ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಳಿಯಾರು| ಪೂರ್ಣಗೊಳ್ಳುವ ಮುನ್ನವೇ ಕೊಚ್ಚಿ ಹೋದ ಅಡಿಪಾಯ

ತಗ್ಗು ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣ
Published 28 ಮೇ 2024, 14:37 IST
Last Updated 28 ಮೇ 2024, 14:37 IST
ಅಕ್ಷರ ಗಾತ್ರ

ಹುಳಿಯಾರು: ನಿರ್ಮಾಣ ಹಂತದಲ್ಲಿರುವ ಪಟ್ಟಣದ ಇಂದಿರಾ ಕ್ಯಾಂಟೀನ್‌ ಕಟ್ಟಡವನ್ನು ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವ ಕಾರಣ ಪೂರ್ಣಗೊಳ್ಳುವ ಮುನ್ನವೇ ಮಳೆ ನೀರು ಹರಿದು ಅಡಿಪಾಯದ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿದೆ.

ಬಹುದಿನದ ಬೇಡಿಕೆಯಾಗಿದ್ದ ಇಂದಿರಾ ಕ್ಯಾಂಟೀನ್‌ ಪಟ್ಟಣಕ್ಕೆ ಮಂಜೂರಾದ ದಿನಗಳಲ್ಲಿ ಜನರು ಖುಷಿ ಪಟ್ಟಿದ್ದರು. ಇನ್ನೇನು ಡಾ.ರಾಜ್‌ಕುಮಾರ್‌ ರಸ್ತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಕ್ಕದಲ್ಲಿ ಜಾಗ ಗುರುತಿಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಪಡೆದ ವ್ಯಕ್ತಿ ಭೂಮಿಯನ್ನು ಸಮತಟ್ಟು ಮಾಡುವಾಗ ನೀರು ಹರಿದು ಬರುವ ಜಾಗ ಎಂಬುದನ್ನು ಪರಿಗಣಿಸದೆ ಕಟ್ಟಡ ನಿರ್ಮಿಸಿದ್ದಾರೆ. ಅಡಿಪಾಯವನ್ನು ಎತ್ತರ ಮಾಡದೆ ತಗ್ಗು ಪ್ರದೇಶವನ್ನು ಸಮಗೊಳಿಸಿ ಸಿಮೆಂಟ್‌ ಕಾಂಕ್ರೀಟ್‌ ಹಾಕಿ ಬೇರೆ ಕಡೆಯಿಂದ ಕಟ್ಟಡ ನಿರ್ಮಾಣದ ಗೋಡೆಗಳನ್ನು ತಂದು ಕಟ್ಟಡಕ್ಕೆ ಜೋಡಿಸಿದ್ದಾರೆ. ನೀರು ಹರಿಯುವ ಚರಂಡಿ ಪಕ್ಕದಲ್ಲಿ ಅಡಿಪಾಯ ಎತ್ತರ ಮಾಡದೆ ನಿರ್ಮಿಸಿದ್ದಾರೆ.

ಇತ್ತೀಚೆಗೆ ಬಿದ್ದ ಮಳೆಗೆ ಪಕ್ಕದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ನೀರು ಹರಿದು ಕಾಂಪೌಂಡ್‌ ಕೊಚ್ಚಿ ಹೋಗಿ ಇಂದಿರಾ ಕ್ಯಾಂಟೀನ್‌ ಕಟ್ಟಡದ ಹಿಂಬದಿ ಹರಿದಿದೆ. ಇದರಿಂದ ಕ್ಯಾಂಟೀನ್‌ ನಿರ್ಮಾಣದ ಅಡಿಪಾಯದ ಒಂದು ಮೂಲೆಯ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಕಟ್ಟಡಕ್ಕೆ ಹಾನಿಯಾಗುವ ಸಂಭವವೂ ಹೆಚ್ಚಿದೆ.

ಡಾ.ರಾಜ್‌ಕುಮಾರ್‌ ರಸ್ತೆ ಕಡೆಯಿಂದ ಹರಿಯುವ ನೀರು ಸಂಪೂರ್ಣ ಕಟ್ಟಡದೊಳಗೆಲ್ಲ ತುಂಬಿ ಹರಿದಿದೆ. ಮುಂದೆ ಕ್ಯಾಂಟೀನ್‌ ಆರಂಭವಾದರೂ ನೀರು ಈ ಕಟ್ಟಡದಲ್ಲಿಯೇ ಹರಿದು ಹೋಗುತ್ತದೆ ಎಂದು ಗಾಳಿದಿಬ್ಬ ಜಯಣ್ಣ ಹೇಳುತ್ತಾರೆ.

ಒಂದು ಕಡೆ ಎಂಪಿಎಸ್‌ ಶಾಲಾ ಆವರಣ ಸೇರಿದಂತೆ ಸುತ್ತಮುತ್ತಲ ನೀರು ಹಾಗೂ ಡಾ.ರಾಜ್‌ಕುಮಾರ್‌ ರಸ್ತೆ ಕಡೆಯ ನೀರು ಹರಿದರೆ ಕಟ್ಟಡ ಸಂಪೂರ್ಣ ಜಲಾವೃತವಾಗುವ ಅತಂಕ ಎದುರಾಗಿದೆ. ಸಂಬಂಧಪಟ್ಟವರು ಕಟ್ಟಡ ಆರಂಭಕ್ಕೆ ಮುನ್ನವೇ ಎಚ್ಚೆತ್ತು ಅಡಿಪಾಯ ಎತ್ತರ ಮಾಡಿ ಕಟ್ಟಡ ನಿರ್ಮಿಸಿದರೆ ಸಾರ್ವಜನಿಕರ ಉಪಯೋಗಕ್ಕೆ ಬರುತ್ತದೆ. ಇಲ್ಲವಾದರೆ ಮಳೆ ಬಂದಾಗ ನೀರು ತುಂಬಿಕೊಂಡು ಸಂಕಷ್ಟ ಎದುರಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT