ಶನಿವಾರ, ಫೆಬ್ರವರಿ 27, 2021
30 °C
ಪುಣ್ಯ ಸ್ಮರಣೆಯಲ್ಲಿ ಶಿವಕುಮಾರ ಸ್ವಾಮೀಜಿ ಬದುಕು, ಸಾಧನೆ ನೆನಪಿಸಿಕೊಂಡ ಗಣ್ಯರು

ಬದುಕಿನುದ್ದಕ್ಕೂ ಬಸವ ತತ್ವ ಅನುಸರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಗುರುವಾರ ನಡೆದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆಯಲ್ಲಿ ನಾಡಿನ ಜನಪ್ರತಿನಿಧಿಗಳು, ಮಠಾಧೀಶರು ಶಿವಕುಮಾರ ಸ್ವಾಮೀಜಿ ಬದುಕು ಮತ್ತು ಸಾಧನೆಯ ಹಾದಿಯನ್ನು ನೆನಪಿಸಿಕೊಂಡರು.

12ನೇ ಶತಮಾನದ ಬಸವೇಶ್ವರರ ಕಾಯಕ, ದಾಸೋಹ ತತ್ವಗಳನ್ನು ಸ್ವಾಮೀಜಿ ಬದುಕಿನುದ್ದಕ್ಕೂ ಅಳವಡಿಸಿಕೊಂಡು ನಡೆದರು ಎಂದು ಗುಣಗಾನ ಮಾಡಿದರು. ಪುಣ್ಯಸ್ಮರಣೆ ಪ್ರಯುಕ್ತ ಇಡೀ ಮಠದ ಆವರಣ ಭಕ್ತರ ಕಲರವದಲ್ಲಿ ಮಿಂದಿತ್ತು. ಎತ್ತ ನೋಡಿದರೂ ಜನವೋ ಜನ.

‌ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಿನ ಜಾವ ರುದ್ರಾಭಿಷೇಕ ನೆರವೇರುವ ಮೂಲಕ ಪುಣ್ಯ ಸ್ಮರಣೆಗೆ ಅಧಿಕೃತವಾಗಿ ಚಾಲನೆ ದೊರೆಯಿತು. ಕ್ರಿಯಾ ಸಮಾಧಿಯ ಗದ್ದುಗೆಯಲ್ಲಿರುವ ಸ್ವಾಮೀಜಿ ಬೆಳ್ಳಿಮೂರ್ತಿ, ಶಿವಲಿಂಗಕ್ಕೆ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಕಟ್ಟಡದ ಒಳ ಮತ್ತು ಹೊರ ಆವರಣವನ್ನು ಅಲಂಕರಿಸಲಾಗಿತ್ತು.

ಪೂಜೆಗಳು ಪೂರ್ಣವಾದ ತರುವಾಯ ಮೆರವಣಿಗೆ ಆರಂಭವಾಯಿತು. ಸ್ವಾಮೀಜಿ ಭಾವಚಿತ್ರವನ್ನು ಸಣ್ಣ ರಥದಲ್ಲಿ ಇರಿಸಿ ವಸ್ತುಪ್ರದರ್ಶನ ಸ್ಥಳದವರೆಗೆ ಮೆರವಣಿಗೆ ಮಾಡಲಾಯಿತು. ವೀರಗಾಸೆ, ನಂದಿಧ್ವಜ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಕಲಾವಿದರು ಮೆರವಣಿಗೆಯನ್ನು ಕಳೆಗಟ್ಟಿಸಿದರು. ಮಠದ ಆವರಣದಲ್ಲಿ ಬಂದು ನಿಂತ ರಥವು ಸೆಲ್ಫಿ ಪ್ರಿಯರ ತಾಣವೂ ಆಗಿತ್ತು. ರಥಕ್ಕೆ ನಮಿಸುತ್ತಿದ್ದ ಬಹುತೇಕ ಭಕ್ತರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಬೇಗ ಬಂದ ಯಡಿಯೂರಪ್ಪ: ಸಭಾ ಕಾರ್ಯಕ್ರಮ 11ಕ್ಕೆ ನಿಗದಿ ಆಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 10.20ರ ವೇಳೆಗೆ ಮಠಕ್ಕೆ ಬಂದರು. ಗದ್ದುಗೆ ದರ್ಶನ ಪಡೆದು 30 ನಿಮಿಷ ಮುಂಚಿತವಾಗಿಯೇ ವೇದಿಕೆಗೆ ಬಂದರು. ನೆರೆದಿದ್ದ ಜನರು ಯಡಿಯೂರಪ್ಪ ಪರವಾಗಿ ಘೋಷಣೆಗಳನ್ನು ಕೂಗಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ, ‘ಯುಗ‍ಪುರುಷ ಬಸವಣ್ಣ ಅವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ಸ್ವಾಮೀಜಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅನ್ನ, ಅರಿವು ದಾಸೋಹದ ಜತೆಗೆ ಶಿಕ್ಷಣ, ಅಧ್ಯಾತ್ಮದಲ್ಲೂ ಬದುಕು ಸವೆಸಿದರು. ಎಲ್ಲ ಜಾತಿ, ಧರ್ಮಗಳ ಜನರಿಗೂ ಆಶ್ರಯ ನೀಡಿದರು. ಇಲ್ಲಿ ಕಲಿತವರು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ’ ಎಂದು ಹೇಳಿದರು.

‘ಸ್ವಾಮೀಜಿ ಭೌತಿಕವಾಗಿ ಇಲ್ಲ ಅಷ್ಟೇ. ಅವರ ಕೆಲಸಗಳು ಜೀವಂತವಾಗಿರುತ್ತವೆ. ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಿದ್ಧಲಿಂಗ ಸ್ವಾಮೀಜಿ ಮುನ್ನಡೆಸುತ್ತಿದ್ದಾರೆ’ ಎಂದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಎಲ್ಲಸಮುದಾಯಗಳ ಬಡ ಮಕ್ಕಳಿಗೆ ಶಿಕ್ಷಣವನ್ನು ಶಿವಕುಮಾರ ಸ್ವಾಮೀಜಿ ನೀಡಿದರು. ಅವರು ಎಂದಿಗೂ ನಾಡಿಗೆ ಸ್ಫೂರ್ತಿ. ಅವರಿಗೆ ಗೌರವ ತರುವ ರೀತಿಯಲ್ಲಿ ನಾವು ಕಾರ್ಯನಿರ್ವಹಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ವಾಮೀಜಿ ವಿಚಾರಗಳನ್ನು ಅಳವಡಿಸಿಕೊಳ್ಳುತ್ತೇವೆ. ಅವರ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ಧಲಿಂಗ ಸ್ವಾಮೀಜಿ, ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾತನಾಡಿದರು.

ಸಂಸದ ಜಿ.ಎಸ್.ಬಸವರಾಜು, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಂ, ರಾಜೇಶ್‌ಗೌಡ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಕೆಆರ್‌ಐಡಿಎಲ್‌ ಅಧ್ಯಕ್ಷ ರುದ್ರೇಶ್, ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ ಮತ್ತಿತರರು ವೇದಿಕೆಯಲ್ಲಿ ಇದ್ದರು.

‘ಸಂಸ್ಕೃತ ಕಲಿಸುವ ಮಠ ಮಾದರಿ’

‘ಎಲ್ಲರಿಗೂ ಶರಣು ಶರಣಾರ್ಥಿ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಪ್ರತಾಪ್‌ಚಂದ್ರ ಸಾರಂಗಿ, ‘ಸಿದ್ಧಗಂಗಾ ಮಠ ಪ್ರಾಚೀನ ಗುರುಕುಲವನ್ನು ನೆನಪಿಸುತ್ತದೆ’ ಎಂದು ಪ್ರಶಂಸಿಸಿದರು.

‘ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ನೀಡುವ ಮೂಲಕ ಶಿವಕುಮಾರ ಸ್ವಾಮೀಜಿ ದೊಡ್ಡವರು ಎನಿಸಿದ್ದಾರೆ. ಸಂಸ್ಕೃತವನ್ನು ಶಿಕ್ಷಣದಲ್ಲಿ ಇಲ್ಲಿ ಕಡ್ಡಾಯಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ಸಂಸ್ಕೃತ ಒಂದು ಭಾಷೆಯಲ್ಲ‌, ಅದು ನಮ್ಮ ಜಾಗತೀಕ ಸಂಸ್ಕೃತಿ’ ಎಂದರು.

‘ಸಂಸ್ಕೃತವನ್ನು ಕಲಿಸುತ್ತಿರುವುದು ದೊಡ್ಡ ಸಾಧನೆ. ಈ ಆಶ್ರಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ವಿಚಾರದಲ್ಲಿಯೂ ಮುಂದಿದೆ. ನಮ್ಮ ಪ್ರಾಚೀನ ಗುರುಕುಲವನ್ನು ನೆನಪಿಸುತ್ತದೆ’ ಎಂದು ಭಾಷಣದುದ್ದಕ್ಕೂ ಸಂಸ್ಕೃತದ ಶ್ಲೋಕಗಳನ್ನು ಉದಾಹರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು