ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹40 ಸಾವಿರ ಹಣಕ್ಕೆ ಬೇಡಿಕೆ: ಎಸಿಬಿ ಬಲೆಗೆ ಸರ್ಕಾರಿ ಅಭಿಯೋಜಕಿ

Last Updated 30 ಏಪ್ರಿಲ್ 2019, 19:35 IST
ಅಕ್ಷರ ಗಾತ್ರ

ತುಮಕೂರು/ ಬೆಂಗಳೂರು: ಖುಲಾಸೆ ಆಗಿರುವ ಪ್ರಕರಣವೊಂದರಲ್ಲಿ ಮೇಲ್ಮನವಿ ಸಲ್ಲಿಸದಿರಲು ₹ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಿಪಟೂರು ಜೆಎಂಫ್‌ಸಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಪೂರ್ಣಿಮಾ ಹಾಗೂ ಬೆರಳಚ್ಚುಗಾರ ಎನ್‌.ಶರಣ್ ಕುಮಾರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ಎಪಿಪಿಗಳ ಅಕ್ರಮ ನೇಮಕಾತಿ ಹಗರಣದಲ್ಲೂ ಭಾಗಿಯಾದ ಆರೋಪ ಪೂರ್ಣಿಮಾ ಅವರ ಮೇಲಿದೆ.

ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಮರವನ್ನು ಮುಟ್ಟಿದ ಮಹಿಳೆ ಮೃತಪಟ್ಟಿದ್ದರು. ಬೇಜವಾಬ್ದಾರಿ ಆರೋಪದ ಮೇಲೆ ನಾಲ್ಕು ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. 2018ರಲ್ಲಿ ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಈ ಪ್ರಕರಣದ ಮೇಲ್ಮನವಿ ಸಲ್ಲಿಸದಿರಲು ನಾಲ್ಕು ಮಂದಿಯಿಂದ ತಲಾ ₹10 ಸಾವಿರಕ್ಕೆ ಪೂರ್ಣಿಮಾ ಬೇಡಿಕೆ ಇಟ್ಟಿದ್ದರು. ಇವರಲ್ಲಿ ಒಬ್ಬರು ಎಸಿಬಿಗೆ ದೂರು ನೀಡಿದ್ದರು.

₹20 ಸಾವಿರವನ್ನು ಪೂರ್ಣಿಮಾ ತಮ್ಮ ಬ್ಯಾಂಕ್ ಖಾತೆಗೆ ದೂರುದಾರರಿಂದ ವರ್ಗಾವಣೆ ಮಾಡಿಸಿಕೊಂಡಿದ್ದರು. ಉಳಿದ ಹಣವನ್ನು ಶರಣ್ ಕುಮಾರ್ ಪಡೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಡಿವೈಎಸ್‌ಪಿ ವಿ.ರಘುಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಆರೋಪಿಗಳನ್ನು ತುಮಕೂರು 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಮೇ 10ರವರೆಗೆ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.

ಅಕ್ರಮ ನೇಮಕ?: ಈ ಮಧ್ಯೆ, ಪೂರ್ಣಿಮಾ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ಅಕ್ರಮ ನೇಮಕದಲ್ಲೂ ಭಾಗಿಯಾದ ಆರೋಪಕ್ಕೆ ಒಳಗಾಗಿದ್ದಾರೆ. ಎಪಿಪಿ ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಇವರನ್ನು 42ನೇ ಆರೋ‍ಪಿ ಎಂದು ಹೆಸರಿಸಿದ್ದು, ಇವರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

1384 ರಿಜಿಸ್ಟರ್‌ ಸಂಖ್ಯೆಯಡಿ ಎಪಿಪಿ ಪರೀಕ್ಷೆ ಬರೆದಿರುವ ಪೂರ್ಣಿಮಾ ಅವರ ಅಸಲಿ ಉತ್ತರ ಪತ್ರಿಕೆಗಳನ್ನು ಬದಲಾಯಿಸಿ, ಬೇರೆ ಉತ್ತರ ಪತ್ರಿಕೆಗಳಲ್ಲಿ ಉತ್ತರ ಬರೆಸಿದ್ದು, ಅಕ್ರಮವಾಗಿ ನೇಮಕಗೊಳ್ಳಲು ಅನುಕೂಲವಾಗುವಂತೆ ಅಂಕಗಳನ್ನು ನೀಡಲಾಗಿದೆ. ಉತ್ತರ ‍ಪತ್ರಿಕೆಗಳನ್ನು ಬದಲಾಯಿಸಿ ಅಂಕಗಳನ್ನು ನೀಡಿರುವ ಸಂಗತಿಯನ್ನು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ ಎಂದೂ ದೊಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT