ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರರ ರಕ್ಷಣೆಗಾಗಿಯೇ ಎಸಿಬಿ?

48 ಗಂಟೆ ಕಾರಾಗೃಹ ವಾಸದಲ್ಲಿದ್ದ ಅಧಿಕಾರಿಗಳನ್ನು ಅಮಾನತು ಮಾಡದೆ ಇರುವುದು ಅಕ್ರಮ; ಪುಟ್ಟರಾಜು ಆರೋಪ
Last Updated 27 ಏಪ್ರಿಲ್ 2019, 16:57 IST
ಅಕ್ಷರ ಗಾತ್ರ

ತುಮಕೂರು: ‘ಲೋಕಾಯುಕ್ತ ದುರ್ಬಲಗೊಳಿಸಿ ತೆರೆದಿರುವ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಗಳನ್ನು ರಕ್ಷಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಭಾರತೀಯ ಕೃಷಿಕ ಸಮಾಜದಿಂದ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಸಮಾಜದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪುಟ್ಟರಾಜು ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಯಾವುದೇ ಸರ್ಕಾರಿ ನೌಕರ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಅರೆಸ್ಟ್ ಆಗಿ 48 ಗಂಟೆಗಳ ಕಾಲ ಕಾರಾಗೃಹ ವಾಸದಲ್ಲಿದ್ದರೆ ಅಂತಹ ವ್ಯಕ್ತಿಗಳನ್ನು ಎಸಿಬಿ ಇಲಾಖಾ ಅನುಮತಿ ನೀಡುವವರೆಗೂ ಸರ್ಕಾರಿ ನೌಕರಿಯಿಂದ ಅಮಾನತ್ತಿನಲ್ಲಿಡುವುದು ಮತ್ತು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಎನ್ನುವ ನಿಯಮವಿದೆ ಎಂದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ತುಮಕೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮರಿಯಪ್ಪ ಅವರನ್ನು ಜೈಲಿನಿಂದ ಹೊರಬಂದ ಕೂಡಲೇ ಸರ್ಕಾರಿ ಕೆಲಸದಲ್ಲಿ ಈಗಲೂ ಮುಂದುವರೆಸುತ್ತಿರುವುದು ಅಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದಪ್ಪ ಎಂಬ ರೈತನಿಂದ ಹಣ ಪಡೆಯುತ್ತಿದ್ದಾಗಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ವೆಂಕಟೇಶ್‌ ಅವರನ್ನು ಎಸಿಬಿ ಬಂಧಿಸಿ ನ್ಯಾಯಂಗ ಬಂಧನಕ್ಕೆ ವಶಪಡಿಸಿದ್ದರೂ ಅವರ ವಿರುದ್ಧವೂ ಸಹ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಆಗ್ರಹಿಸಿದರು.

ಯಾವುದೇ ರಾಜಕೀಯ ಬೆಂಬಲ ಇಲ್ಲದವರನ್ನು ಹಾಗೂ ಅಮಾಯಕ ಕೆಳಮಟ್ಟದ ಅಧಿಕಾರಿಗಳನ್ನು ಅಮಾನತುಗೊಳಿಸದೇ ರಕ್ಷಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಎಸಿಬಿ ಮೇಲಿನ ವಿಶ್ವಾಸ ಇಲ್ಲದಂತೆ ಆಗುತ್ತದೆ. ಹಾಗಾಗಿ ಸರ್ಕಾರಿ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಕಾರ್ಯಾಧ್ಯಕ್ಷ ಕೆ.ಪಾಂಡುರಂಗ, ಉಪಾಧ್ಯಕ್ಷ ರಾಜಣ್ಣಬಿ.ಕೆ.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ ಗೌಡಿಹಳ್ಳಿ, ನಿರ್ದೇಶಕ ಬಿ.ಎಂ.ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT