ಗುರುವಾರ , ಆಗಸ್ಟ್ 11, 2022
20 °C
ರೈತ ಸಂಘದ ವರಿಷ್ಠ ಗಂಗಾಧರ್.ಕೆ.ಟಿ. ಆರೋಪ

ಕೃಷಿ ಬಿಕ್ಕಟ್ಟು ಸೃಷ್ಟಿಸುತ್ತಿವೆ ಕಾಯ್ದೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ‘ದೇಶದ ರೈತರು ಸಮರ್ಥರಾಗಿಯೇ ಇದ್ದು, ಸರ್ಕಾರದ ಕಾಯ್ದೆಗಳಿಂದಾಗಿಯೇ ಅಸಹಾಯಕ ಮಟ್ಟ ತಲುಪುತ್ತಿದ್ದಾರೆ’ ಎಂದು ರಾಜ್ಯ ರೈತ ಸಂಘದ ವರಿಷ್ಠ ಗಂಗಾಧರ್.ಕೆ.ಟಿ. ಹೇಳಿದರು.

ನಗರದಲ್ಲಿ ಶುಕ್ರವಾರ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ಕೃಷಿ ಕಾಯ್ದೆಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವ್ಯವಸಾಯವು ದೇಶದ ಶೇ 70ರಷ್ಟು ಜನರಿಗೆ ಉದ್ಯೋಗ ಹಾಗೂ ಆಹಾರ ಒದಗಿಸುತ್ತಿದೆ. ಆದಾಗ್ಯೂ ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ಕಾರ್ಯ ಇದುವರೆಗೂ ಆಗಿಲ್ಲ. ಈ ನಿಟ್ಟಿನಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳು ಎಡವುತ್ತಿರುವುದು ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ ಎಂದರು.

ಕೃಷಿ ಸಂಸ್ಕೃತಿಯೇ ದೇಶದ ಸಂಸ್ಕೃತಿ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ದೇಶದಲ್ಲಿ ಇಂದು ಕೃಷಿ ಬಿಕ್ಕಟ್ಟು ಹೆಚ್ಚಾಗಲು ಸರ್ಕಾರದ ಕಾಯ್ದೆ, ಕಾನೂನುಗಳೇ ಕಾರಣ ಎಂದರು.

ರೈತ ಸಂಘದ ತಿಮ್ಲಾಪುರ ಶಂಕರಣ್ಣ ಮಾತನಾಡಿ, ‘ರೈತ ಸಂಘದ ಪ್ರಾರಂಭದಲ್ಲಿ ಇದ್ದ ಒಗ್ಗಟ್ಟು, ಸಂಘಟನೆ ಕ್ಷೀಣಿಸುತ್ತಿದೆ.  ಗ್ರಾಮಗಳಲ್ಲಿ ಇದ್ದ ಒಗ್ಗಟ್ಟನ್ನು ತಮ್ಮಿಷ್ಟದಂತೆ ಒಡೆಯಲು ರಾಜಕಾರಣಿಗಳು ಮುಂದಾಗಿದ್ದಾರೆ. ಹಾಗಾಗಿ ರೈತ ಸಂಘದ ಶಕ್ತಿ ಕುಂದುತ್ತಿದೆ. ರೈತರ ಸಾಮರ್ಥ್ಯವನ್ನು ಯುವಜನರಿಗೆ ತಿಳಿಸುವ ಅಗತ್ಯವಿದೆ’ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಬಿ.ಯೋಗೀಶ್ವರಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಒಂದಲ್ಲಾ ಒಂದು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರನ್ನು ಸಜೀವವಾಗಿ ಕೊಲ್ಲುತ್ತಿವೆ. ಇಂತಹ ಕಾಯ್ದೆಗಳಿಂದ ಮುಂದಿನ ದಿನಗಳಲ್ಲಿ ಜನರು ಜೀವನ ನಡೆಸುವುದೇ ಕಷ್ಟಕರವಾಗಲಿದೆ. ಕಾಯ್ದೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ ಕಾರ್ಯಗಾರ ನಡೆಸಲಾಗುತ್ತಿದೆ ಎಂದರು.

ಎಪಿಎಂಸಿ, ಕೃಷಿ ಹಾಗೂ ಅಗತ್ಯ ವಸ್ತುಗಳ, ವಿದ್ಯುತ್ ಖಾಸಗೀಕರಣ ಕಾಯ್ದೆಗಳ ಕುರಿತು ಗಂಗಾಧರ್.ಕೆ.ಟಿ. ಮಾಹಿತಿ ನೀಡಿದರು. ಬಿತ್ತನೆಬೀಜ ಉತ್ಪಾದನೆ, ಸಂಗ್ರಹಣೆ ಹಾಗೂ ಬೀಜ ಕಾಯ್ದೆ-2019ರ ಬಗ್ಗೆ ಅಮೃತ ಭೂಮಿ ಅಂತರರಾಷ್ಟ್ರೀಯ ಕೃಷಿ ಅಧ್ಯಯನ ಕೇಂದ್ರದ ಚುಕ್ಕಿ ನಂಜುಂಡಸ್ವಾಮಿ ಮಾಹಿತಿ ನೀಡಿದರು.

ಜಯಾನಂದಯ್ಯ ತಿಮ್ಲಾಪುರ, ನಂಜಾಮರಿ ತಡಸೂರು, ಷಡಕ್ಷರಯ್ಯ ಬೇಲೂರನಹಳ್ಳಿ, ಸಿದ್ದಪ್ಪ, ರಾಜಣ್ಣ ಬನ್ನಿಹಳ್ಳಿ, ಬಸವರಾಜು ಉಪ್ಪಿನಹಳ್ಳಿ, ಕುಮಾರಸ್ವಾಮಿ ಕರೀಕೆರೆ, ಚೇತನ್ ಗೌಡನಕಟ್ಟೆ, ಕಲ್ಲೇಗೌಡನಪಾಳ್ಯ ಕುಮಾರಸ್ವಾಮಿ, ಶ್ರೀಕಾಂತ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು