ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ: ಪಾಳು ಬಿದ್ದಿದೆ ಸುಸಜ್ಜಿತ ಕಟ್ಟಡ

Published 5 ಜನವರಿ 2024, 7:30 IST
Last Updated 5 ಜನವರಿ 2024, 7:30 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಬಳಿಯ ಜನತಾ ಕಾಲೊನಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ತಾಣವಾಗಿದೆ.

1997ರಲ್ಲಿ ₹2 ಕೋಟಿ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಿಸಲಾಗಿದೆ. 2014ರಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಮುಚ್ಚಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡ ಐದು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಒಂದು ವರ್ಷ ಹೊಳವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಇದೇ ಕಟ್ಟಡವನ್ನು ತಾತ್ಕಾಲಿಕವಾಗಿ ಆಸ್ಪತ್ರೆ ಕಟ್ಟಡಕ್ಕೆ ಬಳಸಿಕೊಳ್ಳಲಾಗಿತ್ತು. ಆನಂತರ 2016ರಿಂದ ಈವರೆಗೆ ಕಟ್ಟಡದ ಬಗ್ಗೆ ಸಂಬಂಧಿಸಿದ ಇಲಾಖೆ ಗಮನಹರಿಸಿಲ್ಲ. ಕಟ್ಟಡದ ಕಿಟಕಿ, ಬಾಗಿಲು ದುಷ್ಕರ್ಮಿಗಳ ಕೃತ್ಯದಿಂದ ಹಾಳಾಗಿವೆ. ಬಾಗಿಲು ಗೆದ್ದಲು ಹಿಡಿಯುತ್ತಿವೆ. ಸುಣ್ಣ, ಬಣ್ಣವಿಲ್ಲದೆ ಗೋಡೆ ಹಾಳಾಗುತ್ತಿವೆ. ಕಟ್ಟಡದೊಳಗೆ ಗಿಡ ಗಂಟಿ ಬೆಳೆದಿವೆ. ಮಳೆಬಂದಾಗ ಸೋರಿ ಕಟ್ಟಡದ ಚಾವಣಿ ಹಾಳಾಗಿದೆ.

ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಟ್ಟಡದ ಸುತ್ತ ಮದ್ಯದ ಖಾಲಿ ಬಾಟಲಿ, ಗಾಜಿನ ಚೂರು ಕಾಣಸಿಗುತ್ತವೆ.

ಒಂದೆಡೆ ಸರ್ಕಾರದ ಕೋಟ್ಯಂತರ ಮೌಲ್ಯದ ಸುಸಜ್ಜಿತ ಕಟ್ಟಡ ಹಾಳಾಗುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಕಟ್ಟಡ ಬಾಡಿಗೆ ಪಡೆದು ಮೂಲ ಸೌಕರ್ಯದ ಕೊರತೆ ನಡುವೆ ಹಾಸ್ಟೆಲ್‌ ನಡೆಸಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಇಂದಿಗೂ ಐದು ಕಡೆ ಖಾಸಗಿ ಕಟ್ಟಡಗಳಲ್ಲಿ ವಿದ್ಯಾರ್ಥಿ ನಿಲಯ ನಡೆಸಲಾಗುತ್ತಿದೆ. ಪಟ್ಟಣದ ಮಾರುತಿ ಆಸ್ಪತ್ರೆ ಪಕ್ಕದ ಎರಡು ಕಟ್ಟಡ, ಕೋರ್ಟ್‌ ಸಮೀಪದ ಮೂಡ್ಲಪಣ್ಣೆ ಬಳಿಯ ಕಟ್ಟಡ, ತಾಲ್ಲೂಕಿನ ಗೊಡ್ರಹಳ್ಳಿ ಖಾಸಗಿ ಕಟ್ಟಡ, ಪಟ್ಟಣದ ಕರ್ನಾಟಕ ಬ್ಯಾಂಕ್ ಹಿಂಭಾಗದ ಖಾಸಗಿ ಕಟ್ಟಡಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ನಡೆಸಲಾಗುತ್ತಿದೆ. ಈ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕೊಠಡಿಗಳಿಲ್ಲದೆ ಒಂದೇ ಕೊಠಡಿಯಲ್ಲಿ 10 ವಿದ್ಯಾರ್ಥಿಗಳು ವಾಸಿಸುವ ಸ್ಥಿತಿ ಇದೆ. ಶೌಚಾಲಯ, ಸ್ನಾನಕ್ಕಾಗಿ ಪೈಪೋಟಿ ಅನಿವಾರ್ಯವಾಗಿದೆ.

ವಿದ್ಯಾರ್ಥಿನಿಲಯ ಕಟ್ಟಡದ ಒಳಗಿನ ಸ್ಥಿತಿ
ವಿದ್ಯಾರ್ಥಿನಿಲಯ ಕಟ್ಟಡದ ಒಳಗಿನ ಸ್ಥಿತಿ
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ
ಜನರ ಹಣ ದುರುಪಯೋಗ
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡಗಳು ನಿರ್ಲಕ್ಷಕ್ಕೆ ಒಳಗಾಗಿ ಹಾಗೂ ಅಧಿಕಾರಿಗಳಿಗೆ ಕರ್ತವ್ಯದ ಬದ್ಧತೆ ಇಲ್ಲದೆ ಹಾಳಾಗಿವೆ. ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ. ಎಷ್ಟೋ ಜನರಿಗೆ ಸೂರಿಲ್ಲ. ಆದರೆ ಸರ್ಕಾರದ ಇಂತಹ ಎಷ್ಟೋ ಕಟ್ಟಡ ಉಪಯೋಗಿಸದೆ ಶಿಥಿಲವಾಗಿವೆ. ತ್ರಿಯಂಭಕಾರಾಧ್ಯ ಸ್ಥಳೀಯ ಮರುಬಳಕೆಗೆ ಮನವಿ ವಿದ್ಯಾರ್ಥಿಗಳ ದಾಖಲಾತಿ ಕೊರತೆ ಕಾರಣಕ್ಕೆ ಸರ್ಕಾರವೇ ಅದನ್ನು ಸ್ಥಗಿತಗೊಳಿಸಿತ್ತು. ಕಟ್ಟಡ ಸುಸಜ್ಜಿತವಾಗಿರುವುದರಿಂದ ಮರು ಬಳಕೆಗೆ ಗೃಹಸಚಿವರ ಶಿಫಾರಸ್ಸಿನ ಮೇರೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಬಂದ ತಕ್ಷಣ ಅದನ್ನು ಬಳಕೆ ಮಾಡಿಕೊಳ್ಳಲಾಗುವುದು. ಕಟ್ಟಡ ಸುಣ್ಣ ಬಣ್ಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿ.ಯಮುನಾ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಕೊರಟಗೆರೆ ಅನೈತಿಕ ಚಟುವಟಿಕೆಯ ತಾಣ ಸರ್ಕಾರ ಹಣ ವ್ಯಯಿಸಿ ನಿರ್ಮಿಸಿದ ಈ ವಿದ್ಯಾರ್ಥಿ ನಿಲಯದ ಕಟ್ಟಡ ಕೆಲವೇ ವರ್ಷ ಬಳಕೆಯಾಯಿತು. ಆನಂತರ ಇದನ್ನು ಪಾಳು ಬಿಡಲಾಗಿದೆ. ಈಗ ಇದು ಕುಡುಕರ ಹಾಗೂ ಅನೈತಿಕ ಚಟುವಟಿಕೆ ತಾಣವಾಗಿದೆ. ಅಬ್ದುಲ್ ರೆಹಮಾನ್ ಹೊಳವನಹಳ್ಳಿ ಸರ್ಕಾರಿ ಕಟ್ಟಡ ಪಾಳು ಬಿದ್ದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ಸೂಕ್ತಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಟ್ಟಡ ಸುಸ್ಥಿತಿಯಲ್ಲಿ ಇರುವುದನ್ನು ಪರಿಶೀಲಿಸಿ ಸಣ್ಣಪುಟ್ಟ ದುರಸ್ತಿ ಇದ್ದರೆ ಅದನ್ನು ಸರಿಪಡಿಸಿ ಸದ್ಬಳಕೆ ಮಾಡಿಕೊಳ್ಳಲು ತಿಳಿಸಲಾಗಿದೆ.  ಡಾ.ಜಿ.ಪರಮೇಶ್ವರ ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT