉತ್ಪಾದನಾ ಘಟಕ ಪ್ರಾರಂಭಿಸಿರುವುದರಿಂದ ಇಲ್ಲಿ ಇರುವ ಎಲ್ಲಾ ಹಾಸಿಗೆಗಳಿಗೆ ಆಮ್ಲಜನಕದ ಸಂಪರ್ಕ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ. ಮಂಜುನಾಥ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್, ತಹಶೀಲ್ದಾರ್ ಎಂ. ಮಮತಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಮೋಹನ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್, ತಾಯಿ ಮತ್ತು ಮಗು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ. ಗೌಡ, ಡಾ.ಮಂಜುನಾಥ್, ಡಾ.ಸಿದ್ದೇಶ್ವರ್, ಪ್ರಕಾಶ್ ಗೌಡ, ಮುಡಿಮಡು ಮಂಜುನಾಥ್
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.